ವಿಧಾನ ಪರಿಷತ್ ಚುನಾವಣೆ: ಬೆಳಗಾವಿಯಲ್ಲಿ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ವಿಧಾನ ಪರಿಷತ್‌ನ ವಾಯುವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಅಖಾಡ ರಂಗೇರಿದ್ದು ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ನಡೆಸಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಬಿಜೆಪಿ ಹಾಲಿ, ಮಾಜಿ ಶಾಸಕರು, ಸಂಸದರು, ಎಂಎಲ್‌ಸಿಗಳು ಹಾಗೂ ಪ್ರಮುಖ ನಾಯಕರ ಸಭೆ ನಡೆಸಿದರು. ಕಳೆದ ಕೆಲ ದಿನಗಳಿಂದ ಬಿಜೆಪಿ ಸಭೆ, ಸಮಾವೇಶಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಭೆಗೆ ಆಗಮಿಸಿದ್ದರು. ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ‘ನಮ್ಮಲ್ಲಿ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಯಾವುದೇ ರೀತಿಯಿಂದ ಇಲ್ಲ. ಅಭಿಪ್ರಾಯಗಳಲ್ಲಿ ವ್ಯತ್ಯಾಸಗಳಿರುತ್ತೆ. ಅದು ಭಿನ್ನಾಭಿಪ್ರಾಯ ಅಲ್ಲ. ಒಂದು ರಾಜಕೀಯ ಪಕ್ಷದಲ್ಲಿ ಅಭಿಪ್ರಾಯಗಳಲ್ಲಿ ವ್ಯತ್ಯಾಸ ಇರುತ್ತೆ ಸರಿ ಮಾಡಿಕೊಂಡು ಹೋಗ್ತಾರೆ. ಎಲ್ಲರೂ ಒಟ್ಟಾಗಿ ಈ ಚುನಾವಣೆ ಮಾಡಬೇಕು ಅನ್ನೋ ಕಾರಣಕ್ಕೆ ನಾನು ಬಂದಿದ್ದೇನೆ’ ಎಂದರು. ಸಭೆ ಬಳಿಕ ನೇರವಾಗಿ ಬೆಳಗಾವಿಯ ಚನ್ನಮ್ಮ ವೃತ್ತದ ಬಳಿ‌ ಇರುವ ಗಣಪತಿ ದೇಗುಲಕ್ಕೆ ಆಗಮಿಸಿದ ನಳಿನ್‌ಕುಮಾರ್ ಕಟೀಲ್ ವಾಯುವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಜೊತೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ‌ ಡಿಸಿ ಕಚೇರಿಗೆ ಆಗಮಿಸಿ ಅಭ್ಯರ್ಥಿಗಳಾದ ಹನುಮಂತ ನಿರಾಣಿ, ಅರುಣ್ ಶಹಾಪುರ್ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹುಬ್ಬಳ್ಳಿಗೆ ತೆರಳಿದ್ರೆ, ರಮೇಶ್ ಜಾರಕಿಹೊಳಿ ಕೊಲ್ಲಾಪುರಕ್ಕೆ ತೆರಳಿದರು.

Leave A Reply

Your email address will not be published.