ರಾಮಮಂದಿರದ ಸುತ್ತಮುತ್ತಲಿನ ಬಾರ್ ಗಳ ಪರವಾನಿಗೆ ರದ್ದು !! | ಯೋಗಿ ಸರ್ಕಾರದಿಂದ ಮಹತ್ವದ ನಿರ್ಧಾರ

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ರಾಮ ಮಂದಿರದ ‘ಗರ್ಭಗುಡಿ’ ನಿರ್ಮಾಣಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಅಡಿಗಲ್ಲು ಹಾಕಿದ್ದಾರೆ. ಈ ನಡುವೆ ‘ಶ್ರೀರಾಮ ಮಂದಿರ’ ಪ್ರದೇಶದಲ್ಲಿನ ಎಲ್ಲ ಮದ್ಯದಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶದ ಅಬಕಾರಿ ಖಾತೆ ಸಚಿವ ನಿತಿನ್ ಅಗರವಾಲ್ ತಿಳಿಸಿದ್ದಾರೆ.

1968ರ ಅಬಕಾರಿ ಅಂಗಡಿಗಳ ನಿಯಮಗಳಲ್ಲಿ ಮಾಡಲಾದ ತಿದ್ದುಪಡಿಗಳ ಸ್ಥಿತಿಗತಿ ಕುರಿತು ಮಾಹಿತಿ ಕೋರಿದ ಬಹುಜನ ಸಮಾಜ ಪಕ್ಷದ ಸದಸ್ಯ ಭೀಮರಾವ್ ಅಂಬೇಡ್ಕರ್ ಅವರ ಪ್ರಶ್ನೆಗೆ ಅಗರವಾಲ್ ಪ್ರತಿಕ್ರಿಯಿಸಿದರು. ಈ ವೇಳೆ ಅವರು ಅಯೋಧ್ಯೆಯ ‘ಶ್ರೀರಾಮ ಮಂದಿರ’ ಪ್ರದೇಶದಲ್ಲಿ ಇರುವ ಎಲ್ಲ ಮದ್ಯದಂಗಡಿಗಳ ಪರವಾನಗಿಯನ್ನು ರದ್ದು ಮಾಡಲಾಗಿದೆ ಎಂದು ಘೋಷಿಸಿದರು.

ಮಂದಿರ ಹೇಗಿರುತ್ತದೆ?

ಅಯೋಧ್ಯೆ ಕುರಿತು ವಿಶ್ವ ಹಿಂದೂ ಪರಿಷತ್ ನಾಯಕ ಶರದ್ ಶರ್ಮಾ ಅವರು ವಿವರಿಸಿದ್ದು, ರಾಮ ಮಂದಿರದ ಗರ್ಭಗೃಹವನ್ನು ಕೆಂಪು ಕಲ್ಲುಗಳಿಂದ ಸಿದ್ಧಪಡಿಸಲಾಗುವುದು. ಅದು ತುಂಬಾ ಮಂಗಳಕರವಾಗಿರುತ್ತದೆ. ದೇವಾಲಯದ ಗರ್ಭಗುಡಿಯು 2024ರ ಜನವರಿಯ ಮಕರ ಸಂಕ್ರಾಂತಿಯ ಒಳಗಡೆ ಸಿದ್ಧವಾಗಲಿದೆ. ಅಲ್ಲಿ ಭಗವಾನ್ ರಾಮನ ವಿಗ್ರಹವನ್ನು ಇರಿಸಲಾಗುತ್ತದೆ. ಜನರಿಗೆ ಪ್ರಾರ್ಥನೆ ವಿಶೇಷ ಸ್ಥಳವನ್ನು ನಿಗದಿಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸೂರ್ಯನ ಕಿರಣಗಳು ರಾಮನ ವಿಗ್ರಹದ ಮೇಲೆ ಬೀಳುವ ರೀತಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಗರ್ಭಗುಡಿಯನ್ನು ಕೆಂಪು ಕಲ್ಲಿನಿಂದ ನಿರ್ಮಿಸಲಾಗುತ್ತಿದೆ. ಇದು ಜನರಿಗೆ ಶಾಂತಿಯನ್ನು ನೀಡುತ್ತದೆ ಎಂದು ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.

2020ರ ಆಗಸ್ಟ್ 5 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಅಂದಿನಿಂದ ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದಲ್ಲದೆ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್‍ನ ಐದು ನ್ಯಾಯಾಧೀಶರ ಸಂವಿಧಾನ ಪೀಠವು 2019ರ ನವೆಂಬರ್ 9 ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಭೂಮಿ ರಾಮನಿಗೆ ಸೇರಿದ್ದು ಎಂದು ಸರ್ವಾನುಮತದಿಂದ ತೀರ್ಪು ನೀಡಿತ್ತು.

Leave A Reply

Your email address will not be published.