ಶ್ರೀಕೃಷ್ಣ ಶಿರದಲ್ಲಿ ನವಿಲು ಗರಿ ಧರಿಸುವುದೇಕೇ..?

ಪೌರಾಣಿಕ ಕಾಲದ ಕಥೆಗಳು ಅದು ಯಾವುದೇ ಇರಬಹುದು, ಓದಲು ಒಂದು ಕಥೆಯಂತೆ ಅದು ತೋರಿದರೂ, ಖಂಡಿತವಾಗಿಯೂ ಅವುಗಳಿಂದ ನಾವು ಪಾಠ ಕಲಿಯಬಹುದು. ರಾಮ ಮತ್ತು ಕೃಷ್ಣ ಇಬ್ಬರಿಗೂ ಸಂಬಂಧಿಸಿದಂತಹ ಆಸಕ್ತಿದಾಯಕ ಕಥೆಯೊಂದು ಇಲ್ಲಿದೆ. ಶ್ರೀಕೃಷ್ಣನ ಕಿರೀಟದಲ್ಲಿರುವ ನವಿಲು ಗರಿಯ ಕುರಿತಾದ ಕಥೆ. ಕೃಷ್ಣ ತನ್ನ ತಲೆಯ ಮೇಲಿನ ಕಿರೀಟದಲ್ಲಿ ನವಿಲು ಗರಿಗಳನ್ನು ಏಕೆ ಧರಿಸುತ್ತಾನೆ..? ಹಿಂದಿನ ಕಥೆ ರಾಮನಿಗೆ ಸಂಬಂಧಿಸಿದ್ದೇ‌? ಈ ಕಥೆಯ ಮಾಹಿತಿ ಇಲ್ಲಿದೆ

ರಾಮ ಸೀತೆ ವನವಾಸಕ್ಕೆ ಹೋದ ಸಮಯದಲ್ಲಿ ಒಂದು ದಿನ ಸೀತೆಗೆ ಬಾಯಾರಿಕೆಯಾಯಿತು. ಶ್ರೀರಾಮನು ಸುತ್ತಲೂ ನೋಡಿದಾಗ, ಅವನಿಗೆ ದೂರದಲ್ಲಿ ಒಂದು ದೊಡ್ಡ ಕಾಡು ಕಾಣಿಸಿತೇ ವಿನಾಃ ನೀರು ಕಾಣಿಸುವುದಿಲ್ಲ. ಆಗ ರಾಮ ಪ್ರಕೃತಿಯನ್ನು ಪ್ರಾರ್ಥಿಸಿ, ಓ ವನದೇವ, ಇಲ್ಲಿ ಸುತ್ತಮುತ್ತ ಎಲ್ಲಿ ನೀರಿದೆಯೋ ಆ ಸ್ಥಳವನ್ನು ತಲುಪಲು ನಮಗೆ ಸರಳವಾದ ಮಾರ್ಗವನ್ನು ತೋರಿಸು ಎಂದು ಕೇಳಿಕೊಂಡಾಗ, ಅಲ್ಲಿಗೆ ಬಂದ ನವಿಲು ಸ್ವಲ್ಪ ದೂರದಲ್ಲಿ ಜಲಾಶಯವಿದೆ ಎಂದು ಶ್ರೀರಾಮನಿಗೆ ಹೇಳುತ್ತದೆ. ನಾನು ನಿಮಗೆ ಮಾರ್ಗವನ್ನು ತೋರಿಸುತ್ತೇನೆ ಆದರೆ, ನನ್ನಿಂದ ಏನಾದರೂ ತಪ್ಪಾದರೆ ದಯವಿಟ್ಟು ಕ್ಷಮಿಸಬೇಕೆಂದು ಬೇಡಿಕೊಂಡಿತು.

ಹೀಗೇಕೆ ನೀ ಹೇಳುತ್ತೀ ಎಂದು ರಾಮನು ನವಿಲನ್ನು ಕೇಳಿದಾಗ, ನವಿಲು ನಾನು ಕೆಲವೊಮ್ಮೆ ಹಾರಿಕೊಂಡು ಹೋಗುತ್ತೇನೆ, ನೀವು ನಡೆದುಕೊಂಡು ಬರುತ್ತೀರಿ. ನಾನು ಹಾರುವಾಗ ನನ್ನ ರೆಕ್ಕೆಗಳು ನೀವು ನಡೆದುಕೊಂಡು ಬರುವ ದಾರಿಯಲ್ಲಿ ಬೀಳಬಹುದು. ಇದು ನಿಮಗೆ ತೊಂದರೆಯಾಬಹುದು ಎಂದು ಉತ್ತರಿಸುತ್ತದೆ. ಆಗ ರಾಮನು ನಿನ್ನಿಂದ ನಮಗೆ ಸಹಾಯ ಆಗುತ್ತಿದೆಯೇ ಹೊರತು ತೊಂದರೆ ಆಗುವುದಿಲ್ಲವೆಂದು ಹೇಳುತ್ತಾನೆ. ಆಗ ನವಿಲು ಸರಿ ಹಾಗಾದರೆ ನಾನು ಹಾರಿಕೊಂಡು ಹೋಗುವಾಗ ನನ್ನ ರೆಕ್ಕೆಗಳು ನೆಲದ ಮೇಲೆ ಬೀಳುತ್ತದೆ. ಇದರ ಸಹಾಯದಿಂದ ನೀವು ಕೊಳಕ್ಕೆ ಮಾರ್ಗ ನಿಮಗೆ ಸುಲಭವಾಗಿ ದೊರಕುತ್ತದೆ ಎಂದು.

ನವಿಲು ಗರಿಗಳು ನಿರ್ದಿಷ್ಟ ಸಮಯದಲ್ಲಿ ಮತ್ತು ನಿರ್ದಿಷ್ಟ ಋತುವಿನಲ್ಲಿ ಮಾತ್ರ ಬೀಳುತ್ತವೆ ಎನ್ನುವ ನಂಬಿಕೆಯೊಂದಿದೆ. ನವಿಲು ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಗರಿಗಳನ್ನು ಹರಡಿದರೆ ಅದು ಸಾಯುತ್ತದೆ. ಶ್ರೀರಾಮನಿಗೆ ದಾರಿ ತೋರಿದ ನವಿಲಿನ ವಿಷಯದಲ್ಲೂ ಅದೇ ಆಯಿತು. ಕೊನೆಗೆ ನವಿಲು ತನ್ನ ಕೊನೆಯುಸಿರೆಳೆಯುತ್ತಿರುವಾಗ ಇದು ನನ್ನ ಭಾಗ್ಯ, ಜಗದ ದಾಹವನ್ನು ನೀಗಿಸುವ ಭಗವಂತನ ದಾಹವನ್ನು ತಣಿಸುವ ಭಾಗ್ಯ ನನಗೆ ದೊರೆತಿದೆ ಎಂದು ಅದು ಸಂತೋಷಪಡುತ್ತಾ, ನಾನು ಸತ್ತರೂ ಏನೇ ನೋವಾಗಲಾರದು ಎನ್ನುತ್ತದೆಯಂತೆ.

ಆಗ ಭಗವಾನ್ ಶ್ರೀರಾಮನು ನವಿಲಿಗೆ, ನೀನು ನಮ್ಮ ದಾಹ ತೀರಿಸಲು ನಿನ್ನ ಗರಿಗಳನ್ನೇ ಅರ್ಪಿಸಿದ್ದೀಯಾ. ನಿನ್ನ ಈ ಸಹಾಯಕ್ಕೆ ನಾನು ಚಿರಋಣಿ. ಮುಂದಿನ ಜನ್ಮದಲ್ಲಿ ನಾನು ನಿನ್ನ ಋಣವನ್ನು ತೀರಿಸುತ್ತೇನೆಂದು ಶ್ರೀರಾಮನು ನವಿಲಿಗೆ ಭರವಸೆಯನ್ನು ನೀಡುತ್ತಾನೆ. ಶ್ರೀರಾಮನು ಕೃಷ್ಣನಾಗಿ ಮುಂದಿನ ಅವತಾರವನ್ನು ತೆಗೆದುಕೊಂಡು ತನ್ನ ತಲೆಯ ಮೇಲೆ ನವಿಲು ಗರಿಗಳನ್ನು ಧರಿಸುವ ಮೂಲಕ ನವಿಲಿನ ಋಣವನ್ನು ತೀರಿಸಿದನು ಎಂದು ಹೇಳಲಾಗುತ್ತದೆ.

Leave A Reply

Your email address will not be published.