ಹಿರಿಯ ನಾಗರಿಕರೇ ನಿಮಗೊಂದು ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಹಿರಿಯ ನಾಗರಿಕರಿಗೆ ಇದೊಂದು ಸಂತಸದ ಸಂಗತಿ ಎಂದರೂ ತಪ್ಪೇನಲ್ಲ. ಏಕೆಂದರೆ ಹಿರಿಯ ನಾಗರಿಕರ ಅನುಕೂಲ ಹಾಗೂ ಅವರನ್ನು ಗೌರವಿಸುವ ಸಲುವಾಗಿ ಸರ್ಕಾರ ಇನ್ನೊಮ್ಮೆ ಆದೇಶ ಮಾಡಿದ್ದು, ಎಲ್ಲ ಇಲಾಖೆಗಳಿಗೂ ಮಹತ್ವದ ಸೂಚನೆಯೊಂದನ್ನು ನೀಡಿದೆ.

ಅದೇನೆಂದರೆ ಹಿರಿಯ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಬಂದಾಗ ಅಧಿಕಾರಿ-ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹೊಸದಾಗಿ ಆದೇಶವೊಂದನ್ನು ಹೊರಡಿಸಿದೆ.

ಹಿರಿಯ ನಾಗರಿಕರು ಸರ್ಕಾರಿ ಕಚೇರಿಗಳಿಗೆ ತಮ್ಮ ಕೆಲಸದ ನಿಮಿತ್ತ ಭೇಟಿ ನೀಡಿದಾಗ ಅವರೊಂದಿಗೆ ಗೌರವದಿಂದ ವರ್ತಿಸಬೇಕು, ಆಸನದ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಅವರ ಮನವಿ/ ಕೋರಿಕೆಗಳನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಸರ್ಕಾರಿ ಕಚೇರಿಗಳಲ್ಲಿ ಹಿರಿಯ ನಾಗರಿಕರನ್ನು ಕೂರಿಸಿ ಮಾತನಾಡಿ, ಅವರ ಬೇಡಿಕೆಗಳಿಗೆ ಸ್ಪಂದಿಸುವಂತೆ ಸೂಚಿಸಿ 2021ರ ಜೂ. 21ರಂದು ಸುತ್ತೋಲೆ ಹೊರಡಿಸಲಾಗಿತ್ತು. ಅದಾಗ್ಯೂ ಸರ್ಕಾರದ ಸುತ್ತೋಲೆಯನ್ನು ಪಾಲಿಸದಿರುವ ಬಗ್ಗೆ ಹಾಗೂ ಸರ್ಕಾರ ನಿರ್ದೇಶನಗಳನ್ನು ಉಲ್ಲಂಘಿಸುತ್ತಿರುವ ಕುರಿತು ಹಿರಿಯ ನಾಗರಿಕರುಗಳಿಂದ ದೂರುಗಳು ಬಂದಿರುತ್ತೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂದು ಮತ್ತೊಮ್ಮೆ ಸುತ್ತೋಲೆ ಹೊರಡಿಸಿದೆ.

ಸರ್ಕಾರದ ಸುತ್ತೋಲೆಯ ಸೂಚನೆಯನ್ನು ಅಕ್ಷರಶಃ ಪಾಲಿಸುವಂತೆ ಸಚಿವಾಲಯದ ಎಲ್ಲಾ ಇಲಾಖೆಗಳು ತಮ್ಮ ಅಧೀನದ ಕಚೇರಿಗಳಿಗೆ ಸ್ಪಷ್ಟ ಸೂಚನೆ ನೀಡುವಂತೆ ನಿರ್ದೇಶನ ನೀಡಲಾಗಿದೆ. ಅಲ್ಲದೆ ಇದನ್ನು ಪಾಲಿಸದಿರುವ ಕುರಿತು ಇನ್ನುಮುಂದೆ ದೂರುಗಳು ಬಂದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

Leave A Reply

Your email address will not be published.