ಉಳ್ಳಾಲ: ಮನೆಗೆ ಪೈಂಟ್ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಕೆಳಗೆ ಎಸೆಯಲ್ಪಟ್ಟು ಪೈಂಟರ್ ದುರಂತ ಸಾವು

ನಿರ್ಮಾಣ ಹಂತದಲ್ಲಿದ್ದ ಮನೆಯ ಮೇಲಂತಸ್ತಿನ ಗೋಡೆಗೆ ಪೈಂಟ್‌ ಬಳಿಯುತ್ತಿದ್ದ ವೇಳೆ ವಿದ್ಯುತ್‌ ತಗುಲಿ ಕಾರ್ಮಿಕನೊಬ್ಬ ಕೆಳಕ್ಕೆ ಎಸೆಯಲ್ಪಟ್ಟು ದುರಂತವಾಗಿ ‌ಸಾವನ್ನಪ್ಪಿದ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಮಂಜನಾಡಿ ಗ್ರಾಮದ ಕಟ್ಟೆಮಾರ್‌ ನಿವಾಸಿ ಝುಲ್ಫಿಕಾರ್‌ ಆಲಿ (29) ಮೃತಪಟ್ಟವರು.

ಕೊಲ್ಯದ ಮಳಯಾಳ ಚಾಮುಂಡಿ ದೈವಸ್ಥಾನದ ಬಳಿಯ ಅಡ್ಕಬೈಲ್‌ನಲ್ಲಿ ಬಾಳೆಹಣ್ಣು ವ್ಯಾಪಾರಿ ಗಣೇಶ್‌ ಅವರ ನಿರ್ಮಾಣ ಹಂತದ ಮನೆಯ ಪೈಂಟಿಂಗ್‌ ವೇಳೆ ಘಟನೆ ನಡೆದಿದೆ. ಮನೆಯ ಬದಿಯಲ್ಲೇ ಹೈಟೆನ್ಷನ್‌ ತಂತಿ ಹಾದು ಹೋಗಿರುವ ಕಾರಣ ಘಟನೆ ಸಂಭವಿಸಿದೆ ಎನ್ನಲಾಗಿದೆ.

ನಿರ್ಮಾಣ ಹಂತದ ಮನೆಯಲ್ಲಿ ಮಾರ್ಬಲ್‌ ಮತ್ತು ಪೈಂಟಿಂಗ್‌ ಕಾರ್ಮಿಕರು ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಝುಲ್ಪಿಕಾರ್‌ ಮೇಲಂತಸ್ತಿನ ಮನೆಗೆ ರೋಲರ್‌ನಿಂದ ಪೈಂಟಿಂಗ್‌ ಮಾಡುತ್ತಿದ್ದಾಗ ದಿಢೀರನೆ ಕೆಳಗೆ ಎಸೆಯಲ್ಪಟ್ಟು ಕಲ್ಲಿನ ಆವರಣ ಗೋಡೆ ಮೇಲೆ ಬಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯುತ್‌ ತಂತಿ ಹಾದು ಹೋಗುವುದರೊಂದಿಗೆ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಕೂಡಾ ಮನೆಯ ಪಕ್ಕದಲ್ಲೇ ಇದೆ. ನಿಯಮಗಳನ್ನು ಗಾಳಿಗೆ ತೂರಿ ಮನೆ ನಿರ್ಮಾಣ ಮಾಡಿದ ಆರೋಪ ಗಣೇಶ್‌ ಅವರ ವಿರುದ್ದ ಕೇಳಿ ಬಂದಿದೆ. ಸೆಟ್‌ಬ್ಯಾಕ್‌ ಬಿಡದೆ ಮನೆ ನಿರ್ಮಿಸಿರುವುದು ಘಟನೆ ಕಾರಣ ಎಂದು ಶಂಕಿಸಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.