ವಿದೇಶಿ ಮಹಿಳೆಯ ಸೆರಗು ಹಿಡಿದುಕೊಂಡು ಓಡಾಡುವವರಿಗೆ ಆರ್‌ಎಸ್‌ಎಸ್‌ ಟೀಕಿಸುವ ನೈತಿಕತೆ ಇಲ್ಲ – ಕೆ.ಎಸ್. ಈಶ್ವರಪ್ಪ

ರಾಜಕೀಯದಲ್ಲಿ ಕೆಸರೆರಚಾಟ ಮಾಮೂಲಿ. ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆರೆಸ್ಸೆಸ್ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದರು. ಇದಕ್ಕೆ ಉತ್ತರವಾಗಿ, ವಿದೇಶಿ ಮಹಿಳೆ ಸೋನಿಯಾ ಗಾಂಧಿಯ ಸೆರಗು ಹಿಡಿದುಕೊಂಡು ಓಡಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಆರ್‌ಎಸ್‌ಎಸ್‌, ಮೋದಿ ಅವರನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ ಸ್ಥಾನ ಮಾನಕ್ಕಾಗಿ ಪಕ್ಷಾಂತರ ಮಾಡುವ ಸಿದ್ದರಾಮಯ್ಯ ನೆಹರೂ ಮತ್ತು ಮೋದಿ ಅವರ ಹೋಲಿಕೆ, ಆರ್‌ಎಸ್‌ಎಸ್‌ ವಿದೇಶಿ ಸಂಘಟನೆ ಎಂಬ ಟೀಕೆ ಖಂಡನೀಯ. ಇಂತಹ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರು ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಆರ್‌ಎಸ್‌ಎಸ್‌ ಸ್ವಾತಂತ್ರ್ಯ ಪೂರ್ವದಿಂದಲೂ ರಾಷ್ಟ್ರಭಕ್ತಿ, ಹಿಂದುತ್ವ ಉಳಿಸಲು ಶ್ರಮಿಸುತ್ತಿದೆ. ನೆಹರೂ ಮತ್ತು ಅವರ ಸ್ನೇಹಿತರು ತಮ್ಮ ಅಧಿಕಾರದ ಆಸೆಗೆ ದೇಶವನ್ನೇ ಇಬ್ಭಾಗ ಮಾಡಿದ್ದರು. ಹಿಂದೂಸ್ತಾನ ಮತ್ತು ಪಾಕಿಸ್ತಾನ ಸೃಷ್ಟಿಸಿದ್ದರು. ಪ್ರಧಾನಿ ಮೋದಿ ಕಾಶ್ಮೀರದಲ್ಲಿದ್ದ ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನ ತೆಗೆದುಹಾಕಿ ಈ ದೇಶಕ್ಕೆ ಒಂದೇ ಸಂವಿಧಾನ ಮತ್ತು ಧ್ವಜ ಎಂಬ ನಿಯಮ ಜಾರಿಗೆ ತಂದಿದ್ದಾರೆ. ವಿಶ್ವವೇ ಅವರನ್ನು ಮೆಚ್ಚಿಕೊಂಡಿರುವ ನಾಯಕ ಎಂದು ಬಣ್ಣಿಸಿದರು.

ಅಲೆಮಾರಿ ಸಿದ್ದರಾಮಯ್ಯ ಅಧಿಕಾರಕ್ಕೋಸ್ಕರ ಒಂದುಸಲ ಚಾಮುಂಡೇಶ್ವರಿ, ಇನ್ನೊಮ್ಮೆ ಬಾದಾಮಿ. ಈಗ ಅಲ್ಲಿಯೂ ಸೋಲುವ ಭೀತಿಯಿಂದ ಬೆಂಗಳೂರಿನ ಜಮೀರ್ ಅಹಮದ್‌ ಕ್ಷೇತ್ರಕ್ಕೆ ಹೊರಟಿದ್ದಾರೆ. ಇಂತಹ ನಾಯಕರಿಗೆ ಜನರೇ ಸರಿಯಾದ ಉತ್ತರ ನೀಡುತ್ತಾರೆ ಎಂದರು.

ಸಿದ್ದರಾಮಯ್ಯಗೆ ತನ್ನ ಹಿನ್ನೆಲೆ ಬಗ್ಗೆ ಕಲ್ಪನೆನೇ ಇಲ್ಲ. ಅಲೆಮಾರಿಯಂತೆ ಸಿದ್ದರಾಮಯ್ಯ. ಯಾವ ಪಕ್ಷದಲ್ಲಿಯೂ ಕಾಣಿಸಿಕೊಳ್ಳಬಹುದು. ಜೆಡಿಎಸ್​ ಪಕ್ಷದಲ್ಲಿ ಇದ್ದರು, ಇನ್ಯಾವುದೋ ಪಕ್ಷಕ್ಕೆ ಹೋದರು, ಸಮಾಜವಾದಿ ಅಂತ ಹೇಳಿದ್ರು, ಈಗ ಕಾಂಗ್ರೆಸ್​ನಲ್ಲಿ ಇದ್ದಾರೆ. ಇನ್ನು ಸಿದ್ದರಾಮ್ಯನವರಿಗೆ ಆರ್​ಎಸ್​ಎಸ್​ ಬಗ್ಗೆ ಮಾತನಾಡುವುದಕ್ಕೆ ಯೋಗ್ಯತೆನೇ ಇಲ್ಲ ಎಂದು ಕಿಡಿ ಕಾರಿದ್ದಾರೆ.

Leave A Reply

Your email address will not be published.