ಕಂಟೈನರ್ ಡಿಪೋದಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ !! | 34 ಮಂದಿ ಸಜೀವ ದಹನ, 400ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಕಂಟೈನರ್ ಡಿಪೋದಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ ನಡೆದಿದ್ದು, ಆಕಸ್ಮಿಕವಾಗಿ ಬೆಂಕಿ ತಗುಲಿ 34 ಜನರು ಸಜೀವ ದಹನವಾಗಿದ್ದು, 400ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

ಚಿತ್ತಗಾಂಗ್‍ನ ಸೀತಾಕುಂಡ ಉಪಜಿಲಾದಲ್ಲಿರುವ ಕಡಮ್ರಸುಲ್ ಪ್ರದೇಶದ ಬಿಎಂ ಕಂಟೈನರ್ ಡಿಪೋದಲ್ಲಿ ಶನಿವಾರ ರಾತ್ರಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, 34 ಜನರು ಸಾವನ್ನಪ್ಪಿದ್ದಾರೆ ಮತ್ತು 400 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆ(ಸಿಎಂಸಿಎಚ್)ಗೆ ರವಾನಿಸಲಾಗಿದೆ.

ಪೊಲೀಸ್ ಔಟ್‍ಪೋಸ್ಟ್ ಸಬ್-ಇನ್‍ಸ್ಪೆಕ್ಟರ್(ಎಸ್‍ಐ) ಈ ಕುರಿತು ಮಾತನಾಡಿದ್ದು, ಈ ಘಟನೆಯ ಪ್ರಾಥಮಿಕ ತನಿಖೆ ವೇಳೆ ಕಂಟೈನರ್ ಡಿಪೋಗೆ ರಾಸಾಯನಿಕಗಳಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ಇದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಮುನ್ನವೇ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಬೆಂಕಿ ಮತ್ತಷ್ಟು ವ್ಯಾಪಿಸಿದೆ. ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ನಂತರ ರಾತ್ರಿ 11:45ಕ್ಕೆ ಭಾರೀ ಸ್ಫೋಟ ಸಂಭವಿಸಿದೆ ಎಂದು ವಿವರಿಸಿದ್ದಾರೆ.

ಈ ಬೆನ್ನಲ್ಲೇ ಕಂಟೈನರ್ ಒಂದರಲ್ಲಿ ರಾಸಾಯನಿಕ ಅಂಶವಿದ್ದ ಕಾರಣ ಬೆಂಕಿ ಒಂದು ಕಂಟೇನರ್ ನಿಂದ ಮತ್ತೊಂದು ಕಂಟೇನರ್ ಗೆ ವ್ಯಾಪಿಸಿದೆ. ಈ ಸ್ಫೋಟವು ನೆರೆಹೊರೆಯನ್ನು ಬೆಚ್ಚಿಬೀಳಿಸಿದೆ. ಹತ್ತಿರದ ಮನೆಗಳ ಕಿಟಕಿ ಗಾಜುಗಳು ಒಡೆದುಹೋಗಿವೆ ಎಂದರು.

ಗಾಯಾಳುಗಳಲ್ಲಿ 20 ಮಂದಿ ಸ್ಥಿತಿ ಗಂಭೀರವಾಗಿದ್ದು, ಶೇ.60-90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.