ಇನ್ನು ಮುಂದೆ ಜೈಲು ಹಕ್ಕಿಗಳಿಗೆ ಕಾರಾಗೃಹದಲ್ಲಿ ಐಟಿಐ ಕೋರ್ಸ್ !!

ಅಪರಾಧ ಕೃತ್ಯಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಖೈದಿಗಳಿಗೆ ಕೆಲವೇ ದಿನಗಳಲ್ಲಿ ವೃತ್ತಿಪರ ಐಟಿಐ ಶಿಕ್ಷಣ ಭಾಗ್ಯ ದೊರೆಯಲಿದೆ. ಈ ಮೂಲಕ ಇಂತಹ ಕಾರ್ಯ ಸಾಧಿಸಿದ ಮೊದಲ ಸರ್ಕಾರ ಎಂಬ ಹೆಗ್ಗಳಿಕೆಗೆ ರಾಜ್ಯ ಸರ್ಕಾರ ಪಾತ್ರವಾಗಲಿದೆ.

ಖೈದಿಗಳನ್ನು ಶಿಕ್ಷೆ ಅವಧಿ ಮುಗಿದ ಮೇಲೆ ಗೌರವಯುತ ಜೀವನ ಕಟ್ಟಿಕೊಳ್ಳುವುದಕ್ಕೆ ಸಹಾಯಕವಾಗಲಿ ಎಂದು ವೃತ್ತಿಪರ ಶಿಕ್ಷಣ ನೀಡಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐಟಿಐ ಕಾಲೇಜು ಸ್ಥಾಪಿಸುವ ಪ್ರಸ್ತಾವನೆಯೊಂದನ್ನು ರಾಜ್ಯ ಕಾರಾಗೃಹ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ. ಇದಕ್ಕೆ ಸರ್ಕಾರದಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.

ಐಟಿಐ ಕಾಲೇಜು ಸ್ಥಾಪನೆ ಮಂಜೂರು ಪ್ರಕ್ರಿಯೆ ನಡೆದಿದ್ದು, ಕೆಲವೇ ತಿಂಗಳಲ್ಲಿ ಜೈಲು ಹಕ್ಕಿಗಳಿಗೂ ಐಟಿಐ ಶಿಕ್ಷಣ ಭಾಗ್ಯ ದೊರೆಯಲಿದೆ ಎನ್ನಲಾಗಿದೆ. ಕಾಲೇಜು ಆರಂಭವಾದ ಬಳಿಕ ಮೊದಲ ಬಾರಿಗೆ ಜೈಲಿನಲ್ಲಿ ಕಾಲೇಜು ಸ್ಥಾಪಿಸಿದ ಹೆಗ್ಗಳಿಕೆಗೆ ಸರ್ಕಾರ ಪಾತ್ರವಾಗಲಿದೆ. ಈ ಐಟಿಐ ಕಾಲೇಜು ಸರ್ಕಾರಿ ಕಾಲೇಜಿನ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ.

ಮೊದಲ ಹಂತದಲ್ಲಿ 6 ತಿಂಗಳ ಅಲ್ಪಾವಧಿ ಕೋರ್ಸ್‌, ಎರಡು ವರ್ಷಗಳ ವೃತ್ತಿ ಶಿಕ್ಷಣ ಸಂಬಂಧಿ ಐಟಿಐ, ಎಲೆಕ್ಟ್ರಾನಿಕ್ಸ್‌ ಆರಂಭಿಸಲಾಗುತ್ತದೆ. ಕೋರ್ಸ್‌ ಮುಗಿಸಿದವರಿಗೆ ಸರ್ಟಿಫಿಕೇಟ್‌ ಸಹ ನೀಡಲಾಗುತ್ತದೆ. ಎರಡು ವರ್ಷಗಳ ಈ ಕೋರ್ಸ್‌ ತರಬೇತಿ ಪಡೆಯಲು ಕನಿಷ್ಟ 8ನೇ ತರಗತಿ ಪಾಸಾಗಿರಬೇಕು.

ಇನ್ನು ಮೇ ಮೊದಲ ವಾರದಿಂದ 24 ಸಜಾ ಖೈದಿಗಳಿಗೆ ಖಾಸಗಿ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಕಟ್ಟಡಕ್ಕೆ ಪೇಂಟಿಂಗ್ ಮಾಡುವ ತರಬೇತಿ ನೀಡಲಾಗುತ್ತಿದೆ ಎಂದು ಪರಪ್ಪನ ಅಗ್ರಹಾರ ಉನ್ನತ ಮೂಲಗಳು ತಿಳಿಸಿವೆ.

Leave A Reply

Your email address will not be published.