ಬರೋಬ್ಬರಿ ಆರು ಗಂಟೆಗಳ ಕಾಲ “ಮೊಟ್ಟೆ” ಇಟ್ಟ ಕೋಳಿ | ಇಟ್ಟದ್ದು ಎಷ್ಟು ಮೊಟ್ಟೆ ಗೊತ್ತೇ ?

ಕೋಳಿ ಮೊಟ್ಟೆ ಇಡುವುದು ಸಾಮಾನ್ಯ. ಮೊಟ್ಟೆ ಇಟ್ಟರೆ ಏನು ಮಹಾ ಸುದ್ದಿ ಅಂತ ನೀವು ಹೇಳಬಹುದು. ಆದರೆ ನಾವು ಇಲ್ಲಿ ಹೇಳುವ ಮಾಹಿತಿ ತಿಳಿದರೆ ಈಗ ಕೋಳಿ ಮೊಟ್ಟೆ ಇಡುವುದೂ ದೊಡ್ಡ ಸುದ್ದಿ ಎಂದು ನೀವು ಹೇಳಬಹುದು. ಹೌದು, ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಕೋಳಿಯೊಂದು ಬರೋಬ್ಬರಿ ಆರು ಗಂಟೆಗಳ ಕಾಲ ಮೊಟ್ಟೆ ಇಟ್ಟಿದೆ! ಈ ಘಟನೆ ಪಶುವೈದ್ಯಕೀಯ ತಜ್ಞರು ಸೇರಿದಂತೆ ಕೋಳಿ ಸಾಕಿದವರನ್ನು ಕೂಡಾ ದಂಗಾಗುವಂತೆ ಮಾಡಿದೆ.

ಕೇರಳದ ಆಲಪ್ಪುಳ ಜಿಲ್ಲೆಯ ದಕ್ಷಿಣ ಪಂಚಾಯತ್‌ನ ಚೆರ್ಕಟ್ಟಿಲ್ ಹೌಸ್‌ನ ಸಿ ಎನ್ ಬಿಜುಕುಮಾರ್ ಎಂಬುವವರಿಗೆ ಒಂದು ಕೋಳಿ ಸಾಕಿದ್ದರು. ಆ ಕೋಳಿಗೆ ಅವರು ಇಟ್ಟ ಹೆಸರೇ ಚಿನ್ನು, ಸಿ ಎನ್ ಬಿಜುಕುಮಾರ್ ಅವರ ಚಿನ್ನು ಎಂಬ ಕೋಳಿ ಭಾನುವಾರ ಬೆಳಗ್ಗೆ 8.30 ರಿಂದ ಮಧ್ಯಾಹ್ನ 2.30 ರ ನಡುವೆ 24 ಮೊಟ್ಟೆಗಳನ್ನು ಇಟ್ಟಿದೆ! ಅಂದರೆ ಬರೋಬ್ಬರಿ 6 ತಾಸು ಮೊಟ್ಟೆ ಇಟ್ಟಿದೆ ಕೋಳಿ!

ಹೀಗೆ ಸುದೀರ್ಘವಾಗಿ ಮೊಟ್ಟೆ ಇಟ್ಟ ಕೋಳಿ ಪಶು ವೈದ್ಯಕೀಯ ಪರಿಣಿತರನ್ನು ಸಹ ಅಚ್ಚರಿ ಪಡುವಂತೆ ಮಾಡಿದೆ. ಅದಕ್ಕೇ ಹೇಳಿದ್ದು ಈಗ ಕೋಳಿ ಮೊಟ್ಟೆ ಇಟ್ಟದ್ದೂ ದೊಡ್ಡ ಸುದ್ದಿ ಅಂತ!

ಅಂದಹಾಗೆ ಚಿನ್ನು ಕೋಳಿ BV380 ಹೈಬ್ರಿಡ್ ವಿಧಕ್ಕೆ ಸೇರಿದ ಕೋಳಿ ಅಂತೆ. ಭಾನುವಾರ ಬೆಳಗ್ಗೆ ಚಿನ್ನು ಕೋಳಿ ಕುಂಟುತ್ತಿರುವುದನ್ನು ಕಂಡು ಬಿಜು ಅವರು ಕೋಳಿಯ ಕಾಲಿಗೆ ಎಣ್ಣೆ ಹಚ್ಚಿದ್ದರಂತೆ. ಇದರ ನಂತರ ಶೀಘ್ರದಲ್ಲೇ, ಕೋಳಿ ಮೊಟ್ಟೆಗಳನ್ನು ಇಡಲು ಪ್ರಾರಂಭಿಸಿದೆ. ಎಷ್ಟು ಹೊತ್ತಾದರೂ ಮೊಟ್ಟೆ ಇಡುವುದನ್ನು ನಿಲ್ಲಿಸುತ್ತಲೆ ಇಲ್ಲ! ಈ ಸುದ್ದಿ ಬಹಳ ವೇಗವಾಗಿಯೇ ಸುತ್ತಮುತ್ತಲ ಏರಿಯಾಗಳಲ್ಲಿ ವೈರಲ್ ಆಯಿತು. ಜನ ಚಿನ್ನು ಕೋಳಿಯ ಪ್ರಸವ ಪ್ರಕ್ರಿಯೆ ವೀಕ್ಷಿಸಲು ತಂಡೋಪತಂಡವಾಗಿ ಧಾವಿಸಿ ಬಂದರು. ಕೋಳಿ ಮಾತ್ರ ನಿರಂತರವಾಗಿ ಮೊಟ್ಟೆ ಉದುರಿಸುತ್ತಲೇ ಇತ್ತು. ಮನೆಯವರು ಇಡೀ ದಿನ ಮೊಟ್ಟೆ ಹೆಕ್ಕುವುದರಲ್ಲಿ ಬಿಜಿ. ಸುತ್ತ ಸೇರಿದ ಜನ ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡು ವೈರಲ್ ಮಾಡುತ್ತಿದ್ದರು.

ಏಳು ತಿಂಗಳ ಹಿಂದೆ ಬ್ಯಾಂಕ್ ಸಾಲ ಪಡೆದು ಬಿಜು ಮತ್ತು ಅವರ ಪತ್ನಿ ಮಿನಿ ಒಟ್ಟು 23 ಕೋಳಿಗಳನ್ನು ಖರೀದಿ ಮಾಡಿದ್ದರಂತೆ. ಈ ಕೋಳಿಗಳ ಪೈಕಿ ಚಿನ್ನು ಕೋಳಿಯ ಒಂದಾಗಿತ್ತು. ಖರೀದಿ ಮಾಡುವಾಗ ಚಿನ್ನು ಕೋಳಿ ಇನ್ನೂ 8 ತಿಂಗಳ ಮರಿಕೋಳಿ ಆಗಿತ್ತಂತೆ.

ಪಶು ವೈದ್ಯಕೀಯ ಪರಿಣಿತರ ಪ್ರಕಾರ ಕೋಳಿಯೊಂದು ಬರೋಬ್ಬರಿ 6 ಗಂಟೆಗಳ ಕಾಲ ಮೊಟ್ಟೆ ಇಟ್ಟಿರುವುದು ಬಹಳ ಅಪರೂಪದ ಘಟನೆ. ಕೋಳಿ ಇಷ್ಟೊಂದು ಸಮಯ ಮೊಟ್ಟೆ ಇಡಲು ಏನು ಕಾರಣ? ಈಗಲೇ ಪಶು ವೈದ್ಯಕೀಯ ಪರಿಣಿತರಿಗೂ ಗೊತ್ತಿಲ್ವಂತೆ. ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ನಂತರವೇ ಚಿನ್ನು ಕೋಳಿಯ ಈ ವಿಚಿತ್ರ ವಿದ್ಯಮಾನಕ್ಕೆ ಕಾರಣ ಕಂಡುಹಿಡಿಯಬಹುದು ಎನ್ನುತ್ತಾರೆ ಪಶು ವೈದ್ಯಕೀಯ ಪರಿಣಿತರು.

ಇಂತಹುದೇ ವಿಚಿತ್ರ ಘಟನೆ ಇತ್ತೀಚಿಗೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿ ನಡೆದಿತ್ತು. ಅಲ್ಲಿ ಕೋಳಿಯು ಗೇರು ಬೀಜದ ಆಕಾರದ ಮೊಟ್ಟೆ ಮಲಗಿಸಿತ್ತು. ಏನೋ ಒಂದು ದಿನ ಹೀಗಾಯ್ತು ಅಂದು ಎರಡನೆಯ ದಿನಕ್ಕೆ ಮತ್ತೆ ಮನೆಯವರು ಕಾದು ಕೂತಿದ್ದರು. ಅವತ್ತು ಕೂಡ ಮತ್ತೆ ಗೋಡಂಬಿ ಆಕಾರದ ಮೊಟ್ಟೆಯನ್ನು ಇಟ್ಟಿತ್ತು ಆ ಕೋಳಿ.

Leave A Reply

Your email address will not be published.