ಹಿಜಾಬ್ ಬೇಕೆಂದವರು ಸೌದಿ ಅರೇಬಿಯಾ, ಪಾಕಿಸ್ತಾನಕ್ಕೆ ಹೋಗಲಿ : ಯು.ಟಿ.ಖಾದರ್

ಮಂಗಳೂರು : ಹೈಕೋರ್ಟ್ ನೀಡಿದ ಆದೇಶಕ್ಕೆ ಬೆಲೆ ನೀಡದೆ ಇತ್ತೀಚೆಗೆ ಮತ್ತೆ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವುದು ಹೆಚ್ಚಾಗ್ತಿದೆ. ಕೋರ್ಟ್ ಆದೇಶಕ್ಕೂ ಕಿಂಚಿತ್ತೂ ಬೆಲೆ ಕೊಡದ ವಿದ್ಯಾರ್ಥಿನಿಯರ ವಿರುದ್ಧ ಯುಟಿ ಖಾದರ್ ಕಿಡಿಕಾರಿದ್ದಾರೆ.

ಹಿಜಾಬ್ ವಿವಾದದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಲಿ, ಪಾಕಿಸ್ತಾನ, ಸೌದಿಯಂತಹ ದೇಶಗಳಿಗೆ ಹೋಗಲಿ. ಆಗ ಅವರಿಗೆ ನಮ್ಮ ದೇಶದ ಮಹತ್ವ ಗೊತ್ತಾಗುತ್ತೆ ಎಂದು ಸವಾಲು ಹಾಕಿದರು.

ನಮ್ಮ ದೇಶದಲ್ಲಿ ಬೇಕಾದ ಹಾಗೆ ಮಾತನಾಡೋದು ನಡೆದಿದೆ. ಹಿಜಾಬ್ ವಿಷಯದಲ್ಲಿ ವಿಶ್ವವಿದ್ಯಾಲಯದ ವಿಸಿ ಅವರನ್ನು ಭೇಟಿ ಮಾಡಲಿ. ಅಲ್ಲಿಂದ ಸ್ಪಂದನೆ ಸಿಗದೇ ಹೋದರೆ ಡಿಸಿಯನ್ನು ಭೇಟಿಯಾಗಬಹುದು. ಅಲ್ಲಿಯೂ ಹೋಗಿ ಮನಸ್ಸಿಗೆ ಸಮಾಧಾನ ಆಗದೆ ಹೋದರೆ ಕೊನೆಗೆ ಕೋರ್ಟ್ ಗೆ ಹೋಗಿ ನ್ಯಾಯ ಕೇಳಲಿ. ನಮ್ಮಲ್ಲಿ ಕೋರ್ಟ್ಗಳು ಇವೆಯಲ್ಲ ನ್ಯಾಯ ಕೊಡಲು ? ಅದು ಬಿಟ್ಟು ಮನಸ್ಸಿಗೆ ಬಂದಂತೆ ಮಾತನಾಡುವುದಲ್ಲ ಎಂದು ಹಿಜಾಬ್ ಪರ ಹೋರಾಟಗಾರ ಹುಡುಗಿಯರ ಕಿವಿ ಹಿಂಡಿದ್ದಾರೆ ಖಾದರ್.

ಇಲ್ಲಿ ಕಾನೂನನ್ನು ಉಲ್ಲಂಘಿಸಿ ಬಿಡುವುದು, ಪ್ರೆಸ್ ಮೀಟ್ ಎಲ್ಲ ಮಾಡಬಹುದು. ಆದರೆ ಅದನ್ನೇ ವಿದೇಶಕ್ಕೆ ಹೋಗಿ ಮಾತನಾಡಲಿ. ಇಲ್ಲಿ ಹುಲಿಯ ಹಾಗೆ ಇದ್ದವರು ಅಲ್ಲಿ ಬೆಕ್ಕಿನ ತರಹ ಆಗುತ್ತಾರೆ. ಇಲ್ಲಿ ಏರ್ಪೋರ್ಟ್ ನಿಂದ ಇಳಿಯುವಾಗ ಗನ್ ಮ್ಯಾನ್ ಜೊತೆಗೆ, ಇದ್ದಿದ್ದರೂ ಬಂಸಲ್ ಗಳನ್ನು ಮುಂದಕ್ಕೆ ಬಿಟ್ಟುಕೊಂಡು ನಡೆಯುವವರನ್ನು ನಾನು ಕಂಡಿದ್ದೇನೆ. ಅದೇ ಜನ ಅಲ್ಲಿ ಸೌದಿಗೆ ಹೋದರೆ, ಸೀದಾ ಒಬ್ರೇ ಬೆಕ್ಕಿನ ಥರ ನಡೆದು ಹೋಗ್ತಾರೆ. ಇದನ್ನು ನಾನು ಸ್ವತಹಾ ಕಂಡಿದ್ದೇನೆ. ಯಾಕೆಂದರೆ ನಮ್ಮಲ್ಲಿ ಅಷ್ಟೊಂದು ಸ್ವಾತಂತ್ರವಿದೆ. ಮೊದಲು ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು. ಆಗ ನಮ್ಮ ದೇಶದ ಕಾನೂನು ನೀಡಿದ ಅವಕಾಶದ ಮಹತ್ವ ಗೊತ್ತಾಗುತ್ತದೆ, ಇಲ್ಲಿ ಸಿಗುವ ಸ್ವಾತಂತ್ರ್ಯದ ಅರಿವು ಆಗುತ್ತದೆ ಎಂದು ಖಾದರ್ ಅವರು ಕಿಡಿಕಾರುತ್ತಲೇ ಬುದ್ಧಿಮಾತು ಹೇಳಿದ್ದಾರೆ.

Leave A Reply

Your email address will not be published.