ಹಿಂದಿ ಭಾಷೆ ತಿಳಿದಿರುವ ಮಕ್ಕಳಿಗಷ್ಟೇ ಹೊರ ರಾಜ್ಯ ಪ್ರವಾಸ ಭಾಗ್ಯ !! | ಚರ್ಚೆಗೆ ಗ್ರಾಸವಾದ ಇಲಾಖೆಯ ಆದೇಶದ ಕುರಿತು ಶಿಕ್ಷಣ ಸಚಿವರು ಹೇಳಿದ್ದೇನು ??

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ `ಒಂದು ಭಾರತ ಶ್ರೇಷ್ಠ ಭಾರತ’ ಕಾರ್ಯಕ್ರಮದಡಿಯಲ್ಲಿ ಪ್ರೌಢ ಶಾಲೆ ಮತ್ತು ಪಿಯು ವಿದ್ಯಾರ್ಥಿಗಳಿಗೆ ಹೊರ ರಾಜ್ಯಕ್ಕೆ ಪ್ರವಾಸಕ್ಕೆ ಕರೆದೊಯ್ಯುವ ಯೋಜನೆ ರೂಪಿಸಲಾಗಿದ್ದು, ಈ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಆದರೆ ಶಿಕ್ಷಣ ಇಲಾಖೆ ಹಿಂದಿ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಆದ್ಯತೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಮತ್ತೆ ವಿವಾದಕ್ಕೆ ಕಾರಣವಾಗಿದೆ. ಕನ್ನಡ ಪರ ಸಂಘಟನೆಗಳೂ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರ ಈ ಸೂಚನೆ ವಿಧಿಸದೇ ಇದ್ರೂ ಶಿಕ್ಷಣ ಇಲಾಖೆ ಈ ನಿರ್ಧಾರಕ್ಕೆ ಮುಂದಾಗಿರುವುದು ಇದೀಗ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂಬಂಧ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ, ಶಿಕ್ಷಣ ಇಲಾಖೆಯ ಹಿಂದಿ ಹೇರಿಕೆ ನೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆ ಬಂದವರಿಗಷ್ಟೇ ಅವಕಾಶ ಕೊಟ್ಟರೆ, ಕನ್ನಡ ವಿದ್ಯಾರ್ಥಿಗಳಿಗೆ ವಂಚಿಸಿದಂತಾಗುತ್ತದೆ. ಕರ್ನಾಟಕದಲ್ಲಿ ಕನ್ನಡ ಭಾಷೆ ಸಾರ್ವಭೌಮ ಭಾಷೆ. ಹಿಂದಿ ಭಾಷೆ ತಿಳಿಯದ ಕನ್ನಡದ ವಿದ್ಯಾರ್ಥಿಗಳಿಗೂ ಪ್ರವಾಸದ ಅವಕಾಶ ಕೊಡಬೇಕು. ಭಾಷೆಯಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭೇದ ಭಾವ ಬಿತ್ತುವ ಶಿಕ್ಷಣ ಇಲಾಖೆ ಕ್ರಮ ಸರಿಯಲ್ಲ. ಕೂಡಲೇ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಶಿಕ್ಷಣ ಸಚಿವರ ಸ್ಪಷ್ಟನೆ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಹೊರ ರಾಜ್ಯ ಪ್ರವಾಸಕ್ಕೆ ಹಿಂದಿ, ಇಂಗ್ಲಿಷ್‌ ಮಾತನಾಡುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಆದೇಶಿಸಿಲ್ಲ. ಈ ಗೊಂದಲಕ್ಕೆ ಕಾರಣವಾಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸ್ಪಷ್ಟಪಡಿಸಿದ್ದಾರೆ.

Leave A Reply

Your email address will not be published.