ನೂತನ ಅನುಭವ ಮಂಟಪಕ್ಕೆ ಆಡಳಿತಾತ್ಮಕ ಅನುಮೋದನೆಗೆ ಸೂರ್ಯಕಾಂತ ಹರ್ಷ

ಬೀದರ್: ಮಹಾಮಾನವತಾವಾದಿ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಅನುಭವ ಮಂಟಪದ 612 ಕೋಟಿ ರೂ. ವೆಚ್ಚದ ಪರಿಷ್ಕೃತ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವುದಕ್ಕೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರೂ ಆದ ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ನೂತನ‌ ಅನುಭವ ಮಂಟಪ ನಿರ್ಮಾಣಕ್ಕೆ 560 ಕೋಟಿ ರೂ. ಹಾಗೂ ಪರುಷಕಟ್ಟೆ ಸಮಗ್ರ ಅಭಿವೃದ್ಧಿಗೆ 52 ಕೋಟಿ ರೂ. ಕಾಮಗಾರಿಗೆ ಸರ್ಕಾರ ಸೋಮವಾರ ಆಡಳಿತಾತ್ಮಕ ಅನುಮೋದನೆ‌ ಕೊಟ್ಟಿರುವುದು ಸಮಸ್ತ ಜನರಿಗೆ ವಿಶೇಷವಾಗಿ ಅಸಂಖ್ಯಾತ ಬಸವಾನುಯಾಯಿಗಳಿಗೆ ಎಲ್ಲಿಲ್ಲದ ಸಂತಸ ತಂದಿದೆ. ಸರ್ಕಾರದ ಈ ಕ್ರಮ ಮಾದರಿಯಾಗಿದ್ದು, ಬಸವಭೂಮಿಯ ಐತಿಹಾಸಿಕ ಗತವೈಭವ ಮೆರೆಸುವ ಜೊತೆಗೆ ಬಸವಕಲ್ಯಾಣದ ಸಮಗ್ರ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯಲಿದೆ ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದ್ದಾರೆ.

ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ಬಿಕೆಡಿಬಿ) ಅಧ್ಯಕ್ಷರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಇಲಾಖೆ ಸಚಿವರಾದ ಆರ್.ಅಶೋಕ್ ಅವರು ಅನುಭವ ಮಂಟಪ ಕಾಮಗಾರಿ ಬೇಗ ಆರಂಭವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಮಂಡಳಿಯ ಸಭೆಗಳನ್ನು ಮೇಲಿಂದ ಮೇಲೆ ನಡೆಸುತ್ತಿದ್ದಾರೆ. ಹಿಂದಿನ‌ ಸಭೆ ನಿರ್ಣಯದಂತೆ ಪರಿಷ್ಕೃತ ವೆಚ್ಚಕ್ಕೆ ಈಗ ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ಇದರಿಂದಾಗಿ ಕಲ್ಯಾಣದ ಕೆಲಸಗಳಿಗೆ ಮತ್ತಷ್ಟು ವೇಗ ಸಿಗಲಿದೆ. ಬಸವನಾಡಿನ ವಿಕಾಸದ ದೃಷ್ಟಿಯಿಂದ ಬೊಮ್ಮಾಯಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ, ಕಂದಾಯ ಸಚಿವರ ಕಾರ್ಯ ಅಭಿನಂದನೀಯ. ಜೊತೆಗೆ ಇದಕ್ಕಾಗಿ ಶ್ರಮಿಸಿದ ಕೇಂದ್ರ ಸಚಿವ ಭಗವಂತ ಖೂಬಾ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಬಸವಕಲ್ಯಾಣ ಶಾಸಕ ಶರಣು ಸಲಗರ, ಇತರ‌ ಮುಖಂಡರಿಗೂ ಕೃತಜ್ಞತೆ ಸಲ್ಲಿಸುವುದಾಗಿ ನಾಗಮಾರಪಳ್ಳಿ ಹೇಳಿದ್ದಾರೆ.

Leave A Reply

Your email address will not be published.