ಎಲ್ಲರೂ ಸ್ವಯಂ ಪ್ರೇರಣೆಯಿಂದ ಮಾಸ್ಕ್ ಧರಿಸಿ

ಧಾರವಾಡ: ಕೋವಿಡ್-19 ರ ನಾಲ್ಕನೇ ಅಲೆಯ ಸಂಭಾವ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಸೇರಿದಂತೆ ಎಲ್ಲರೂ ಸ್ವಯಂಪ್ರೇರಣೆಯಿಂದ ಮಾಸ್ಕ್ ಗಳನ್ನು ಧರಿಸಬೇಕು. ಮತ್ತು ಆರೋಗ್ಯ ಇಲಾಖೆಯೊಂದಿಗೆ ಉಳಿದ ಇಲಾಖೆಗಳು ಸಮನ್ವಯ ಸಾಧಿಸಿ ಕೋವಿಡ್ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕೋವಿಡ್-19 ನಿಯಂತ್ರಣದ ಕುರಿತು ಜಿಲ್ಲಾಮಟ್ಟದ ಆರೋಗ್ಯಪಡೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳ ಅನುಗುಣವಾಗಿ ನಿಗದಿತ ಕೋವಿಡ್ ಪರೀಕ್ಷೆಗಳನ್ನು ಮಾಡಬೇಕು. ಹಿಂದಿನಂತೆ ಕೋವಿಡ್ ನಿಯಂತ್ರಣಕ್ಕಾಗಿ ಸಿದ್ಧಪಡಿಸಿದ್ದ ಮೂಲಸೌಕರ್ಯಗಳನ್ನು ಹಾಗೂ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‍ಗಳನ್ನು ತಕ್ಷಣ ಬಳಕೆಗೆ ಅನುವಾಗುವಂತೆ ಸಿದ್ದಪಡಿಸಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಕೋವಿಡ್ ಕೇರ್ ಸೆಂಟರ್‍ಗಳನ್ನು ತಾಲೂಕಿಗೆ ಒಂದರಂತೆ ಹಾಗೂ ಅವಳಿನಗರದಲ್ಲಿ ಆರಂಭಿಸಲು ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತೆ ವಹಿಸಬೇಕು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯ ಬೆಡ್, ಐಸಿಯು ಬೆಡ್, ಆಕ್ಸಿಜೆನ್ ಸೌಲಭ್ಯ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಲಸಿಕಾಕರಣ: ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣ ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ಮುಂದುವರೆದಿದ್ದು, 18 ವರ್ಷ ಮೇಲ್ಪಟ್ಟ 15,05,685 ಜನ ಮೊದಲ ಡೋಸ್(ಶೇ.104.27) ಮತ್ತು 14,64,384 ಜನ 2 ನೆಯ ಡೋಸ್ (ಶೇ.101.41) ಲಸಿಕೆ ಪಡೆದಿದ್ದಾರೆ. 12 ರಿಂದ 14 ವರ್ಷದೊಳಗಿನ 57,619 ಜನ ಮೊದಲ ಡೋಸ್ (ಶೆ.96) ಮತ್ತು 30,979 ಜನ 2 ನೆಯ ಡೋಸ್ (ಶೇ.51.61) ಲಸಿಕೆ ಪಡೆದಿದ್ದಾರೆ. 15 ರಿಂದ 17 ವರ್ಷದೊಳಗಿನ 81,893 ಜನ ಮೊದಲ ಡೋಸ್ (ಶೇ.85.51) ಮತ್ತು 69576 ಜನ 2ನೆಯ ಡೋಸ್ (ಶೇ.72.65) ಲಸಿಕೆ ಪಡೆದಿದ್ದಾರೆ. ಆರೋಗ್ಯ ಕಾರ್ಯಕರ್ತರು, ಫ್ರಂಟ್‍ಲೈನ್ ವರ್ಕರ್ಸ್ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸೇರಿ ಇಲ್ಲಿಯರೆಗೆ 72,329 ಜನ ಮುಂಜಾಗ್ರತಾ(ಪ್ರಿಕಾಷನ್ ಡೋಸ್) ಲಸಿಕೆಯನ್ನು (ಶೇ.52.14) ಪಡೆದಿದ್ದಾರೆ.

ಶಾಲಾ ಕಾಲೇಜುಗಳು ರಜೆ ಹಾಗೂ ಇತರ ಕಾರಣಗಳಿಂದಾಗಿ 2 ನೇ ಡೋಸ್ ಲಸಿಕಾಕರಣದಲ್ಲಿ ಉಂಟಾಗಿದ್ದ ನಿಧಾನಗತಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ಶಾಲೆಗೆ ಭೇಟಿ ನೀಡಿ ಎಲ್ಲ ಮಕ್ಕಳು ಲಸಿಕೆ ಪಡೆಯುವಂತೆ ಜಾಗೃತಿ ವಹಸಿಬೇಕು. ಆಯಾ ತಾಲೂಕಿನ ತಹಶೀಲ್ದಾರರು ಮತ್ತು ತಾಲೂಕಾ ಪಂಚಾಯತ್ ಇಓ ಗಳು ಮಕ್ಕಳ ಲಸಿಕಾಕರಣದ ಮೇಲುಸ್ತವಾರಿ ವಹಿಸಬೇಕು ಮತ್ತು ಡಿಡಿಪಿಐ ಅವರು ಪ್ರತಿದಿನ ಲಸಿಕಾಕರಣ ಪ್ರಗತಿಯನ್ನು ಪರಿಶೀಲಿಸಿ ವರದಿ ನೀಡಬೇಕೆಂದು ಸೂಚಿಸಿದರು.

ಸಾರ್ವಜನಿಕರು ಹಾಗೂ ಇತರರು ಕೋವಿಡ್ ಲಸಿಕೆಯನ್ನು ತಪ್ಪದೆ ಪಡೆಯಬೇಕು. ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದು 2ನೇ ಡೋಸ್ ಬಾಕಿ ಇರುವವರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬೇಕು ಮತ್ತು ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಮರೆಯದೇ ಕೋವಿಡ್ ಲಸಿಕೆಯನ್ನು ಕೊಡಿಸಬೇಕು. ಇದರಿಂದ ಮಾತ್ರ ಕೋವಿಡ್ ಅಲೆಯನ್ನು ಸಮರ್ಥವಾಗಿ ಎದುರಿಸಬಹುದು. ಲಸಿಕಾಕರಣದಲ್ಲಿ ಅಗಾಧ ಸಾಧನೆ ಮಾಡಿದ ಭಾರತವು ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಕೋವಿಡ್ ನಾಲ್ಕನೆಯ ಅಲೆ ಅಷ್ಟು ಗಂಭೀರವಾಗಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೋವಿಡ್ ರೋಗ ನಿರೋಧಕ ಲಸಿಕೆಯನ್ನು ಪಡೆಯುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಂಕಿಪಾಕ್ಸ್ ಜಾಗೃತಿ: ಮಂಕಿಪಾಕ್ಸ್ ಖಾಯಿಲೆಯು ಹೊರರಾಷ್ಟ್ರಗಳಿಂದ ಬರುತ್ತದೆ. ಸ್ಥಳೀಯವಾಗಿ ಇಲ್ಲಿಯವರೆಗೆ ಯಾವುದೇ ವರದಿಯಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದು, ಅದರಂತೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಜಿಲ್ಲೆಯ ಎಲ್ಲ ಆಶಾ, ಆರೋಗ್ಯ ಕಾರ್ಯಕರ್ತರಿಗೆ ಆರೋಗ್ಯ ಇಲಾಖೆಯಿಂದ ಮಂಕಿಪಾಕ್ಸ್ ಕುರಿತು ತಿಳುವಳಿಕೆ ನೀಡಿ, ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಅವರು ಮಾತನಾಡಿ, ಕೋವಿಡ್ ಪರೀಕ್ಷೆಗಳು ನಿಗದಿಯಂತೆ ಮತ್ತು ಗುಣಮಟ್ಟತೆಯಿಂದ ನಡೆಯಬೇಕು. ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಕೋವಿಡ್ ಎಲ್ಲ ಅಲೆಗಳನ್ನು ಸಮರ್ಥವಾಗಿ ನಿರ್ವಹಿಸಿ ಯಶಸ್ವಿಯಾಗಿದೆ. ಮುಂಬರುವ ನಿರೀಕ್ಷಿತ ಕೋವಿಡ್ ಅಲೆಯನ್ನು ಸಮರ್ಥವಾಗಿ ನಿರ್ವಹಿಸಲು ಹಿಂದೆ ಕರ್ತವ್ಯ ನಿರ್ವಹಿಸಿದ್ದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳು ಸಿದ್ಧಗೊಳ್ಳಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯವರು ಮಕ್ಕಳ ಲಸಿಕಾಕರಣದಲ್ಲಿ ಶೇ.100 ರಷ್ಟು ಗುರಿ ಸಾಧಿಸಲು ಕ್ರಿಯಾಯೋಜನೆ ರೂಪಿಸಿ, ಕ್ರಮವಹಿಸಬೇಕೆಂದು ಹೇಳಿದರು.

ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿಸಿ.ಕರಿಗೌಡರ, ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಉಪ ವಿಭಾಗಾಧಿಕಾರಿ ಅಶೋಕ ತೇಲಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ ಅವರು ಮಾತನಾಡಿದರು. ಆರ್.ಸಿ.ಎಚ್.ಓ ಡಾ.ಎಸ್.ಎಂ. ಹೊನಕೇರಿ ಅವರು ಲಸಿಕಾಕರಣ, ಬೆಡ್ ವ್ಯವಸ್ಥೆ ಕುರಿತು ಹಾಗೂ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಶಿ ಪಾಟೀಲ ಅವರು ಕೋವಿಡ್ ಪರೀಕ್ಷೆ, ಕೋವಿಡ್ ಕೇರ್ ಸೆಂಟರ್ ಸೇರಿದಂತೆ ವಿವಿಧ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಿದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್.ಕೆಳದಿಮಠ, ಕಿಮ್ಸ್ ಆಸ್ಪತ್ರೆಯ ಸಮುದಾಯ ಆರೋಗ್ಯ ಅಧಿಕಾರಿ ಡಾ.ಲಕ್ಷ್ಮಿಕಾಂತ ಲೋಖರೆ, ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರರು, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಪುರಸಭೆ, ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಇದ್ದರು.

Leave A Reply

Your email address will not be published.