ಕೋಳಿ ಅಂಕದಲ್ಲಿ ಅರೆಸ್ಟ್ ಆಗಿದ್ದ “ಫೈಟರ್ ಕೋಳಿ” ಗಳ ಬಹಿರಂಗ ಹರಾಜು | ಪೊಲೀಸ್ ಠಾಣೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ ಜನಸ್ತೋಮ |

ಕೋಳಿ ಅಂಕಕ್ಕೆ ರೈಡ್ ಮಾಡಿದ್ದ ಪೊಲೀಸರು ಕೋಳಿಗಳನ್ನೇ ಅರೆಸ್ಟ್ ಮಾಡಿ ಪೊಲೀಸ್ ಬಂಧನದಲ್ಲಿಟ್ಟಿದ್ದರು ಎಂದರೆ ನಂಬುತ್ತೀರಾ? ಹೌದು. ಇಂತಹ ಒಂದು ಘಟನೆ ಉತ್ತರಕನ್ನಡ ಜಿಲ್ಲೆ ಅಂಕೋಲದಲ್ಲಿ ನಡೆದಿದೆ. ಇಷ್ಟು ಮಾತ್ರವಲ್ಲ ಈ ಅರೆಸ್ಟ್ ಆಗಿದ್ದ ಕೋಳಿಗಳನ್ನು ಇವುಗಳ ಉಪದ್ರ ತಾಳಲಾರದೇ ಕೊನೆಗೆ ಬಹಿರಂಗ ಹರಾಜು ಕೂಡಾ ಮಾಡಲಾಯಿತು. ಕೇವಲ ವಾಹನಗಳು ಮಾತ್ರ ಹರಾಜು ಅಲ್ಲ ಈಗ ಕೋಳಿಯನ್ನು ಕೂಡಾ ಹರಾಜು ಮಾಡಲಾಗುತ್ತದೆ ಎನ್ನೋದಕ್ಕೆ ಮೊದಲ ಸಾಕ್ಷಿಯಾಯಿತು ಅಂಕೋಲಾ ಪೋಲಿಸ್ ಠಾಣೆ.

ಕೋಳಿ ಕಾಳಗದಲ್ಲಿ ಪೋಲಿಸರಿಂದ ಸೆರೆಯಾಗಿದ್ದ ಫೈಟರ್ ಕೋಳಿಗಳನ್ನ ಪೋಲಿಸ್ ಠಾಣೆಯಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ ಕೊಳ್ಳಲು ಜನರು ಮುಗಿಬಿದ್ದದನ್ನು ಕಂಡರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಕೋಳಿ ಅಂಕದಲ್ಲಿ ಬಂಧಿಯಾಗಿದ್ದ ಕಾಳಗದ ಕೋಳಿಗಳ ಹರಾಜು ಪ್ರಕ್ರಿಯೆಯಲ್ಲಿ ಕೆಲವರು ಕೊಳ್ಳಲು ಪೋಲೀಸ್ ಠಾಣೆಯೆದರು ಜಮಾಯಿಸಿದ್ದರೆ ಇನ್ನು ಕೆಲವರು ಹರಾಜು ಪ್ರಕ್ರಿಯೆ ಹೇಗಿರೊತ್ತೆ ಎಂದು ನೋಡಲು ಆಗಮಿಸಿದ್ದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಮನಗುಳಿಯ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿದ್ದ ಪೋಲಿಸರು 8 ಫೈಟರ್ ಕೋಳಿಗಳೊಂದಿಗೆ, ಮೂವರು ಆರೋಪಿಗಳು, ನಾಲ್ಕು ಬೈಕ್ ಹಾಗೂ ನಾಲ್ಕು ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದರು.

ಹಿಲ್ಲೂರು ತಿಂಗಳೆಬೈಲ್ ನಿವಾಸಿ ಸದಾನಂದ ರಾಮಾ ಬಾಂದೇಕರ (60) ಗಣಪತಿ ಬೊಮ್ಮಾಯ್ಯ ನಾಯಕ ಮತ್ತು ಅಚವೆ ಚನಗಾರ ನಿವಾಸಿ ಸತೀಶ ನಾಗಪ್ಪ ಪಟಗಾರ ಅವರ ಮೇಲೆ ಪ್ರಕರಣ ದಾಖಲಾಗಿದ್ದು ಉಳಿದ ಕೆಲವರು ಓಡಿ ತಪ್ಪಿಸಿಕೊಂಡಿದ್ದರು ಎನ್ನಲಾಗಿತ್ತು.

ಬಂಧಿತ ಆರೋಪಿಗಳು ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡು ಮನೆ ಸೇರಿಕೊಂಡಿದ್ದರು. ಆದರೆ ಕಾಳಗದ ಕೋಳಿಗಳು ಮಾತ್ರ ಪೋಲಿಸರ ಬಂಧನದಲ್ಲೇ ಇತ್ತು.

ಆದರೆ ಅರೆಸ್ಟ್ ಆಗಿದ್ದ ಕೋಳಿಗಳು ಭಾರೀ ರಗಳೆಯನ್ನು ಆರಂಭಿಸಿತ್ತು. ಕಾಲಿಗೆ ಕಟ್ಟಿಟ್ಟ ಬಳ್ಳಿಯನ್ನು ಎಳೆದುಕೊಂಡು ಮುನ್ನುಗ್ಗಿ ಬರುತ್ತಿದ್ದ ಕೋಳಿಗಳು ಪೋಲೀಸ್ ಠಾಣೆಯ ಸೆಲ್‌ನಲ್ಲಿ ಆಗಾಗ ಹೊಡೆದಾಡಿಕೊಳ್ಳುತ್ತಿದ್ದವು. ಬೆಳಗಾಯಿತೆಂದರೆ ಕೋಳಿಗಳ ಕೂಗಿನ ಶಬ್ದ ಪೋಲಿಸ್ ಠಾಣೆಯ ಸುತ್ತ ಮುತ್ತ ಅಲಾರಾಂ ಬಾರಿಸಿದಂತಾಗಿತ್ತು. ಈ ಹಿನ್ನಲೆಯಲ್ಲಿ ಕೋಳಿಯನ್ನು ಬಹಿರಂಗ ಹರಾಜು ಮಾಡಲಾಯಿತು.

ಪೋಲೀಸ ಠಾಣೆಯಲ್ಲಿ ಮೂರು ದಿನ ನಂತರ ಕಾಳಗದ ಕೋಳಿಗಳ ಹರಾಜು ಕಾರ್ಯವನ್ನು ಸಿಪಿಐ ಸಂತೋಷ ಶೆಟ್ಟಿಯವರ ನೇತೃತ್ವದಲ್ಲಿ ಮಾಡಲಾಯಿತು. ಹರಾಜಿನ ಸುದ್ದಿ ತಿಳಿದ ಕೋಳಿಪ್ರಿಯರು ಪೋಲಿಸ್ ಠಾಣೆಯ ಎದುರು ನೆರೆದಿದ್ದರು.

ಮೂರು ದಿನದವರೆಗೆ ಸೂರ್ಯನ ಬೆಳಕು ಕಾಣದೇ ಬಂಧನದಲ್ಲಿದ್ದ ಕೋಳಿಗಳು ಗುರುವಾರ ಠಾಣೆಯ ಹೊರಾಂಗಣದಲ್ಲಿ ಮೈಕೊಡವಿಕೊಳ್ಳುತ್ತ ವಾರಸುದಾರರತ್ತ ಕಣ್ಣಾಡಿಸುತ್ತಿದ್ದವು. ಕೋಳಿ ಅಂಕದಲ್ಲಿ ಸೆರೆಯಾದ ಕೋಳಿಗಳ ವಾರಸುದಾರರು ಹರಾಜಿನಲ್ಲಿ ನೇರವಾಗಿ ಪಾಲ್ಗೊಳ್ಳದೇ ತೆರೆಮರೆಯಲ್ಲಿ ನಿಂತು ಆಪ್ತರ ಮೂಲಕ ಸವಾಲು ಕೂಗಿದರು.

ಕಾದಾಟದ ಕೋಳಿಗಳ ಹರಾಜು ಕೂಗುವ ಹೊಣೆಗಾರಿಕೆಯನ್ನು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಯಶವಂತ ನಾಯ್ಕ ವಹಿಸಿಕೊಡಲಾಗಿತ್ತು. ಆರಂಭದಲ್ಲಿ 500 ರೂಪಾಯಿಯಿಂದ ಶುರುವಾದ ಸವಾಲ್ ಏಕಾಏಕಿ ಏರಿಕೆಯಾಗತೊಡಗಿತ್ತು. ಸುಮಾರು ಹದಿನೈದಕ್ಕೂ ಹೆಚ್ಚಿನ ಜನರು ಸವಾಲು ಕೂಗಿದರೆ ಇನ್ನುಳಿದವರು ನೋಡಿ ಆನಂದಿಸಿದರು.

ಹಿಲ್ಲೂರು ತಿಂಗಳಬೈಲಿನ ಸದಾನಂದ ರಾಮಾ ಬಾಂದೇಕರ ಎಂಬುವವರು 8300 ರೂಪಾಯಿಗೆ ಕೊನೆಯ ಸವಾಲು ಕೂಗಿ ಎಂಟು ಕೋಳಿಗಳನ್ನು ತಮ್ಮದಾಗಿಸಿಕೊಂಡರು.

Leave A Reply

Your email address will not be published.