ಮಂಗಳೂರು : ಆಸ್ಪತ್ರೆಗೆ ಚಿಕಿತ್ಸೆಗೆಂದು ಹಣ ಡಿಪಾಸಿಟ್ ಆಗದೇ ಕೈ ಕೊಟ್ಟ ಮೆಷಿನ್ | ಆತಂಕಗೊಂಡ ಮಹಿಳೆಯಿಂದ ಬ್ಯಾಂಕ್ ಮುಂದೆ ರಂಪಾಟ!!!

ಮಂಗಳೂರು: ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು, ಡೆಪಾಸಿಟ್ ಯಂತ್ರದ ಮೂಲಕ ಹಾಕಿದಾಗ, ಅದು ಹಣ ಖಾತೆಗೆ ಜಮೆ ಆಗದೇ ಇದ್ದುದ್ದನ್ನು ಕಂಡು, ಹೆದರಿದ ಮಹಿಳೆ ಆಕ್ರೋಶಗೊಂಡು ಬ್ಯಾಂಕ್ ಎದುರು ರಂಪಾಟ ನಡೆಸಿದ ಘಟನೆ ಜೂ 8 ರಂದು ಸುರತ್ಕಲ್‌ನಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿರುವ ಕುಟುಂಬವೊಂದಕ್ಕೆ‌ ನೆರವಾಗುವ ಉದ್ದೇಶದಿಂದ ತನ್ನ ಖಾತೆಯ ಮೂಲಕ ಅವರ ಖಾತೆಗೆ ಹಾಕಲು ಹೋದ ಸಂದರ್ಭದಲ್ಲಿ ಇದು ನಡೆದಿದೆ. ಈ ಘಟನೆ ನಡೆದಿರುವುದು ಸುರತ್ಕಲ್ ಕೆನರಾ ಬ್ಯಾಂಕ್ ನಲ್ಲಿ. ಆಕೆ ಹಣ ಹಿಡ್ಕೊಂಡು ಬ್ಯಾಂಕಿಗೆ ಹೋದ ವೇಳೆ ಅಲ್ಲಿನ ಸಿಬಂದಿ ಹಣವನ್ನು ಎಟಿಎಂ ಡೆಪೊಸಿಟ್ ಮೆಷೀನ್ ಮೂಲಕ ಹಾಕುವಂತೆ ಸೂಚಿಸಿದ್ದಾರೆ.

ಹಾಗಾಗಿ ಮಹಿಳೆ ರೂ. 24 ಸಾವಿರವನ್ನು ಮೆಷಿನ್ ನಲ್ಲಿ ಹಾಕಿದಾಗ ಮೆಷಿನ್ ಕೈ ಕೊಟ್ಟಿತು. ಮಧ್ಯಾಹ್ನ ಡೆಪಾಸಿಟ್ ಮಾಡಿದ್ದ ಹಣ ಸಂಜೆಯವರೆಗೂ ಬಂದಿರಲಿಲ್ಲ. ಗಾಬರಿಗೊಂಡ ಮಹಿಳೆಗೆ ಹಣದ ಅಗತ್ಯವಿದ್ದು ತಕ್ಷಣ ಹಣ ಖಾತೆಗೆ ಹಾಕುವಂತೆ ಬ್ಯಾಂಕ್‌ ಸಿಬಂದಿಗಳಲ್ಲಿ ಮನವಿ ಮಾಡಿದ್ದಾರೆ. ಆದರೆ ಮ್ಯಾನೇಜರ್ ಎರಡು ಗಂಟೆ ಕಾಯಿಸಿ ನಂತರ ನಾಳೆ ಬನ್ನಿ ಹೆಡ್ ಆಫೀಸ್ ಗೆ ಹೋಗಿ ಎಂದು ಹೇಳಿದ್ದಾರೆ. ಆದರೆ ಮಹಿಳೆ ಹಠ ಮಾಡಿದಾಗ ನಾಲ್ಕು ದಿನದ ಬಳಿಕ ಖಾತೆಗೆ ಹಣ ಬರುತ್ತೆ ಎಂದು ಬ್ಯಾಂಕಿನವರು ಹೇಳಿದ್ದಾರೆ.

ಇದರಿಂದ ತೀವ್ರ ಕಂಗೆಟ್ಟ ಮಹಿಳೆ ಆಸ್ಪತ್ರೆಗೆ ತುರ್ತಾಗಿ ಹಣ ಕಟ್ಟಬೇಕಾಗಿದ್ದರಿಂದ ಮಹಿಳೆ ರಂಪಾಟ ಮಾಡಿದ್ದಾರೆ. ಒಂದು ಹಂತದಲ್ಲಿ ಉದ್ವೇಗ ತಡೆಯಲಾರದೇ ದೊಡ್ಡ ಸೈಜ್ ಗಲ್ಲು ಹಿಡಿದು ಬ್ಯಾಂಕಿನ ಗೇಟಿಗೆ ಎತ್ತಾಕಲು ಮಹಿಳೆ ಮುಂದಾಗಿದ್ದು ಈ ಹಂತದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ಮಹಿಳೆಯನ್ನು ಸಮಧಾನ ಪಡಿಸಿದರು.

ಆವಾಗ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರು. ಕೂಡಲೇ ಎಚ್ಚೆತ್ತ ಬ್ಯಾಂಕ್‌ನವರು ಡೆಪಾಸಿಟ್ ಮಾಡಿದ್ದ ಹಣ ತಲುಪುವವರೆಗೆ ಬದಲಿ ಹಣ ನೀಡುವುದಾಗಿ ಹೇಳಿದರು. ಇದರಿಂದ ಈ ಪ್ರಕರಣ ಅಲ್ಲಿಗೆ ಸುಖಾಂತ್ಯ ಕಂಡಿದೆ.

Leave A Reply

Your email address will not be published.