ಕೋರ್ಟ್ ಮೆಟ್ಟಿಲೇರಿದ್ದ ಎರಡು ಕುಟುಂಬಕ್ಕೆ ಯಮುನಾ ನದಿ ಸ್ವಚ್ಛಗೊಳಿಸುವ ಕೆಲಸ ಕೊಟ್ಟ ನ್ಯಾಯಾಲಯ!

ಕೋರ್ಟ್ ಮೆಟ್ಟಿಲೇರಿದ ಕೆಲವೊಂದು ಪ್ರಕರಣದ ತೀರ್ಪಿನ ಬಳಿಕ ಕೇಸ್ ರದ್ದುಗೊಳಿಸಲು ಆರೋಪಿಗಳಿಗೆ ಯಾವುದಾದರೊಂದು ಶಿಕ್ಷೆ ನೀಡುವುದನ್ನು ನಾವು ಕೇಳಿದ್ದೇವೆ. ಆದ್ರೆ ಇಲ್ಲೊಂದು ಕಡೆ ವಿಚಿತ್ರವೆಂಬಂತೆ ಎಫ್‌ಐಆರ್ ದಾಖಲಾಗಿದ್ದ ಎರಡು ಕುಟುಂಬಕ್ಕೆ ನೀಡಿದ ಶಿಕ್ಷೆ ಕೇಳಿದ್ರೆ ಶಾಕ್ ಆಗೋದಂತೂ ಗ್ಯಾರಂಟಿ.

ಮಹಿಳೆಯೊಬ್ಬರ ಘನತೆಗೆ ಧಕ್ಕೆ ತಂದ ಸಂಬಂಧ ನವದೆಹಲಿಯ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಈ ಸಂಬಂಧ ಎರಡು ಎಫ್‌ಐಆರ್ ಗಳು ದಾಖಲಾಗಿದ್ದವು. ಇದೀಗ ಈ ಎರಡು ಕುಟುಂಬಗಳು ರಾಜಿ ಮಾಡಿಕೊಂಡಿದ್ದು, ಇದನ್ನು ಮನ್ನಿಸಿರುವ ನ್ಯಾಯಾಲಯ ಇವರುಗಳಿಗೆ ವಿಶೇಷ ಕೆಲಸವೊಂದನ್ನು ನೀಡಿದೆ. ಅದುವೇ ಕ್ಲೀನಿಂಗ್ ಕೆಲಸ!

ಹೌದು. ಈ ಕುಟುಂಬಸ್ಥರ ನಡುವಿನ ಜಗಳ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಕಳೆದ ಫೆಬ್ರವರಿಯಲ್ಲಿ ಒಟ್ಟು ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆದರೆ ಏಪ್ರಿಲ್ ನಲ್ಲಿ ರಾಜಿ ಮಾಡಿಕೊಂಡ ಈ ಎರಡು ಕುಟುಂಬಗಳ ಸದಸ್ಯರು ಇದನ್ನು ಹೈಕೋರ್ಟ್ ಗಮನಕ್ಕೆ ತಂದಿದ್ದರು.‌ ತಾವುಗಳು ರಾಜಿಯಾಗಿರುವ ಕಾರಣ ತಮ್ಮ ವಿರುದ್ಧದ ಕ್ರಿಮಿನಲ್ ಕೇಸ್ ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಇದಕ್ಕೆ ಒಪ್ಪಿಕೊಂಡಿರುವ ನ್ಯಾಯಾಲಯ ಕ್ರಿಮಿನಲ್ ಕೇಸ್ ರದ್ದುಗೊಳಿಸಿದೆ.

ಆದರೆ ಎರಡು ಕುಟುಂಬಗಳ ಸದಸ್ಯರು ದೆಹಲಿ ಜಲ ಮಂಡಳಿ ತಂಡದ ಜೊತೆ ಸೇರಿ 45 ದಿನಗಳವರೆಗೆ ಯಮುನಾ ನದಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚಿಸಲಾಗಿದೆ. ಒಟ್ಟಾರೆ ನ್ಯಾಯಾಲಯದ ಈ ನಿರ್ಧಾರ ಮೆಚ್ಚುವಂತದ್ದೇ ಆಗಿದೆ.

Leave A Reply

Your email address will not be published.