ಪುತ್ತೂರು ಚರಣ್ ರಾಜ್ ರೈ ಕೊಲೆ ಪ್ರಕರಣ : ಬಂಧಿತ ಮೂರು ಮಂದಿಯ ತೀವ್ರ ವಿಚಾರಣೆ,ಕೆಯ್ಯೂರಿನ ಗೇರು ತೋಟದಲ್ಲಿ ಅಡಗಿದ್ದ ಆರೋಪಿಗಳು

ಪುತ್ತೂರಿನ ಹಿಂದೂ ಸಂಘಟನೆ ಕಾರ್ಯಕರ್ತ ಕಾರ್ತಿಕ್ ಮೇರ್ಲ ಎಂಬವರ ಹತ್ಯೆ ಆರೋಪಿ ಚರಣ್ ಹತ್ಯೆಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳಾದ ಕಿಶೋರ್ ಪೂಜಾರಿ ತಂಡದ ನರ್ಮೇಶ್ ರೈ,ನಿತಿಲ್ ಶೆಟ್ಟಿ,ವಿಜೇಶ್ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ಜೂ.4ರಂದು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಈ ಕೊಲೆ ನಡೆದಿತ್ತು.ಕಾರ್ತಿಕ್ ಮೇರ್ಲ ಕೊಲೆಗೆ ರಿವೇಂಜ್ ಆಗಿ ಚರಣ್ ರೈ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

ಕೊಲೆಯಾದ ಚರಣ್ ರಾಜ್

ಚರಣ್ ರಾಜ್ ರೈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಕೆಯ್ಯೂರು ನೂಜಿ ಮುತ್ತಪ್ಪ ರೈಯವರ ಪುತ್ರ ನರ್ಮೇಶ್ ರೈ(29ವ), ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಯತೀಶ ಎಂಬವರ ಪುತ್ರ ನಿತಿಲ್ ಶೆಟ್ಟಿ (23ವ.) ಹಾಗೂ ಕಡಬ ತಾಲೂಕಿನ ಬೆಳಂದೂರು ಮರಕಡ ನಿವಾಸಿ ರಾಮ ಎಂಬವರ ಪುತ್ರ ವಿಜೇಶ್ (22ವ.) ಎಂಬವರನ್ನು ಪೊಲೀಸರು ಕೆಯ್ಯೂರು ಗ್ರಾಮದ ಪಲ್ಲತ್ತಡ್ಕದಲ್ಲಿರುವ ಗೇರುಬೀಜದ ಕಾಡಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳು ಕೃತ್ಯ ಎಸಗಿದ ಬಳಿಕ ಎರಡು ಬೈಕ್‌ಗಳಲ್ಲಿ ಬೇರೆ ಬೇರೆ ರೂಟ್‌ನಲ್ಲಿ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರ್‌ಚಂದ್ರ ಮತ್ತು ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ಅವರ ನೇತೃತ್ವದಲ್ಲಿ ಸುಳ್ಯ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಬೆಳ್ಳಾರೆ ಪೊಲೀಸ್ ಠಾಣೆಯ ಎಸ್‌.ಐ ರುಕ್ಷ ನಾಯ್ಕ, ಸಂಪ್ಯ ಪೊಲೀಸ್ ಠಾಣೆಯ ಎಸ್‌.ಐ ಉದಯರವಿ ಅವರ ತಂಡ ರಚಿಸಲಾಗಿತ್ತು. ಬೆಳ್ಳಾರೆ ಠಾಣೆ ಎಸ್.ಐ ರುಕ್ಮ ನಾಯ್ಕ ಮತ್ತು ಸಂಪ್ಯ ಪೊಲೀಸ್ ಠಾಣೆ ಎಸ್‌.ಐ ಎಂ.ವಿ.ಉದಯ ರವಿ ಅವರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಜೊತೆಗೆ ಎ.ಎಸ್.ಐ. ಭಾಸ್ಕರ್, ಸಿಬ್ಬಂದಿಗಳಾದ ಬಾಲಕೃಷ್ಣ, ಚಂದ್ರಶೇಖರ್, ಸಂತೋಷ್, ಪ್ರವೀಣ್‌ ಬಾರ್ಕಿ ಮತ್ತು ಮಂಜುನಾಥ್, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇನ್ನು ಉಳಿದ ಆರೋಪಿಗಳಾದ ಕಿಶೋರ್ ಕುಮಾರ್ ಕಲ್ಲಡ್ಕ ಸೇರಿದಂತೆ ಒಟ್ಟು ಮೂವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬೆಳಿಗ್ಗೆ ಪುತ್ತೂರು ನ್ಯಾಯಾಲಯದಲ್ಲಿದ್ದ ಕಿಶೋರ್ ಪೂಜಾರಿ, ನರ್ಮೇಶ್ ರೈ

ಚರಣ್‌ರಾಜ್ ರೈ ಅವರ ಕೊಲೆಯಾದ ದಿನ ಜೂ.4ರಂದು ಬೆಳಿಗ್ಗೆ ಪುತ್ತೂರು ನ್ಯಾಯಾಲಯದಲ್ಲಿ ಕಿಶೋರ್ ಪೂಜಾರಿ ಮತ್ತು ನರ್ಮೇಶ್ ರೈ ಜೊತೆಯಾಗಿದ್ದರು. 2015ರಲ್ಲಿ ನೆಹರುನಗರದಲ್ಲಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕಿಶೋರ್ ಪೂಜಾರಿ ತಂಡದ ವಿರುದ್ಧ ಐಪಿಸಿ 307 ರನ್ವಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗಾಗಿ ನರ್ಮೇಶ್ ರೈ ಮತ್ತು ಕಿಶೋರ್ ಪೂಜಾರಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಕಾರ್ತಿಕ್ ಮೇರ್ಲ

ಮಧ್ಯಾಹ್ನದ ವೇಳೆ ನ್ಯಾಯಾಲಯದಿಂದ ಕಿಶೋರ್ ಮತ್ತು ನರ್ಮೇಶ್ ಅವರು ತನ್ನ ಇತರ ಸ್ನೇಹಿತರ ಜೊತೆ ಬೈಕ್‌ನಲ್ಲಿ ತೆರಳಿರುವುದಾಗಿ ಮಾಹಿತಿ ಲಭ್ಯವಾಗಿದೆ. ಚರಣ್‌ರಾಜ್ ರೈ ಅವರ ಕೊಲೆ ಮಾಡುವ ಕುರಿತು ಕೋರ್ಟ್ ಆವರಣದಲ್ಲೇ ಅವರು ಸ್ಕೆಚ್ ರೂಪಿಸಿರಬಹುದು ಎಂದು ಹೇಳಲಾಗುತ್ತಿದೆ.

ಕೊಲೆಗೀಡಾದ ಚರಣ್ ರಾಜ್ ರೈಯವರು ಚೆಟ್ ಫಂಡ್ ವಿಚಾರದ ಕೇಸಿಗೆ ಸಂಬಂಧಿಸಿ ಎರಡು ದಿನದ ಹಿಂದೆ ಪುತ್ತೂರು ನ್ಯಾಯಾಲಯಕ್ಕೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.

Leave A Reply

Your email address will not be published.