ಭಾರತೀಯ ಸೇನಾ ವಾಹನ ಸ್ಕಿಡ್ ಆಗಿ ಏಳು ಮಂದಿ ಯೋಧರು ಹುತಾತ್ಮ, ಹಲವರಿಗೆ ಗಾಯ

ಜಮ್ಮು-ಕಾಶ್ಮೀರ: ಭಾರತೀಯ ಸೇನಾ ವಾಹನ ಸ್ಕಿಡ್ ಆಗಿ ನದಿಗೆ ಬಿದ್ದ ಪರಿಣಾಮ ಏಳು ಮಂದಿ ಯೋಧರು ಹುತಾತ್ಮರಾಗಿದ್ದು, ಹಲವಾರು ಸೈನಿಕರು ಗಾಯಗೊಂಡಿರುವ ಘಟನೆ ಇಂದು ಲಡಾಖ್ ನ ಟುರ್ ಟುಕ್ ಸೆಕ್ಟರ್ ನಲ್ಲಿ ನಡೆದಿದೆ.

26 ಸೈನಿಕರ ತಂಡ ಪಾರ್ತಾಪುರದ ಟ್ರಾನ್ಸಿಟ್​​ ಕ್ಯಾಂಪ್​​ನಿಂದ ಮುಂದಿನ ಸ್ಥಳಕ್ಕೆ ಪ್ರಯಾಣಿಸುತ್ತಿತ್ತು. ಬೆಳಗ್ಗೆ 9 ಗಂಟೆಗೆ ಥೋಯಿಸ್​ನಿಂದ 25 ಕಿಲೋ ಮೀಟರ್ ದೂರ ಚಲಿಸಿದ ಬಳಿಕ ಸೇನಾ ವಾಹನ ಸ್ಕಿಡ್​​ ಆಗಿ ಲಡಾಖ್​ನ ತುರ್ತುಕ್​ ಸೆಕ್ಟರ್​ನ ಶ್ಯೋಕ್ ನದಿಯಲ್ಲಿ ಉರುಳಿ ಬಿದ್ದಿದೆ. ಪರಿಣಾಮ ಏಳು ಯೋಧರು ಹುತಾತ್ಮರಾಗಿದ್ದಾರೆ.

ಗಾಯಗೊಂಡ ಯೋಧರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವ ಕಾರ್ಯ ನಡೆಯುತ್ತಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.

ವಾಹನ ಸುಮಾರು 50-60 ಅಡಿ ಆಳಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ. ಇಲ್ಲಿಯವರೆಗೆ ಏಳು ಯೋಧರು ಹುತಾತ್ಮರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇತರ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

Leave A Reply

Your email address will not be published.