ರಾಜ್ಯ ಸಭಾ ಫಲಿತಾಂಶ ಪ್ರಕಟ | ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದ ಬಿಜೆಪಿ, ಒಂದು ಸ್ಥಾನ ಕಾಂಗ್ರೆಸ್ ತೆಕ್ಕೆಗೆ

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಗೊಳ್ಳಲಿರುವಂತ ನಾಲ್ಕು ಸ್ಥಾನಗಳಿಗೆ, ಇಂದು ವಿಧಾನಸೌಧದಲ್ಲಿ ಮತದಾನ ನಡೆದಿದ್ದು, ಫಲಿತಾಂಶ ಪ್ರಕಟವಾಗಿದೆ. ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಮೂರು, ಕಾಂಗ್ರೆಸ್ ಒಂದು ಸ್ಥಾನಗಳನ್ನು ಗೆದ್ದುಕೊಂಡಿದೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲು ಕಂಡಿದ್ದಾರೆ.

ಇಂದಿನ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಮತ್ತು ಲೇಹರ್ ಸಿಂಗ್ ಸೇರಿ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಜೈರಾಂ ರಮೇಶ್ ಗೆಲುವು ಸಾಧಿಸಿದ್ದಾರೆ.

ಇಂದು ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆಯ ಮತದಾನ ನಡೆಯಿತು. 224 ಶಾಸಕರಲ್ಲಿ ಒಂದು ಮತ ಮಾತ್ರ ಅಡ್ಡಮತದಾನ ನಡೆದಿದೆ. ಬಹುತೇಕ ಶಾಸಕರು ಆಯಾ ಪಕ್ಷದ ಅಭ್ಯರ್ಥಿಗಳಿಗೆ ಕ್ರಾಸ್ ವೋಟಿಂಗ್ ಮಾಡದೇ ಮತ ಚಲಾಯಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆಯಲ್ಲಿ ಗೌಪ್ಯ ಮತದಾನ ಮೀರಿದಂತ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಮತ ಅಸಿಂಧುಗೊಳಿಸಲು ಸಲ್ಲಿಸಲಾದಂತ ದೂರನ್ನು, ಎಲ್ಲಾ ಪರಿಶೀಲನೆ ಬಳಿಕ, ಚುನಾವಣಾಧಿಕಾರಿ ಕ್ಲೀನ್ ಚಿಟ್ ನೀಡಿದ್ದರು.

ರಾಜ್ಯಸಭೆಯು ಪ್ರಸ್ತುತ 245 ಸದಸ್ಯರನ್ನು ಹೊಂದಿದೆ. ಇದರಲ್ಲಿ 233 ಚುನಾಯಿತ ಮತ್ತು 12 ನಾಮನಿರ್ದೇಶಿತ ಸದಸ್ಯರು ಸೇರಿದ್ದಾರೆ. ಸಂವಿಧಾನದ ಪ್ರಕಾರ ಮೇಲ್ಮನೆಯು 250 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರಬಾರದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 233 ಸದಸ್ಯರನ್ನು ಆಯ್ಕೆ ಮಾಡಿದರೆ ಭಾರತದ ರಾಷ್ಟ್ರಪತಿಗಳು ಉಳಿದ 12 ಮಂದಿಯನ್ನು ನಾಮನಿರ್ದೇಶನ ಮಾಡುತ್ತಾರೆ.

ರಾಜ್ಯಸಭಾ ಚುನಾವಣೆಯ ಮೊದಲ ಪ್ರಾಶಸ್ತ್ರದ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ಮೊದಲನೇ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಅವರಿಗೆ 46 ಮತಗಳು ಸಿಕ್ಕಿವೆ. ಕಾಂಗ್ರೆಸ್‌ನ ಜೈರಾಂ ರಮೇಶ್ ಅವರಿಗೂ 46 ಮತಗಳು ಸಿಕ್ಕಿದೆ. ಕಾಂಗ್ರೆಸ್‌ನ ಮನ್ಸೂರ್ ಅಲಿಖಾನ್ ಅವರಿಗೆ 25 ಮತ್ತು ಬಿಜೆಪಿ ಲಹರ್ ಸಿಂಗ್ ಅವರಿಗೆ 33 ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವರಿಗೆ 30 ಮತಗಳು ಸಿಕ್ಕಿವೆ.

Leave A Reply

Your email address will not be published.