ಬೆಳ್ತಂಗಡಿ | ವರ ಹಾರ ಹಾಕುವಾಗ ಕೈ ತಾಗಿಸಿದನೆಂದು ಹಾರವನ್ನೇ ಎಸೆದ ವಧು ! |ವಿಚಿತ್ರ ಕಾರಣಕ್ಕಾಗಿ ಮುರಿದುಬಿತ್ತು ಈ ಅದ್ದೂರಿ ಮದುವೆ

ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದು ತಾಳಿ ಕಟ್ಟುವ ಶುಭವೇಳೆಗಾಗಲೇ ವಿಚಿತ್ರ ಕಾರಣಗಳಿಗಾಗಿ ಮುರಿದುಬಿದ್ದ ಘಟನೆಯೊಂದು ಬೆಳ್ತಂಗಡಿ ತಾಲೂಕಿನಲ್ಲಿ ವರದಿಯಾಗಿದೆ.

ಬೆಳ್ತಂಗಡಿಯ ನಾರಾವಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಠಾಣಾ ಮೆಟ್ಟಿಲೇರಿದರೂ ಬೆಳಕಿಗೆ ಬರುವಲ್ಲಿ ತಡವಾಗಿದೆ.

ಬೆಳ್ತಂಗಡಿ ತಾಲೂಕಿನ ಯುವಕನೋರ್ವನ ಮದುವೆಯು ಮೂಡುಕೊಣಾಜೆ ಮೂಲದ ಯುವತಿಯೊಂದಿಗೆ ನಾರಾವಿಯ ದೇವಾಲಯವೊಂದರ ಸಮೀಪದಲ್ಲಿರುವ ಸಭಾಭವನದಲ್ಲಿ ನಿಗದಿಯಾಗಿತ್ತು. ಅದರಂತೆ ಅದ್ಧೂರಿ ಮದುವೆಗೆ ಅತಿಥಿಗಳು, ಹಿತೈಷಿಗಳು ಸೇರಿ ಸುಮಾರು 500 ಕ್ಕೂ ಹೆಚ್ಚು ಮಂದಿಯ ಭೂರೀ ಭೋಜನವೂ ತಯಾರಾಗಿತ್ತು. ಎಲ್ಲವೂ ಸಾಂಗವಾಗಿ ನಡೆದಿತ್ತು.

ಆದರೆ ಮದುಮಗ ವಧುವಿನ ಕುತ್ತಿಗೆಗೆ ಇನ್ನೇನು ಹಾರ ಹಾಕಬೇಕಿತ್ತು. ಅದರಂತೆ ಆತ ಹಾರ ಹಾಕುತ್ತಿದ್ದ.  ಆಗ ಶುರುವಾಗಿತ್ತು ಜಗಳ. ವರ ಹಾರ ಹಾಕುವಾಗ ವರನು ವಧುವಿಗೆ ಕೈ ತಾಗಿಸಿದ ಎನ್ನುತ್ತಾ ವಧು ತಗಾದೆ ತೆಗೆದಿದ್ದಾಳೆ. ವರ ಹಾರ ಹಾಕುವಾಗ, ವಧುವಿನ ಕೊರಳಿಗೆ ಮತ್ತು ಕಿವಿಗೆ ವರನ ಕೈ ಟಚ್ ಆಗಿದೆಯಂತೆ. ಅದೇ ಕಾರಣಕ್ಕೆ ವಧು ಸಿಟ್ಟಾಗಿದ್ದಾಳೆ. ಘಟನೆ ಒಟ್ಟಾರೆ ವಿಚಿತ್ರವಾಗಿ ಕಂಡಿದೆ. ತದನಂತರ ಮಾತುಕತೆಯ ಬಳಿಕ ಕಾರ್ಯಕ್ರಮ ಮುಂದುವರಿಯಿತಂತೆ. ಹೀಗೆ ಮುಂದುವರಿದು ಇನ್ನೇನು ಮುಹೂರ್ತದ ಸಮಯ ಕೂಡಿಬಂದಾಗ ವರನು ಇನ್ನೇನು ತಾಳಿ ಕಟ್ಟಬೇಕು ಎಂದು ಮುಂದಾದಾಗ ವಧು ತಾಳಿಯ ಸಹಿತ ಹೂವಿನ ಹಾರವನ್ನು ಎಸೆದು ಮದುವೆ ಬೇಡವೆಂದಿದ್ದಾಳಂತೆ. ಇದರಿಂದ ವರ ದಿಗ್ಭ್ರಮೆಗೊಂಡಿದ್ದು ಸಮಾರಂಭದಲ್ಲೇ ಹೆಣ್ಣು-ಗಂಡಿನ ಕುಟುಂಬಗಳೆರಡು ಮಾತಿಗೆ ಮಾತು ಬೆಳೆಸಿಕೊಂಡಿದ್ದು, ಸಣ್ಣ ಮಟ್ಟಿನ ಜಗಳ ಪ್ರಾರಂಭವಾದಾಗ ವೇಣೂರು ಠಾಣಾ ಪೊಲೀಸರ ಆಗಮನವಾಗಿದೆ.

ಬಳಿಕ ಪೊಲೀಸರ ಸಮ್ಮುಖದಲ್ಲಿ ಮಾತುಕತೆ ನಡೆದಿದ್ದು, ಈ ಸಂದರ್ಭದಲ್ಲಿ ವಧು ಗಂಭೀರ ಆರೋಪವನ್ನು ಮಾಡಿದಳಂತೆ. ಅದೇನೆಂದರೆ, ಮದುವೆಯ ನಿಶ್ಚಯ ಕಾರ್ಯಕ್ರಮಕ್ಕೆ ಬಂದ ವರ ಬೇರೆ, ಹೆಣ್ಣು ನೋಡಲು ಬಂದ ವರ ಬೇರೆ, ಈಗ ಮದುವೆಯಾಗುತ್ತಿರುವ ವರ ಬೇರೆಯವನೇ ಎಂದು ಅಚ್ಚರಿಯ ಮಾತನ್ನು ಹೇಳಿದಳಂತೆ.

ಇದರಿಂದಾಗಿ ಪ್ರಕರಣ ಕೆಲ ತಿರುವುಗಳನ್ನೂ  ಪಡೆದುಕೊಂಡಿದೆ.ವಧು ಮದುವೆಯನ್ನು ತಿರಸ್ಕರಿಸಲು ಕಾರಣ ಏನೆನ್ನುವುದು ಮಾತ್ರ ಇನ್ನೂ ನಿಗೂಢವಾಗುಳಿದಿದ್ದು, ಮದುವೆಯಲ್ಲಿ ಹೀಗೂ ನಾಟಕ ನಡೆಯುತ್ತದೆಯೇ ಎನ್ನುವ ಪ್ರಶ್ನೆ ಮದುವೆಗೆ ಬಂದ ಅತಿಥಿಗಳಲ್ಲಿ ಮೂಡಿದಲ್ಲದೇ, ಮದುವೆ ಮುರಿದುಬಿದ್ದ ಸುದ್ದಿಯು ಅರೆಕ್ಷಣಗಳಲ್ಲಿ ಎಲ್ಲೆಡೆ ಹಬ್ಬಿದ್ದರಿಂದ ಎರಡೂ ಕುಟುಂಬಗಳಲ್ಲಿ ಬೇಸರ ಮನೆ ಮಾಡಿದೆ. ತಾನು ವರಿಸುವ ಹುಡುಗನ ಕೈ ಆಕಸ್ಮತ್ತಾಗಿ ಆಕೆಯ ಕಿವಿ ಸವರಿದರೆ ಅದರಲ್ಲಿ ತಪ್ಪೇನು ?  ಮುಂದೆ ಹುಡುಗ ಹುಡುಗಿಯನ್ನು ಮುಟ್ಟಲಿಕ್ಕೆ ಇಲ್ಲವೇ, ಈಗ ಹೀಗಾಡುವವಳು ಮುಂದೆ ಹೇಗೆ ಸಂಸಾರ ನಡೆಸುತ್ತಾಳೆ ? ಮುಂತಾದ ಉತ್ತರವಿಲ್ಲದ ಪ್ರಶ್ನೆಗಳು ಜನರ ತಲೆ ತಿನ್ನುತ್ತಿವೆ. ಆದರೆ ಕೊನೆಗೆ ಮತ್ತೆ ಮದುವೆ ನಡೆಯುವುದು ಎಂದು ವಧುವಿನ ಕಡೆಯಿಂದ ನಿರ್ಧಾರ ಆಗಿದೆ. ಆದರೆ, ಮದುವೆಯ ದಿನವೇ ಹೀಗೆ ಆಡುವವಳು ಮುಂದೆ ಹೇಗೆ ಎಂಬ ಚಿಂತೆಯಲ್ಲಿದ್ದ ವರ ಹಿಂದೆ ಸರಿದಿದ್ದಾನೆ. ಮದುವೆ ಆಗುವ ಹುಡುಗನ ಮೇಲೆ ಮನಸ್ಸಿಲ್ಲದೆ ಹುಡುಗಿ ಹೀಗೆ ಕ್ಯಾತೆ ತೆಗೆದಿದ್ದಾಳೆ ಎನ್ನಲಾಗಿದೆ.

ಹುಡುಗನ ಕಡೆಯವರು ಈಗ 2 ಲಕ್ಷ ರೂ. ಮದುವೆ ನಷ್ಟ ಭರಿಸುವಂತೆ ವಧುವಿನ ಕಡೆಯವರಿಗೆ ಹೇಳಿದ್ದಾರೆಂಬ ಮಾಹಿತಿ ಇದೆ.

Leave A Reply