ಮಂಗಳೂರು : ದರ್ಗಾ ಕೆಡಹುವಾಗ ಗುಡಿ ಪತ್ತೆ | ಇಂದು ತಾಂಬೂಲ ಪ್ರಶ್ನೆ , ಮಸೀದಿ ಸುತ್ತಮುತ್ತ 144 ಸೆಕ್ಷನ್ | ಜನರಲ್ಲಿ ಹೆಚ್ಚಿದ ಕುತೂಹಲ

ಇಂದು ಮಂಗಳೂರಿನ ಹೊರವಲಯದ ಗಂಜಿಮಠದ ಮಳಲಿ ಮಸೀದಿಯ ಸುತ್ತಮುತ್ತ 500 ಮೀಟರ್ ದೂರದಲ್ಲಿ ಸೆಕ್ಷನ್ 144 ಜಾರಿ ಇರಲಿದೆ. ಮಸೀದಿ ನವೀಕರಿಸುವ ವೇಳೆ ಹಿಂದೂ ದೇವಾಲಯದ ಕುರುಹುಗಳು ಕಂಡು ಬಂದ ಕಾರಣ ಅಲ್ಲಿ ಇಂದು ವಿಶ್ವ ಹಿಂದೂ ಪರಿಷತ್(ವಿಹೆಚ್‌ಪಿ) ಮತ್ತು ಬಜರಂಗದಳ ತಾಂಬೂಲ ಪ್ರಶ್ನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮೀಷನರ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಕಳೆದ ಎಪ್ರಿಲ್ 21 ರಂದು ಮಳಲಿಯ ಮಸೀದಿಯ ನವೀಕರಣದ ಕಾಮಗಾರಿ ವೇಳೆ ದೇಗುಲದ ಶೈಲಿ ಪತ್ತೆಯಾಗಿತ್ತು. ಬಳಿಕ ಮಂಗಳೂರು ತಹಶೀಲ್ದಾರ್ ಅವರು ಕಾಮಗಾರಿ ಮುಂದುವರಿಸದಂತೆ ಸೂಚಿಸಿದ್ದರು. ಆ ಬಳಿಕ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲಾಗಿತ್ತು. ಇದರ ಮಧ್ಯೆ ವಿಹೆಚ್‌ಪಿ ಮತ್ತು ಬಜರಂಗದಳದಿಂದ ಹಿಂದೂಗಳ ಧಾರ್ಮಿಕ ನಂಬುಗೆಯಾಗಿರುವ ಅಷ್ಟಮಂಗಲ ನಡೆಸಲು ನಿರ್ಧರಿಸಿದ್ದು ಪೂರ್ವಭಾವಿಯಾಗಿ ಇಂದು ತಾಂಬೂಲ ಪ್ರಶ್ನಾ ಚಿಂತನೆಯನ್ನು ಮಳಲಿಯ ರಾಮಾಂಜನೆಯ ಭಜನಾ ಮಂದಿರದಲ್ಲಿ ನಡೆಸಲು ನಿರ್ಧರಿಸಿದೆ.

ಹಿಂದುತ್ವ ಸಂಘಟನೆಗಳ ನೇತೃತ್ವದಲ್ಲಿ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ತೆಂಕ ಉಳಿಪಾಡಿ ಗ್ರಾಮದ ಜೋಡು ತಡಮೆಯ ಬಳಿಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಪೂರ್ವಾಪರ ತಿಳಿದುಕೊಳ್ಳಲು ಮೇ 25ರಂದು ಬೆಳಗ್ಗೆ 8.30ರಿಂದ ತಾಂಬೂಲ ಪ್ರಶ್ನೆ ಕಾರ್ಯಕ್ರಮ ನಡೆಸಲು ಹೊರಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಳಲಿ ಪೇಟೆ ಜುಮಾ ಮಸೀದಿಯ ಸುತ್ತಮುತ್ತಲಿನ 500 ಮೀಟರ್ (ಕಾಚಿಲಕೋಡಿಯಿಂದ ಮಳಲಿ ಕಡೆಗೆ ಬರುವ ರಸ್ತೆ, ಗಂಜಿಮಠದಿಂದ ಮಳಲಿ ಮಸೀದಿ ಕಡೆಗೆ ಬರುವ ರಸ್ತೆ ಹಾಗೂ ಕೈಕಂಬ ಕಡೆಯಿಂದ ಜೋಡು ತಡಮೆ ರಸ್ತೆ)ವರೆಗೆ ಮೇ 24ರ ರಾತ್ರಿ 8ರಿಂದ ಮೇ 26ರ ಬೆಳಗ್ಗೆ 8ರವರೆಗೆ ಸೆ.144ರ ಅನ್ವಯ ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಮಂಗಳೂರಿನ ಹೊರವಲಯದ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ಹಿಂದೂ ದೇವಸ್ಥಾನದ ಶೈಲಿ ಪತ್ತೆಯಾಗಿರೋ ಹಿನ್ನಲೆಯಲ್ಲಿ ಸಾಕಷ್ಟು ಚರ್ಚೆ ಆರಂಭಗೊಂಡಿದೆ. ಎಪ್ರಿಲ್ 21 ರಂದು ಈ ದರ್ಗಾವನ್ನು ನವೀಕರಣಗೊಳಿಸೋದಕ್ಕಾಗಿ ಎದುರಿನ ಭಾಗವನ್ನು ನೆಲ ಸಮಗೊಳಿಸಲಾಗಿತ್ತು. ಈ ವೇಳೆ ದರ್ಗಾದ ಒಳ ಭಾಗದಲ್ಲಿ ಗುಡಿಯ ಶೈಲಿ, ದೇವಸ್ಥಾನದಲ್ಲಿರುವಂತಹ ಕಂಬಗಳು, ತೋಮರ, ಬಾಗಿಲುಗಳು ಪತ್ತೆಯಾಗಿತ್ತು. ಹೀಗಾಗಿ ಇದು ಜೈನ ಅಥವಾ ಹಿಂದೂ ದೇವಸ್ಥಾನ ಆಗಿರೋ ಸಾಧ್ಯತೆ ಇದೆ ಎಂದು ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲು ಏರಿತ್ತು. ಇದರ ನಡುವೆ ವಿಹೆಚ್‌ಪಿ ಇಂದು ತಾಂಬೂಲ ಪ್ರಶ್ನೆ ಇಡುತ್ತಿದ್ದು, ಈ ಪ್ರಶ್ನೆಯಲ್ಲಿ ಸಿಕ್ಕ ಅಂಶದಂತೆ ಮುಂದುವರಿಯಲು ತೀರ್ಮಾನಿಸಿದೆ.

Leave A Reply

Your email address will not be published.