ಕಾನಾವು ತಿರುಮಲೇಶ್ವರ ಭಟ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಸಾಂಪ್ರಾದಾಯಿಕ ಶೈಲಿಯಲ್ಲಿ ಕೃಷಿ ಕ್ಷೇತ್ರ ಉಳಿಸಿ ಯಶಸ್ಸು ಗಳಿಸಿದವರು : ಕೆ.ಗಣಪಯ್ಯ

ಲೆಕ್ಕಾಚಾರ ನೀಡುವುದರಿಂದ ವಿಶ್ವಾಸ ವೃದ್ದಿ ಎಂಬ ತತ್ವಕ್ಕೆ ಒತ್ತು ನೀಡಿದವರು : ಜಗನ್ನಾಥ ಪೂಜಾರಿ ಮುಕ್ಕೂರು

ಮುಕ್ಕೂರಿನಲ್ಲಿ ಮೆಡಿಕಲ್ ಕ್ಯಾಂಪ್ : ನರಸಿಂಹ ತೇಜಸ್ವಿ

ಮುಕ್ಕೂರು : ದ.ಕ.ಜಿಲ್ಲೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿಯೇ ಅಡಿಕೆ ಕೃಷಿ ತೋಟ ಉಳಿಸಿಕೊಂಡು ಪೋಷಿಸಿ ಯಶಸ್ಸು ಸಾಧಿಸಿದವರು ತಿರುಮಲೇಶ್ವರ ಭಟ್ ಕಾನಾವು ಎಂದು ಪ್ರಗತಿಪರ ಕೃಷಿಕ ವನಶ್ರೀ ಕೆ.ಗಣಪಯ್ಯ ಹೇಳಿದರು.

ಮುಕ್ಕೂರು ಶಾಲಾ ವಠಾರದಲ್ಲಿ ದಿವಂಗತ ಕಾನಾವು ತಿರುಮಲೇಶ್ವರ ಭಟ್ ಅವರಿಗೆ ಶನಿವಾರ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು. ಮಣ್ಣಿನ ಸಂಸ್ಕೃತಿಯ ಪ್ರೀತಿಯನ್ನು ತನ್ನ ಮಕ್ಕಳಲ್ಲಿಯು ಬೆಳೆಸಿದವರು. ಕೃಷಿ ಭೂಮಿಯ ಜತೆಗೆ ನಿರಂತರ ಒಡನಾಟ ಇರಿಸಿಕೊಂಡು ಸಾಮಾಜಿಕ, ಧಾರ್ಮಿಕ, ಸಹಕಾರ ಸೇರಿದಂತೆ ಹತ್ತಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು ಎಂದವರು ಸ್ಮರಿಸಿದರು.

ಪುದ್ಧೊಟ್ಟು ಸೇತುವೆ ನಿರ್ಮಾಣದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಇತರರಿಗೆ ಪ್ರೇರಣೆ ನೀಡಿದ್ದರು. ಯಾವುದೇ ಕ್ಷೇತ್ರದಲ್ಲಿಯಾದರೂ ಸಾಧನೆ ಮಾಡುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಗುಣ ಅವರಲ್ಲಿ ಇತ್ತು ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಯುವಕ ಮಂಡಲದ ಅನೇಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ತಿರುಮಲೇಶ್ವರ ಭಟ್ ಅವರು ಶಿಸ್ತಿಗೆ ಆದ್ಯತೆ ನೀಡಿದ್ದರು. ಯಾವುದೇ ಕಾರ್ಯಕ್ರಮ ಆಯೋಜಿಸಿದರೂ ಅದರ ಲೆಕ್ಕಾಚಾರವನ್ನು ಸಾರ್ವಜನಿಕರ ಮುಂದೆ ಇಟ್ಟಾಗ ಮಾತ್ರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯ ಎಂಬ ಅವರ ಸಲಹೆ ಅವರ ಪಾರದರ್ಶಕ ವ್ಯಕ್ತಿತ್ವಕ್ಕೆ ಉದಾಹರಣೆ ಎಂದರು.

ವೈದ್ಯ ಡಾ.ಕೆ.ವೆಂಕಟರಮಣ ಭಟ್ ಕಾನಾವು ಮಾತನಾಡಿ, ನನ್ನ ಸಹೋದರನಾಗಿರುವ ತಿರುಮಲೇಶ್ವರ ಭಟ್ ಅವರು ನಮಗೆಲ್ಲಾ ಸ್ಪೂರ್ತಿಯ ಚಿಲುಮೆಯಂತಿದ್ದರು. ಸಮಾಜದ ಕೆಲಸಕ್ಕೂ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿದ್ದರು ಎಂದರು.

ನರಸಿಂಹ ತೇಜಸ್ವಿ ಕಾನಾವು ಮಾತನಾಡಿ, ತಂದೆಯವರು ಊರಿನೊಂದಿಗೆ ಇಟ್ಟುಕೊಂಡ ಬಾಂಧವ್ಯ ಎಂತಹದು ಅನ್ನುವುದಕ್ಕೆ ನಿಮ್ಮಲ್ಲರ ಭಾವನೆಗಳೇ ಸಾಕ್ಷಿ. ತಂದೆಯಂತೆ ನಾವು ಕೂಡ ಊರಿನ ಕಾರ್ಯಚಟುವಟಿಕೆಗೆ ಪ್ರೋತ್ಸಾಹ ನೀಡುತ್ತೇವೆ. ತಂದೆಯ ನೆನಪಿನಲ್ಲಿ ಊರಿನಲ್ಲಿ ಮೆಡಿಕಲ್ ಕ್ಯಾಂಪ್ ಆಯೋಜಿಸಲಾಗುವುದು ಎಂದರು.

ಶಾಲಾ ಮುಖ್ಯಗುರು ವಸಂತಿ ಮಾತನಾಡಿ, ಶಾಲಾ ಸರ್ವಾಂಗೀಣ ಪ್ರಗತಿಗೆ ಸಹಕಾರ ನೀಡಿರುವ ತಿರುಮಲೇಶ್ವರ ಭಟ್ ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ನಿವೃತ್ತ ಕಂದಾಯ ನಿರೀಕ್ಷಕ ದಾಮೋದರ ಗೌಡ ಕಂಡಿಪ್ಪಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್., ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ, ಬೃಂದಾ ಪಿ.ಮುಕ್ಕೂರು ಮೊದಲಾದವರು ನುಡಿ ನಮನ ಸಲ್ಲಿಸಿದರು.

ವೇದಿಕೆಯಲ್ಲಿ ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಕುಂಡಡ್ಕ ಉಪಸ್ಥಿತರಿದ್ದರು. ಕಾನಾವು ಕುಟುಂಬದ ಅನಿತಾ ಟಿ ಕಾನಾವು, ಡಾ.ನರಸಿಂಹ ಶರ್ಮಾ ಕಾನಾವು, ಡಾ.ರಾಮಕಿಶೋರ್ ಕಾನಾವು, ಶ್ವೇತಾ ನರಸಿಂಹ ತೇಜಸ್ವಿ, ಸಂಘ ಸಂಸ್ಥೆಗಳ ಪರವಾಗಿ ಯುವಸೇನೆ ಅಧ್ಯಕ್ಷ ಸಚಿನ್ ರೈ ಪೂವಾಜೆ, ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಕೊಂಡೆಪ್ಪಾಡಿ, ಅಂಗನವಾಡಿ ಕಾರ್ಯಕರ್ತೆ ರೂಪಾ ಮೊದಲಾದವರಿದ್ದರು.ಪೆರುವಾಜೆ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ ನಿರೂಪಿಸಿದರು.

ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯ ಆಡಳಿತ ಸಮಿತಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘ, ಮುಕ್ಕೂರು- ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಮುಕ್ಕೂರು ಜ್ಯೋತಿ ಯುವಕ ಮಂಡಲ, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ, ಯುವ ಸೇನೆ ಮುಕ್ಕೂರು, ಮುಕ್ಕೂರು-ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ, ಮುಕ್ಕೂರು ಶಾಲಾ‌ ಅಭಿವೃದ್ಧಿ ಸಮಿತಿ, ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘ, ಮುಕ್ಕೂರು ಅಂಗನವಾಡಿ ಮೇಲುಸ್ತುವಾರಿ ಸಮಿತಿ ಹಾಗೂ ಊರವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.

Leave A Reply

Your email address will not be published.