ವಯಸ್ಸು 30 ಆಗುತ್ತಿದ್ದಂತೇ ಇವನ್ನೆಲ್ಲಾ ಬಿಟ್ಬಿಡಿ!

ವಯಸ್ಸು 30. ಅತ್ತ ಚಿಕ್ಕಾವ್ರೂ ಅಲ್ಲದ, ಇತ್ತ ಹಿರಿಯರೂ ಅಲ್ಲದ ಇಬ್ಬಂದಿ ಸ್ಥಿತಿಯ ವಯಸ್ಸು. ಮದುವೆಯಾಗುವ ಆಸುಪಾಸಿನ ವಯಸ್ಸು ಆದುದರಿಂದ ಜವಾಬ್ದಾರಿಗಳ ಭಾರ ಒಮ್ಮೆಲೇ ತಲೆಯ ಮೇಲೆ ಬೀಳುವ ಪ್ರಾಯ. ಭಾವನಾತ್ಮಕವಾಗಿ ಬೆಳೆಯುವ, ಕೆರಿಯರ್‌ನಲ್ಲಿ ನಿಮ್ಮ ಬದುಕನ್ನು ಕಂಡುಕೊಳ್ಳುವ ಸಮಯದಲ್ಲಿ ,ಮುಂದೆ ಜೀವನದಾದ್ಯಂತ ಚೆನ್ನಾಗಿ ಉಳಿಯುವ ಗೆಳೆಯರನ್ನು ಕಂಡುಕೊಳ್ಳುವ ಕಾಲದ ಸಮಯದಲ್ಲಿ ನೀವು ಒಳ್ಳೆಯ ರೂಢಿಗಳನ್ನು ಬೆಳೆಸಿಕೊಳ್ಳುವುದು ಉತ್ತಮ. ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೆ ಮುಂದೆ ಇಡೀ ಜೀವನದಲ್ಲಿ ಚೆನ್ನಾಗಿರುತ್ತೀರಿ.

ಹಾಗಿದ್ದರೆ ಬಿಡಬೇಕಾದ ಕೆಟ್ಟ ರೂಢಿಗಳು ಯಾವುವು? ರೂಪಿಸಿಕೊಳ್ಳಬೇಕಾದ ಒಳ್ಳೆಯ ಅಭ್ಯಾಸಗಳು ಯಾವುವು? ಇಲ್ಲಿದೆ ನೋಡಿ.

ಬೆಳಗಿನ ಉಪಾಹಾರ : ನೀವು ತುಂಬಾ ಬ್ಯುಸಿಯಾಗಿದ್ದೀರಿ ಎಂದು ಬೆಳಗಿನ ಬ್ರೇಕ್‌ಫಾಸ್ಟ್ ತ್ಯಜಿಸುವುದು ಕೆಟ್ಟ ಅಭ್ಯಾಸ. ನೀವು ಉಪಾಹಾರವನ್ನು ತ್ಯಜಿಸಿದರೆ, ದೀರ್ಘಕಾಲದ ಉಪವಾಸವು ನಿಮ್ಮ ಚಯಾಪಚಯ ಮತ್ತು ಪ್ರತಿರೋಧ ಶಕ್ತಿಯನ್ನು ಮಂದಗೊಳಿಸುತ್ತದೆ. ಇದು ತೂಕ ಹೆಚ್ಚಾಗಲು ಮತ್ತು ಕೆಲವೊಂದು ಸೋಂಕುಗಳಿಗೆ ಕಾರಣವಾಗುತ್ತದೆ.

ಕೊಬ್ಬಿನ ಆಹಾರ : ನಿಮ್ಮ 30ನೇ ಹುಟ್ಟುಹಬ್ಬಕ್ಕೆ ಕಾಲಿಡುವ ಮೊದಲು, ನಿಮ್ಮ ಕಳಪೆ ಆಹಾರ ಪದ್ಧತಿಯನ್ನು ಬದಲಾಯಿಸುವುದು ಉತ್ತಮ. ನಿಮ್ಮ ಆಹಾರದಲ್ಲಿ ಹೆಚ್ಚು ವೈವಿಧ್ಯಮಯತೆಯನ್ನು ಅಳವಡಿಸಿ. ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಿ. ಮನೆಯಲ್ಲಿ ಬೇಯಿಸಿದ ಆರೋಗ್ಯಕರ ಊಟಕ್ಕೆ ಆದ್ಯತೆ ನೀಡಿ. ಸಹಜವಾಗಿ, ಕ್ವಿಕ್ ಆಹಾರವನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಅಗತ್ಯವಿಲ್ಲ. ಆದರೆ ಉತ್ತಮ ಆಹಾರ ಆಯ್ಕೆಗಳ ಪ್ರಜ್ಞಾಪೂರ್ವಕ ಆಯ್ಕೆಯನ್ನು ಮಾಡುವುದು ಅತ್ಯಗತ್ಯ.

ಕುಡಿತ : ಬಿಯರ್ ಸೇವಿಸುವುದು, ಇಪ್ಪತ್ತರ ವಯಸ್ಸಿನ ಗೆಳೆಯರಲ್ಲಿ ಇಂದು ಸಾಮಾನ್ಯವಾಗಿಬಿಟ್ಟಿದೆ. ಈ ಅಭ್ಯಾಸ ಈ ಪ್ರಾಯದಲ್ಲಿ ಸಾಮಾನ್ಯ. ಇಪ್ಪತ್ತರ ದಶಕದ ಉತ್ತರಾರ್ಧದಲ್ಲಿ ನಿಮ್ಮ ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಲು ಪ್ರಾರಂಭಿಸುವುದು ಉತ್ತಮ. ಇದು ಧೂಮಪಾನಕ್ಕೂ ಅನ್ವಯಿಸುತ್ತದೆ.

ಅನಾವಶ್ಯಕ ಜಗಳ ನಿವಾರಿಸಿಕೊಳ್ಳಿ ಇಪ್ಪತ್ತರಿಂದ ಮೂವತ್ತು ಬಿಸಿರಕ್ತದ ವಯಸ್ಸು. ಈ ಸಂದರ್ಭದಲ್ಲಿ ಗೆಳೆಯ ಗೆಳತಿಯರ ನಡುವೆ, ಕೊಲೀಗ್‌ಗಳ ನಡುವೆ ಬೇಡವೆಂದರೂ ಜಗಳ ಸೃಷ್ಟಿಸಿಕೊಳ್ಳುವ ಮನಸ್ಸಾಗುತ್ತದೆ. ಇದು ತಪ್ಪು. ನೀವು ಬೆಳೆದಂತೆ, ಹೆಚ್ಚಿನ ಸಮಸ್ಯೆಗಳನ್ನು ಸುಸಂಸ್ಕೃತ ಚರ್ಚೆಯ ಮೂಲಕ ಪರಿಹರಿಸಬಹುದು

ತಮ್ಮ 20ರಿಂದ ಮೂವತ್ತರ ಹರೆಯದಲ್ಲಿ ಇಂದು ಹೆಚ್ಚಿನ ಯುವತಿಯರು ಪ್ರೀತಿ ಪ್ರೇಮದಲ್ಲಿ ಬೀಳುತ್ತಾರೆ, ಆದರೆ ಮದುವೆಯಾಗಲು ಅಂಜುತ್ತಾರೆ. ಏಕೆಂದರೆ ಜೀವನದಲ್ಲಿ “ಅನುಭವಿಸಲು ಇನ್ನೂ ತುಂಬಾ ಇದೆ’ ಎಂದುಕೊಳ್ಳುತ್ತಾರೆ. ಮೂವತ್ತರ ಒಳಗೆ ಮದುವೆಯಾಗುವುದು ಲೈಂಗಿಕತೆಯ ದೃಷ್ಟಿಯಿಂದ ಒಳ್ಳೆಯದು. ಆದರೆ ಕೆರಿಯರ್ ದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ. ಆದರೂ ಈ ಬಗ್ಗೆ ನಿಮ್ಮ ಅನುಭವ ಆಧರಿಸಿ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.

ಫ್ಲೆಕ್ಸಿಬಿಲಿಟಿಯ ವಿಚಾರಕ್ಕೆ ಬಂದಾಗ ನಿಮ್ಮ ದೇಹ 30 ರಲ್ಲಿ ಹಿಂದಿನ ಥರ ಫ್ಲೆಕ್ಸ್ ಆಗಿರಲು ಮುನಿಯುತ್ತದೆ. ಬಾಡಿ ಸ್ಟಿಫ್ ಆಗುತ್ತದೆ. ಆದ ಕಾರಣ ಫ್ಲೆಕ್ಸಿಬಿಲಿಟಿ ಹೆಚ್ಚಿಸುವ ವ್ಯಾಯಾಮಗಳನ್ನು ಶುರುಮಾಡಿ ಕೊಳ್ಳುವುದು ಒಳ್ಳೆಯದು.

ಗೆಳೆತನ ಅಥವಾ ಕಚೇರಿ ಸಮಸ್ಯೆಗಳು ಬಂದಾಗ ಫೋನ್ ಸಂದೇಶದ ಮೂಲಕ ಅದನ್ನು ಪರಿಹರಿಸಲು ಯತ್ನಿಸುವುದು ಸಲ್ಲದು. ಫೋನ್ ಕರೆಯನ್ನು ತಪ್ಪಿಸುವ ಕೆಲಸ ವಾಸ್ತವವಾಗಿ ತುಂಬಾ ಕೆಟ್ಟ ಅಭ್ಯಾಸ. ಜರ್ನಲ್ ಆಫ್ ಕಪಲ್ ಮತ್ತು ರಿಲೇಶನ್‌ಶಿಪ್ ಥೆರಪಿಯಲ್ಲಿ ಪ್ರಕಟವಾದ ಒಂದು ಸಮೀಕ್ಷೆ ಪ್ರಕಾರ, ಪುರುಷರು ತಮ್ಮ ಸಂಗಾತಿಗೆ ದಿನಕ್ಕೆ ಹಲವಾರು ಬಾರಿ ಸಂದೇಶಗಳನ್ನು ಕಳುಹಿಸುತ್ತಾರೆ ಎಂದು ಬಹಿರಂಗಪಡಿಸಿದೆ. ವಿವಾದಗಳನ್ನು ಪರಿಹರಿಸುವುದು ಅಥವಾ ನಿರ್ಧಾರ ತೆಗೆದುಕೊಳ್ಳುವಂತಹ ವಿಷಯಗಳ ಬಗ್ಗೆ ಇದು ಕಡಿಮೆ ಪ್ರೊಡಕ್ಟಿವ್. ವೈಯಕ್ತಿಕವಾಗಿ ಸಂಭಾಷಣೆ ನಡೆದಾಗ ನೀವು ಹೆಚ್ಚು ಭಾವನಾತ್ಮಕವಾಗಿ ಸ್ಪಂದಿಸುತ್ತೀರಿ.

ಅತಿವೇಗವಾಗಿ ಕಾರು ಚಾಲನೆ, ಕುಡಿದು ವಾಹನ ಚಲಾಯಿಸುವುದು ಮತ್ತು ಚಾಲನೆ ಮಾಡುವಾಗ ಫೋನ್ ನೋಡುವುದು ಈಗ ಮಾತ್ರವಲ್ಲ, ಯಾವುದೇ ವಯಸ್ಸಿನಲ್ಲೂ ಸಲ್ಲದು. 30ನೇ ವಯಸ್ಸಿನಲ್ಲಿ ಇದು ಬಹಳ ಹಾನಿಕಾರಕ. ಇದು ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವುದು ಮಾತ್ರವಲ್ಲದೆ ಇತರರಿಗೂ ತೊಂದರೆ, ಸ್ಟಿಯರಿಂಗ್ ಹಿಂದೆ ಇರುವಾಗ ನಿಮ್ಮನ್ನು ಈ ವಿಷಯದಲ್ಲಿ ನಿಯಂತ್ರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಸುಮ್ಮನೇ ಬಸ್ಸಿನಲ್ಲಿ ಹೋಗುವುದು ಸೂಕ್ತ.

Leave A Reply

Your email address will not be published.