ಎಪಿಪಿ ನೇಮಕ ಕುರಿತ ಮುಖ್ಯ ಪರೀಕ್ಷೆ ಮುಂದೂಡಿಕೆ | ಹಲವು ಪ್ರಶ್ನೆಗಳಿಗೆ ಕಾರಣವಾಯಿತು ಇಲಾಖೆಯ ಈ ನಿರ್ಧಾರ!

ಬೆಂಗಳೂರು : ಮೇ 28 ಮತ್ತು 29ರಂದು ಆಯೋಜಿಸಲಾಗಿದ್ದ ಸಹಾಯಕ ಸರ್ಕಾರಿ ಅಭಿಯೋಜಕರ (ಎಪಿಪಿ) ನೇಮಕ ಕುರಿತ ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ.

ಹಿಂದೆ ಕೋವಿಡ್ ಮತ್ತು ಬೇರೆ ಬೇರೆ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದ್ದ ಪರೀಕ್ಷೆ ಈ ಬಾರಿ ಅಡಳಿತಾತ್ಮಕ ಕಾರಣಕ್ಕೆ ಮುಂದೂಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪರೀಕ್ಷಾ ದಿನ ಪ್ರಕಟಿಸಲಾಗುವುದು ಎಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಪ್ರಭಾರಿ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.

ಪಿಎಸ್ ಐ ಅಕ್ರಮ ನೇಮಕ ಪ್ರಕರಣದ ಹಿನ್ನೆಲೆಯಲ್ಲಿ ಕೆಪಿಎಸ್ ಸಿ ಹಲವು ಪರೀಕ್ಷೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿರುವ ಬೆನ್ನೆಲ್ಲೆ ಎಪಿಪಿ ನೇಮಕ ಮುಖ್ಯ ಪರೀಕ್ಷೆ ಮುಂದೂಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಆದರೆ ಆ ‘ಆಡಳಿತಾತ್ಮಕ’ ಕಾರಣ ಏನು ಎಂದು ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ.

ಮೊದಲೇ ಎಪಿಪಿಗಳಿಲ್ಲದೆ ನ್ಯಾಯಾಲಯಗಳಲ್ಲಿ ಅಪರಾಧ ಪ್ರಕರಣಗಳನ್ನು ನಡೆಸಲು ಕಷ್ಟವಾಗಿರುವಾಗ ಮತ್ತೆ ಪರೀಕ್ಷೆ ಮುಂದೂಡಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದ್ದು, ಅದಕ್ಕಾಗಿ ಸಜ್ಜಾಗುತ್ತಿದ್ದ ಅಭ್ಯರ್ಥಿಗಳಿಗೂ ಸಹ ನಿರಾಶೆ ಮೂಡಿಸಿದೆ. ಹೊಸ ವಿಧಾನದಲ್ಲಿ ಪರೀಕ್ಷೆ ನಡೆಸಲು ಅಭಿಯೋಜನಾ ಇಲಾಖೆ ಬಯಸಿತ್ತು. ಆದರೆ ಹಳೆಯ ವಿಧಾನದಲ್ಲಿಯೇ ಮುಂದುವರಿಸಬೇಕೆಂದು ವಕೀಲರ ಸಂಘ ಆಗ್ರಹಿಸಿತ್ತು.

ಹೈಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ, ಅಭಿಯೋಜನಾ ಇಲಾಖೆಯಲ್ಲಿ ಖಾಲಿ ಇದ್ದ ಎಪಿಪಿಗಳ ನೇಮಕವನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿದೆ. ಆದರೆ ನಾನಾ ಕಾರಣಗಳಿಂದಾಗಿ ಅದು ಮುಂದೆ ಹೋಗುತ್ತಲೇ ಇದ್ದು, ಇದು ನ್ಯಾಯಾಂಗ ಪರಿಣಾಮದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. 300ಕ್ಕೂ ಅಧಿಕ ಎಎಪಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಪ್ರಾಥಮಿಕ ಪರೀಕ್ಷೆಗೆ ಸಾವಿರಾರು ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇದೀಗ ಮುಖ್ಯ ಪರೀಕ್ಷೆಗೆ ಸುಮಾರು 2 ಸಾವಿರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

Leave A Reply

Your email address will not be published.