ಮಂಗಳೂರು:’ನಮ್ಮವನನ್ನು ತೆಗೆದವ’ ಎನ್ನುತ್ತಲೇ ಉರುಳುತ್ತಿದೆ ಸಾಲು ಸಾಲು ಹೆಣ!! |ಹಳೆಯದನ್ನು ಮರೆತು ದಾಂಪತ್ಯ ಸುಖ ಕಾಣುವಾಗಲೇ ಬರ್ಬರ ಹತ್ಯೆಗೀಡಾದ ಟ್ಯಾಟೂ ರಾಜ ಅಲಿಯಾಸ್ ರಾಘವೇಂದ್ರ

ಮಂಗಳೂರು: ಹಳೆಯ ವೈಷಮ್ಯ, ಪ್ರಕರಣಗಳನ್ನೆಲ್ಲಾ ಮರೆತು ಹೊಸ ಜೀವನ ಪ್ರಾರಂಭಿಸಲು ಒಂದು ವರ್ಷದ ಹಿಂದೆ ಮದುವೆಯಾಗಿ ಗರ್ಭಿಣಿಯಾದ ಮುದ್ದಿನ ಹೆಂಡತಿಯ ಆಸೆ ಪೂರೈಸಲು ಆಕೆಗೆಂದು ಬೇಕರಿಯಿಂದ ತಿಂಡಿ ತರಲು ಹೊರಬಂದಾತ ಮರಳಿ ಮನೆ ಸೇರಿದ್ದು ಮಾತ್ರ ಮಚ್ಚಿನೇಟಿಗೆ ಜರ್ಜರಿತಗೊಂಡ ಮೃತದೇಹವಾಗಿ.

ಹೌದು. ಇತ್ತೀಚೆಗೆ ಬೈಕಂಪಾಡಿಯ ಮೀನಕಳಿಯ ಎಂಬಲ್ಲಿ ರಿವೇಂಜ್ ಗಾಗಿ ನಡೆದ ಕೊಲೆಯಲ್ಲಿ ಮೃತಪಟ್ಟ ಪಣಂಬೂರು ಪೊಲೀಸ್ ಠಾಣಾ ರೌಡಿ ಶೀಟರ್ ರಾಜಾ ಯಾನೇ ರಾಘವೇಂದ್ರನ ಮನೆಯಲ್ಲಿ ಇಂದಿಗೂ ಶೋಕ ಮಡುಗಟ್ಟಿದೆ. ಕೊಲೆಯಾದ ದಿನವೇ ಮಧ್ಯಾಹ್ನ ತನ್ನ ಮನೆಯಲ್ಲಿ ಮುದ್ದಿನ ಗರ್ಭಿಣಿ ಮಡದಿಯ ಹುಟ್ಟುಹಬ್ಬ ಆಚರಿಸಿ ಆಕೆಯ ಆಸೆಯಂತೆ ಬೇಕರಿಯ ತಿಂಡಿ ತರಲೆಂದು ಮನೆಯಿಂದ ಹೊರಬಂದಾತನ ಮೇಲೆ ಹಳೇ ಕೊಲೆಯೊಂದರ ಸೇಡು ತೀರಿಸಿಕೊಳ್ಳಲು ತಲವಾರು ದಾಳಿ ನಡೆದಿದ್ದು, ಗಂಭೀರ ಗಾಯಗೊಂಡ ರಾಘವೇಂದ್ರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಇನ್ನೇನು ಹಳೆಯ ಪ್ರಕರಣಗಳನ್ನು ಮರೆತು ಹೊಸ ಬದುಕು ಸಾಗಿಸಿ, ದಾಂಪತ್ಯ ಜೀವನದ ಸುಖ-ದುಃಖಗಳಲ್ಲಿ ಪಾಲು ಪಡೆಯಬೇಕೆಂದುಕೊಂಡವನ ಬಾಳಿನಲ್ಲಿ ಅದೊಂದು ಹಳೇ ಪ್ರಕರಣ ದುರಂತವನ್ನೇ ನಡೆಸಿಬಿಟ್ಟಿದೆ.

ಯಾರೀತ ರೌಡಿ ರಾಘವೇಂದ್ರ??
ಕಳೆದ ಮೂರು ವರ್ಷಗಳ ಹಿಂದೆ ಅಂದರೆ 2019ರಲ್ಲಿ ಸುರತ್ಕಲ್ ಸಮೀಪ ಸಂದೇಶ್ ಪೂಜಾರಿ ಎಂಬಾತನ ಕೊಲೆಯೊಂದು ನಡೆಯುತ್ತದೆ. ಈ ಪ್ರಕರಣದ ಪ್ರಮುಖ ಆರೋಪಿಯೇ ಈ ರಾಘವೇಂದ್ರ ಅಲಿಯಾಸ್ ಟ್ಯಾಟೂ ರಾಜ. ಮೈತುಂಬ ಟ್ಯಾಟೂ ಹಾಕಿಸಿಕೊಂಡ ಕಾರಣಕ್ಕೆ ರಾಘವೇಂದ್ರನನ್ನು ಹೀಗೆ ಕರೆಯಲಾಗುತ್ತಿತ್ತು. ಕುಡಿತದ ಅಮಲಿನಲ್ಲಿದ್ದ ಗೆಳೆಯರ ಮಧ್ಯೆ ಸಣ್ಣ ಮಟ್ಟಿನ ಭಿನ್ನಾಭಿಪ್ರಾಯ ಮೂಡಿ, ಮಾತಿಗೆ ಮಾತು ಬೆಳೆದು ಜೊತೆಗಿದ್ದ ಗೆಳೆಯ ಸಂದೇಶ್ ಪೂಜಾರಿ ಎಂಬಾತನನ್ನು ಕೊಲೆ ನಡೆಸಿದ್ದರು. ಈ ಪ್ರಕರಣದಲ್ಲಿ ರಾಘವೇಂದ್ರ ಒಂದು ವರ್ಷಗಳ ಕಾಲ ಮಂಗಳೂರು ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಬಂದಿದ್ದು, ಪಣಂಬೂರು ಠಾಣೆಯಲ್ಲಿ ಈತನ ಮೇಲೆ ರೌಡಿ ಶೀಟ್ ತೆರೆಯಲಾಗಿತ್ತು.

ಹೀಗೆ ಜಾಮೀನಿನ ಮೇಲೆ ಹೊರಬಂದಾತನೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ತನ್ನ ತಂದೆ ನಡೆಸುತ್ತಿದ್ದ ಟ್ರಾನ್ಸ್ ಪೋರ್ಟ್ ಸಂಸ್ಥೆಯೊಂದನ್ನು ತಾನೇ ಮುಂದೆ ನಿಂತು ಉಸ್ತುವಾರಿ ವಹಿಸಿಕೊಂಡು ನಡೆಸುತ್ತಿದ್ದ. ಇನ್ನಾದರೂ ರೌಡಿಸಂ ಫೀಲ್ಡ್ ಗೆ ಗುಡ್ ಬೈ ಹೇಳಿ ಹೊಸ ಜೀವನ ನಡೆಸುವ ಎಲ್ಲಾ ಲಕ್ಷಣಗಳು ಆತನಲ್ಲಿ ಕಂಡುಬಂದಿದ್ದರಿಂದ ಮನೆ ಮಂದಿ ಮಗನ ಮೇಲೆ ಭರವಸೆ ಇಟ್ಟಿದ್ದರು. ಆದರೆ ತಮ್ಮವನನ್ನು ಮುಗಿಸಿ ಖುಷಿಯಲ್ಲಿರುವ ಆತನ ಕಥೆ ಮುಗಿಸಲು ಸಂದೇಶ್ ಪೂಜಾರಿ ಗೆಳೆಯರ ತಂಡವೊಂದು ಪ್ಲಾನ್ ಮಾಡಿತ್ತು ಎನ್ನುವ ವಿಚಾರವನ್ನು ರಾಘವೇಂದ್ರ ಕನಸಲ್ಲೂ ಗ್ರಹಿಸಿರಲಿಲ್ಲ.

ಅಂತೆಯೇ ಮೊನ್ನೆಯ ದಿನ ಮುಹೂರ್ತ ಮಾಡಿದ್ದ ತಂಡವು ರಾತ್ರಿಯಾಗುತ್ತಲೇ ಏಕಾಂಗಿಯಾಗಿ ಸಿಕ್ಕ ರಾಘವೇಂದ್ರನಿಗೆ ರಸ್ತೆ ಬದಿಯಲ್ಲೇ ಮನಬಂದಂತೆ ತಲವಾರು ಬೀಸಿ ಪರಾರಿಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಜ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು.

ಆರೋಪಿಗಳ ಬಂಧನ-ಪೊಲೀಸ್ ಫೈರಿಂಗ್
ರಾಘವೇಂದ್ರನ ಕೊಲೆ ಪ್ರಕರಣವು ರಿವೇಂಜ್ ಗಾಗಿ ಎನ್ನುವ ಸುದ್ದಿ ಘಟನೆ ನಡೆದ ಕ್ಷಣದಿಂದಲೇ ಎಲ್ಲೆಡೆ ಸುದ್ದಿಯಾಗಿತ್ತು. ಇದೇ ಆಧಾರದಲ್ಲಿ ತನಿಖೆ ಕೈಗೆತ್ತಿಕೊಂಡ ಮಂಗಳೂರು ನಗರ ವ್ಯಾಪ್ತಿಯ ಪಣಂಬೂರು ಠಾಣಾ ಪೊಲೀಸರು ಅದಾಗಲೇ ಮೂಡುಶೆಡ್ಡೆ ನಿವಾಸಿ ಅರ್ಜುನ್ ಹಾಗೂ ಮನೋಜ್ ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಭಾಗಿಯಾಗಿರುವುದು ಗೊತ್ತಾಗುತ್ತಿದ್ದಂತೆ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ವಶಕ್ಕೆ ಪಡೆದ ಇಬ್ಬರನ್ನೂ ಜೀಪಿನಲ್ಲಿ ಕುಳ್ಳಿರಿಸಿಕೊಂಡು ಜೂನ್ 11ರ ನಸುಕಿನ ವೇಳೆಯಲ್ಲಿ ಕಿನ್ನಿಗೋಳಿ ಕಡೆಗೆ ಹೊರಟಿದ್ದರು.

ಈ ವೇಳೆ ಹೊಸಕಾಡಿ ಎಂಬಲ್ಲಿ ಆರೋಪಿಗಳು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಲು ಮುಂದಾಗಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಮಂಗಳೂರು ಸಿ.ಸಿ.ಬಿ ಇನ್ಸ್ಪೆಕ್ಟರ್ (ಈ ಹಿಂದೆ ಪುತ್ತೂರು ನಗರ ಠಾಣಾ ಇನ್ಸ್ಪೆಕ್ಟರ್) ಮಹೇಶ್ ಪ್ರಸಾದ್ ನೇತೃತ್ವದ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದು, ಪೊಲೀಸರ ವಾಹನಕ್ಕೂ ಹಾನಿಗೊಳಿಸಿದ್ದರು. ಕೂಡಲೇ ಅಪಾಯ ಅರಿತ ಮಹೇಶ್ ಪ್ರಸಾದ್ ಆರೋಪಿಗಳ ಮೇಲೆ ಫೈರಿಂಗ್ ನಡೆಸಿದ್ದು, ಘಟನೆಯಲ್ಲಿ ಮೂವರು ಪೊಲೀಸರಿಗೂ ಗಾಯಗಳಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಅದೇನೇ ಇರಲಿ.ಮಂಗಳೂರು ರಕ್ತ ಸಿಕ್ತ ಇತಿಹಾಸದಲ್ಲಿ ಹಿಂದಿನಿಂದಲೂ ರಿವೇಂಜ್ ಮರ್ಡರ್ ನಡೆಯುತ್ತಲೇ ಇದೆ. ಜಿಲ್ಲೆಯಲ್ಲಿ ಎರಡು ವಾರಗಳ ಹಿಂದೆ ಪೆರ್ಲಂಪಾಡಿಯಲ್ಲೂ ಕಾರ್ತಿಕ್ ಮೇರ್ಲ ಹತ್ಯೆ ಆರೋಪಿಯ ಬರ್ಬರ ಕೊಲೆ ರಿವೇಂಜ್ ಗಾಗಿಯೇ ನಡೆದಿತ್ತು. ಪೊಲೀಸರು ಯಾವ ರೀತಿಯ ಕಾನೂನು ಜಾರಿಗೊಳಿಸಿದರೂ, ರೌಡಿ ಪೆರೇಡ್ ನಡೆಸಿ ಎಚ್ಚರಿಕೆ ಕೊಟ್ಟರೂ ‘ನಮ್ಮವನನ್ನು ತೆಗೆದವ’ ಎನ್ನುವ ಕಾರಣಕ್ಕಾಗಿಯೇ ಕೊಲೆಗಳು ನಡೆದು ಹೆಣಗಳುರುಳುತ್ತಿರುವುದು ವಿಪರ್ಯಾಸ.

Leave A Reply

Your email address will not be published.