ಕುಮಾರಸ್ವಾಮಿ ಮತ್ತು ಶ್ರೀನಿವಾಸ್ ಗೌಡರಿಗೆ ಬದುಕಿದ್ದಾಗಲೇ ತಮ್ಮದೇ ತಿಥಿ ಊಟ ಮಾಡಿಸಲು ಹೊರಟ ಜೆಡಿಎಸ್ ಅಭಿಮಾನಿಗಳು !

ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ ಎಂಬ ಚರ್ಚೆಗಳು ಕಲಹಕ್ಕೆ ಕಾರಣವಾಗಿದೆ. ಶ್ರೀನಿವಾಸ್ ಬಿಜೆಪಿಗೆ ತಮ್ಮ ಮತ ನೀಡಿದ್ದಾರೆ. ಈ ಹಿನ್ನೆಲೆ ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು ಶ್ರೀನಿವಾಸ್ ಅವರ ತಿಥಿ ಕಾರ್ಡ್ ಹೊರಡಿಸಿದ್ದಾರೆ.

ಶಾಸಕ ಶ್ರೀನಿವಾಸ್ ಮತ್ತು ಕುಮಾರಸ್ವಾಮಿ ಬೆಂಬಲಿಗರ ನಡುವೆ ಇದೀಗ ತಿಥಿ ಕಾರ್ಡ್ ಯುದ್ಧ ಶುರುವಾಗಿದೆ. ನಿನ್ನೆ ಕುಮಾರಸ್ವಾಮಿ ಬೆಂಬಲಿಗರು ತಿಥಿ ಕಾರ್ಡ್ ಹೊರಡಿಸಿದ್ದರು. ಇಂದು ಶ್ರೀನಿವಾಸ್ ಅವರ ಬೆಂಬಲಿಗರು ತಿಥಿ ಕಾರ್ಡ್ ಹೊರಡಿಸಿದ್ದಾರೆ. ಎಸ್ ಆರ್ ಶ್ರೀನಿವಾಸ್ ಬೆಂಬಗಲಿಗರ ಪೇಜ್ ನಲ್ಲಿ ತಿಥಿ ಪೋಸ್ಟ್ ಹಾಕಲಾಗಿದೆ.

ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅಡ್ಡ ಮತದಾನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗರಂ ಆಗಿದ್ದರು. ಶನಿವಾರ ಬೆಳಗ್ಗೆ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಶ್ರೀನಿವಾಸ್​, ತಾಕತ್ತಿದ್ದರೆ ನನ್ನ ಕ್ಷೇತ್ರದಲ್ಲಿ ನನ್ನ ವಿರುದ್ಧ ಚುನಾವಣೆಗೆ ಬಂದು ಸ್ಪಧಿಸಿ ಗೆಲ್ಲಲಿ. ಅವನು ಗೆದ್ದರೆ ನನ್ನ ಜೀವನಪೂರ್ತಿ ಆತನ ಮನೆಯಲ್ಲೇ ಕೂಲಿ ಕೆಲಸ ಮಾಡುವೆ ಎಂದು ಓಪನ್​ ಚಾಲೆಂಜ್​ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಶ್ರೀನಿವಾಸ್​ ಪರ ಇವರ ಅಭಿಮಾನಿಗಳೂ ಪ್ರತಿಭಟನೆ ನಡೆಸಿದ್ದರು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಶ್ರೀನಿವಾಸ್​ ಹೆಸರಲ್ಲಿ ತಿಥಿ ಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಹೌದು. ಪ್ರಚಂಡ ಭೈರವ ಹೆಸರಿನಿಂದ ತಿಥಿ ಕಾರ್ಡ್ ಪೊಸ್ಟ್​ ಮಾಡಿದ್ದು, ಜೆಡಿಎಸ್ ಗ್ರೂಪ್​ಗಳಿಗೆ ಶೇರ್ ಮಾಡಲಾಗಿದೆ. ಜೂನ್​ 10ರಂದು ನಿಧನರಾಗಿದ್ದಾರೆ, ಜೂನ್​ 21ರಂದು ಸ್ವಕ್ಷೇತ್ರ ಗುಬ್ಬಿಯಲ್ಲಿ ಕೈಲಾಸ ಸಮಾರಾಧಾನೆ ನಡೆಯಲಿದೆ ಎಂದು ಬರೆಯಲಾಗಿದೆ. ಶ್ರೀನಿವಾಸ್​ರ ಅಭಿಮಾನಿಗಳು ಇದನ್ನು ನೋಡಿ ವಿಕೃತಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅತ್ತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೂ ಶ್ರದ್ದಾಂಜಲಿ ಕಾರ್ಡ್ ಸಲ್ಲಿಸಲಾಗಿದೆ. ಎಂಎಲ್‌ಎ ಶ್ರೀನಿವಾಸ್ ಫ್ರಾನ್ಸ್ ಪೇಜ್​ನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಪೋಸ್ಟರ್ ಹಾಕಲಾಗಿದ್ದು, ತಿಥಿ ಕಾರ್ಡ್‌ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಎಸ್.ಆರ್. ಶ್ರೀನಿವಾಸ್ ಬೆಂಬಲಿತ ಕಾರ್ಯಕರ್ತರು ಎಚ್.ಡಿ.ಕುಮಾರಸ್ವಾಮಿ ಅವರ ಕೈಲಾಸ ಸಮಾರಾಧನೆಯ ಪೋಸ್ಟರ್ ಮಾಡಿದ್ದು, ಬಿಡದಿ ತೋಟದಲ್ಲಿ ಜೂ. 22ರಂದು ವೈಕುಂಠ ಸಮಾರಾಧನೆ ಏರ್ಪಡಿಸಲಾಗಿದೆ. ದುಃಖತೃಪ್ತರು ರಾಧಿಕಾ ಕುಮಾರಸ್ವಾಮಿ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.

ದಿನೇ ದಿನೇ ಎಚ್ ಡಿಕೆ ಹಾಗೂ ಎಸ್.ಆರ್. ಶ್ರೀನಿವಾಸ್ ನಡುವೆ ವಾಗ್ದಾಳಿ ಹೆಚ್ಚುತ್ತಿದ್ದು, ಒಬ್ಬರನ್ನೊಬ್ಬರು ಏಕವಚನದಲ್ಲಿ ಟೀಕಿಸುವ ಹಂತಕ್ಕೆ ತಲುಪಿದೆ. ಒಂದೇ ಪಕ್ಷದವರಾಗಿ ಈ ರೀತಿ ನಡೆದುಕೊಳ್ಳುತ್ತಿರುವುದು ಪಕ್ಷದ ಹಿನ್ನೆಡೆಗೆ ಕಾರಣವಾಗಲಿದೆ ಎಂದು ರಾಜಕೀಯ ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.

Leave A Reply

Your email address will not be published.