ಪ್ರವಾದಿ ನಿಂದಿಸಿದವರಿಗೆ ಕ್ಷಮೆ ಇಲ್ಲ; ಇನ್ನು ಕೇಸರಿ ಭಯೋತ್ಪಾದಕರು ತಮ್ಮ ಅಂತ್ಯಕ್ಕಾಗಿ ಕಾಯಬೇಕು !! | ದೇಶದಲ್ಲಿ ಆತ್ಮಾಹುತಿ ದಾಳಿ ನಡೆಸುವ ಬೆದರಿಕೆಯೊಡ್ಡಿದ ಅಲ್-ಖೈದಾ ಉಗ್ರ ಸಂಘಟನೆ

ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಕುರಿತ ಹೇಳಿಕೆ ವಿವಾದ ಎಬ್ಬಿಸಿದ ಬಳಿಕ ಅಲ್ ಖೈದಾ ಕಡೆಯಿಂದ ಬೆದರಿಕೆ ಕರೆ ಬಂದಿದೆ. ಮಾನವೀಯತೆಯ ಹೆಮ್ಮೆ ಪ್ರವಾದಿ ಮೊಹಮ್ಮದ್ ಅವರನ್ನು ನಿಂದಿಸಿದವರಿಗೆ ಕ್ಷಮೆಯಿಲ್ಲ. ಇನ್ನು ಕೇಸರಿ ಭಯೋತ್ಪಾದಕರು ತಮ್ಮ ಅಂತ್ಯಕ್ಕಾಗಿ ಮುಂಬೈ, ದೆಹಲಿ, ಉತ್ತರಪ್ರದೇಶದಲ್ಲಿ ಕಾಯಬೇಕೆಂದು ಹೇಳುವ ಮೂಲಕ ಉಗ್ರ ಸಂಘಟನೆಯಾಗಿರುವ ಅಲ್ ಖೈದಾ ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸುವ ಬೆದರಿಕೆಯೊಡ್ಡಿದೆ.

ಈ ಕುರಿತು ಬೆದರಿಕೆ ಪತ್ರವೊಂದನ್ನು ಬಿಡುಗಡೆ ಮಾಡಿರುವ ಅಲ್ ಖೈದಾ, ಪ್ರವಾದಿಯ ಘನತೆಗಾಗಿ ಹೋರಾಡಲು ದೆಹಲಿ, ಮುಂಬೈ, ಗುಜರಾತ್ ಹಾಗೂ ಉತ್ತರಪ್ರದೇಶದಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ತಿಳಿಸಿದೆ. ಅಲ್ಲದೆ, ಹಿಂದೂ ಪರ ಹೋರಾಟಗಾರರನ್ನು ಕೇಸರಿ ಭಯೋತ್ಪಾದಕರು ಎಂದು ಹೇಳಿದೆ.

ಮಾನವೀಯತೆಯ ಹೆಮ್ಮೆಯ ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸುವವರಿಗೆ ಯಾವುದೇ ಕ್ಷಮಾದಾನ ಇರುವುದಿಲ್ಲ. ಯಾವುದೇ ಶಾಂತಿ ಮತ್ತು ಭದ್ರತೆ ಅವರನ್ನು ಉಳಿಸುವುದಿಲ್ಲ ಮತ್ತು ವಿಷಾದ ವ್ಯಕ್ತಪಡಿಸಿದರೂ ಈ ವಿಚಾರ ಮುಕ್ತಾಯಗೊಳ್ಳುವುದಿಲ್ಲ. ಮನೆ ಅಥವಾ ಸೈನ್ಯದ ಕೋಟೆಯಲ್ಲಿಯೇ ಅಡಗಿದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ. ನಮ್ಮ ಪ್ರೀತಿಯ ಪ್ರವಾದಿಯವರನ್ನು ಅವಮಾನಿಸಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳದಿದ್ದರೆ, ನಮ್ಮ ತಾಯಂದಿರು ನಮ್ಮನ್ನು ಕಳೆದುಕೊಳ್ಳಲಿ. ಪ್ರವಾದಿಯವರನ್ನು ಅವಮಾನಿಸಿದವರ ಹತ್ಯೆ ಮಾಡುತ್ತೇವೆ. ಪ್ರವಾದಿಗಳ ಅವಮಾನಿಸಿದವರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ನಮ್ಮ ಹಾಗೂ ನಮ್ಮ ಮಕ್ಕಳದ ದೇಹದ ಮೇಲೆ ಸ್ಫೋಟಗಳನ್ನು ಹಾಕುತ್ತೇವೆಂದು ತಿಳಿಸಿದೆ.

ಈ ನಡುವೆ ನೂಪುರ್ ಶರ್ಮಾ ಅವರಿಗೂ ಬೆದರಿಕೆಯೊಡ್ಡಿರುವ ಉಗ್ರ ಸಂಘಟನೆಯೊಂದು, ನೂಪುರ್ ಶರ್ಮಾ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು, ಇಡೀ ವಿಶ್ವದ ಮುಂದ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಪ್ರವಾದಿಗಳನ್ನು ಅವಹೇಳನ ಮಾಡಿದವರಿಗೆ ಏನು ಮಾಡುಲಾಗುತ್ತದೆಯೋ ಅದನ್ನೇ ನೂಪುರ್ ಅವರಿಗೆ ಮಾಡಲಾಗುತ್ತದೆ ಎಂದು ಹೇಳಿದೆ.

ಈ ಕುರಿತು ಟೆಲಿಗ್ರಾಮ್ ಆ್ಯಪ್ ನಲ್ಲಿ ಮುಜಾಹಿದೀನ್ ಫಜ್ವಾತುಲ್ ಹಿಂದ ಉಗ್ರ ಸಂಘಟನೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ಬಿಜೆಪಿ ನಾಯಕರು ನಿರಂತರವಾಗಿ ಮುಸ್ಲಿಂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಆರ್ ಎಸ್ಎಸ್, ರಾಮಸೇನೆ, ಬಜರಂಗದಳ, ಶಿವಸೇನೆಗಳು ಇಸ್ಲಾಂ ಹಾಗೂ ಮುಸ್ಲಿಮರ ವಿರುದ್ಧ ನಿರಂತರವಾಗಿ ದ್ವೇಷದ ಭಾಷಣ ಮಾಡುತ್ತಿದೆ ಎಂದು ಕಿಡಿಕಾರಿದೆ. ಈ ಸಂಘಟನೆ ಕಾಶ್ಮೀರದಲ್ಲಿ ಸಕ್ರಿಯವಾಗಿದೆ. ಕಳೆದ ಜನವರಿ ತಿಂಗಳಿನಲ್ಲಿ ದೆಹಲಿಯ ಗಾಜಿಪುರ್ ಹೂವಿನ ಮಾರುಕಟ್ಟೆ ಸ್ಫೋಟ ಪ್ರಕರಣದಲ್ಲಿ ಇದರ ಪಾತ್ರ ಇದೆ ಎಂದು ಹೇಳಲಾಗಿತ್ತು.

Leave A Reply