ಪಾಕ್ ಪ್ರೇರಿತ ಕಾಶ್ಮೀರಿ ಪಂಡಿತರ ಹತ್ಯೆ ವಿರುದ್ಧ ಭಾರತದ ಮುಸ್ಲಿಂ ಸಮುದಾಯ ಎಚ್ಚೆತ್ತುಕೊಳ್ಳಬೇಕು-ರಹೀಂ ಉಚ್ಚಿಲ

ಮಂಗಳೂರು: ‘ಪ್ರಧಾನಿ ನರೇಂದ್ರ ಮೋದೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ದೇಶದ ಅಭಿವೃದ್ಧಿಯನ್ನು ಸಹಿಸದ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ನಡೆಸುತ್ತಿರುವ ಕಾಶ್ಮೀರ ಪಂಡಿತರ ಹತ್ಯೆ ಖಂಡನೀಯ ಎಂದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ರಹೀಂ ಉಚ್ಚಿಲ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಶಾಂತಿಯಿಂದ ಬದುಕು ಕಟ್ಟಿಕೊಳ್ಳಲು ಬಯಸುವ ಅಲ್ಲಿಯ ನಾಗರಿಕರಿಗೂ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳಿಂದ ನೆಮ್ಮದಿಯ ಜೀವನ ಸಾಗಿಸಲು ಕಷ್ಟವಾಗಲಿದ್ದು ಇಸ್ಲಾಮ್ ಧರ್ಮಕ್ಕೆ ಕಳಂಕ ತರುವ ಪಾಕಿಸ್ತಾನ್ ಬೆಂಬಲಿತ ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಂ ಧರ್ಮಗಳ ನಾಯಕತ್ವದಲ್ಲಿ ಉಗ್ರ ಪ್ರತಿಭಟನೆ ನಡೆಯುವಂತಾಗಬೇಕು ಎಂದಿದ್ದಾರೆ.

ರಾಷ್ಟ್ರಭಕ್ತ ಎಲ್ಲಾ ಮುಸ್ಲಿಂ ಸಂಘಟನೆಗಳು ಒಂದಾಗಿ ದೇಶದ ಏಕತೆಗಾಗಿ ಹಾಗೂ ಪಾಕಿಸ್ತಾನಕ್ಕೆ ನೇರ ಸಂದೇಶ ನೀಡಲು ಒಗ್ಗಟ್ಟಾಗಬೇಕೆಂದು ಮುಸ್ಲಿಂ ಧರ್ಮಗುರುಗಳು ಹಾಗೂ ಮುಸ್ಲಿಂ ಸಂಘಟನೆಗಳಿಗೆ ಆಗ್ರಹಿಸಿದ್ದಾರೆ.

ಭಾರತದ ಆಂತರಿಕ ಸಮಸ್ಯೆ ಏನೇ ಇದ್ದರೂ ಪರಸ್ಪರ ಬಗೆಹರಿಸಲು ನಾವು ಶಕ್ತರಿದ್ದೇವೆ. ಆದರೆ ಶತ್ರು ದೇಶದಂತೆ ವ್ಯವಹರಿಸುತ್ತಿರುವ ಪಾಕಿಸ್ತಾನ ನಮ್ಮ ಸಹನೆಯನ್ನು ಪರೀಕ್ಷಿಸುತ್ತಿದ್ದು ಭಾರತದ ಮುಸಲ್ಮಾನರು ಒಗ್ಗೂಡಿ ಇಂತಹ ಕೃತ್ಯವನ್ನು ಗಟ್ಟಿ ದನಿಯಲ್ಲಿ

ವಿರೋಧಿಸಬೇಕಾಗಿದೆ ಎಂದು ಹೇಳಿರುವ ಅವರು ಇದಕ್ಕೆ ಪಂಥ ಪಂಗಡ ಹಾಗೂ ರಾಜಕೀಯ ಬದಿಗಿಟ್ಟು ಧಾರ್ಮಿಕ ನಾಯಕರ ಮುಖಂಡತ್ವದಲ್ಲಿ ಒಂದಾಗಬೇಕು ಎಂದು ಸಮಾಜ ಬಾಂಧವರಲ್ಲಿ ಮನವಿ ಮಾಡಿದ್ದಾರೆ.

ಈ ಹಿಂದೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಜೊತೆ ಯುದ್ಧ ಘೋಷಣೆಯಾದರೆ ಭಾರತದ ಮುಸಲ್ಮಾನರು ದೇಶಕ್ಕಾಗಿ ಪ್ರಾಣ ಅರ್ಪಿಸಲು ಸಿದ್ಧರಾಗಿ ಎಂದು ಕರೆ ನೀಡಿದ ಅಂದಿನ ಮೌಲಾನಗಳು ಅದೇ ಮಾತನ್ನು ಮತ್ತೊಮ್ಮೆ ತಮ್ಮ ಸಮಾಜ ಬಾಂಧವರಿಗೆ ಕರೆ ನೀಡುವ ಕಾಲ ಸನ್ನಿಹಿತವಾಗಿದ್ದು ಪಾಕಿಸ್ತಾನದ ಹಾಗೂ ಅದರ ಬೆಂಬಲಿತರ ಉಪಟಳ ಹೆಚ್ಚಾಗುವಾಗ ಇಂತಹ ಕರೆ ದೇಶದ ಹಿತದೃಷ್ಟಿಯಿಂದ ಅಗತ್ಯವಾಗಿ ಬೇಕಾಗಿದೆ ಎಂದು ರಹೀಮ್ ಉಚ್ಚಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದಕರ ಈ ಹೀನ ಕೃತ್ಯಕ್ಕೂ ಇಸ್ಲಾಮ್ ಧರ್ಮಕ್ಕೂ ಯಾವ ಸಂಭಂದವೂ ಇಲ್ಲ. ಬಿನ್ ಲ್ಯಾಡನ್ ಮುಲ್ಲಾ ಉಮರ್ ರಂತವರ ಅನುಯಾಯಿಗಳಿಂದ ಮಾತ್ರ ಇಂತಹ ಕೃತ್ಯ ಸಾಧ್ಯವೇ ಹೊರತು ಪ್ರವಾದಿ ಮುಹಮ್ಮದರ ಅನುಯಾಯಿಗಳಿಂದ ಇದು ಸಾಧ್ಯವಿಲ್ಲ .ಮುಸ್ಲಿಂ ಸಮಾಜ ಒಂದಾಗಿ ನಮ್ಮವರೇ ಆದ ಕಾಶ್ಮೀರ ಪಂಡಿತರ ನೈತಿಕ ಬೆಂಬಲಕ್ಕೆ ನಿಲ್ಲಬೇಕು ಎಂದು ಮಾಧ್ಯಮ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Leave A Reply

Your email address will not be published.