ದ.ಕ.ಜಿಲ್ಲೆಯಲ್ಲಿ ಆರಂಭವಾಗಲಿದೆ ಮೊತ್ತಮೊದಲ “ಕತ್ತೆ ಹಾಲು ಮಾರಾಟ ಡೇರಿ” | ಬಂಟ್ವಾಳದ ಮಂಚಿಯಲ್ಲಿ ಸ್ಥಾಪನೆ!

ಮಂಗಳೂರು : ರಾಜ್ಯದಲ್ಲೇ ಮೊತ್ತ ಮೊದಲ ಬಾರಿಗೆ ಕತ್ತೆ ಹಾಲು ಮಾರಾಟ ಮಾಡುವ ಡೇರಿ ಫಾರ್ಮೊಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದ್ದು, ರೈತರಿಗೆ ಇದು ಅನುಕೂಲವಾಗಲಿದೆ. ಇದರಿಂದ ಕತ್ತೆ ಸಾಕಣೆಯೊಂದು ಹೈನು ಉದ್ಯಮವಾಗಿ ಬೆಳೆಯಲು ಅವಕಾಶ ಸಿಗಲಿದೆ.

ಕೊರೊನಾ ಸಾಂಕ್ರಾಮಿಕ ರೋಗ ಬಂದ ಪೌಷ್ಟಿಕಾಂಶಗಳನ್ನು ಹೊಂದಿರುವ ಕತ್ತೆ ಹಾಲಿಗೆ
ಎಲ್ಲಿಲ್ಲದ ಬೇಡಿಕೆ ಬಂದಿದೆ. ಭಾರತದಲ್ಲೇ ಸದ್ಯಕ್ಕೆ ಒಂದು ಲೀಟರ್ ಕತ್ತೆ ಹಾಲಿಗೆ ಮಾರುಕಟ್ಟೆಯಲ್ಲಿ ಸುಮಾರು 5ರಿಂದ 10 ಸಾವಿರ ರೂ. ಇದೆ. ವಿದೇಶದಲ್ಲಿಯೂ ಇದಕ್ಕೆ ಬಹು ಬೇಡಿಕೆ ಇದೆ. ವಿದೇಶದಲ್ಲಿ ಒಂದು ಲೀಟರ್ ಕತ್ತೆ ಹಾಲು ಬರೋಬ್ಬರಿ 12 ಸಾವಿರ ರೂ.ವರೆಗೆ ಮಾರಾಟವಾಗುತ್ತಿದೆ.

ಪ್ರಾಣಿಗಳ ಹಾಲಿನ ಪೈಕಿ ಕತ್ತೆ ಹಾಲು ಸೌಂದರ್ಯ ವರ್ಧಕ ಹಾಗೂ ಅತ್ಯಧಿಕ ಪ್ರೋಟೀನ್ ಅಂಶ ಒಳಗೊಂಡಿರುವುದು ನಾನಾ ಸಂಶೋಧನೆಗಳಿಂದ ದೃಢವಾಗಿದೆ. ಕತ್ತೆ ಸಾಕಣೆಯನ್ನೇ ಹೈನುಗಾರಿಕೆ ರೀತಿ ಉದ್ಯಮವಾಗಿ ಬೆಳೆಸುವುದಕ್ಕೆ ವಿಪುಲ ಅವಕಾಶಗಳು ತೆರೆದುಕೊಳ್ಳುತ್ತಿದೆ.

ಗುಜರಾತ್‌ನಲ್ಲಿರುವ “ಹಲಾರಿ’ ಕತ್ತೆ ತಳಿ ಸಂಶೋಧನೆಗೆ ಈಗಾಗಲೇ ಹರಿಯಾಣದ ಹಿಸಾರ್‌ನಲ್ಲಿ ಕೇಂದ್ರ ಸರಕಾರ ಡೇರಿ ಫಾರ್ಮ್ ಸ್ಥಾಪಿಸಿದೆ. ಭವಿಷ್ಯದಲ್ಲಿ ಕತ್ತೆ ಹಾಲಿನ ಬೇಡಿಕೆ ಗಮನದಲ್ಲಿಟ್ಟುಕೊಂಡು ಚೊಚ್ಚಲ ಕತ್ತೆ ಹಾಲು ವಹಿವಾಟಿನ ಡೇರಿ ಸ್ಥಾಪನೆಗೆ ದ.ಕ.ಜಿಲ್ಲೆ ಸಾಕ್ಷಿಯಾಗಲಿದೆ.

ಇಷ್ಟು ಮಾತ್ರವಲ್ಲದೇ ಕತ್ತೆ ಗೊಬ್ಬರಕ್ಕೂ ಹೆಚ್ಚು ಬೇಡಿಕೆ ಇದ್ದು, ಕೃಷಿ ಚಟುವಟಿಕೆಗೆ ತುಂಬಾ ಉಪಯೋಗವಾಗಲಿದೆ. ಒಂದು ಕೆ.ಜಿ. ಗೊಬ್ಬರಕ್ಕೆ ಸುಮಾರು 600ರಿಂದ 700 ರೂ. ಬೆಲೆ ಇದೆ. ಹಾಲು ಮತ್ತು ಗೊಬ್ಬರ ಲಾಭದ ಲೆಕ್ಕಾಚಾರದಲ್ಲಿ ಕತ್ತೆ ಸಾಕಣೆಯತ್ತ ರೈತರನ್ನು ಪ್ರೋತ್ಸಾಹಿಸುವ ಜತೆಗೆ ಸೂಕ್ತ ತರಬೇತಿ ಕೂಡ ನೀಡಲಾಗುವುದು. ಕತ್ತೆ ಸಾಕುವ ರೈತರು ತಿಂಗಳಿಗೆ 30ರಿಂದ 40 ಸಾವಿರ ರೂ. ಸಂಪಾದನೆ ಮಾಡಬಹುದು.

ಸುಮಾರು 2 ಎಕರೆ ಯಲ್ಲಿ ಡಾಂಕಿ ಮಿಲ್ಕ್ ಫಾರ್ಮ್ ಮಾಡಲಾಗುತ್ತಿದ್ದು, ಗುಜರಾತ್‌ನಿಂದ ಉತ್ತಮ ತಳಿಯ 32 ಕತ್ತೆಗಳನ್ನು ತರಿಸಲಾಗುತ್ತಿದೆ. ಆ ಪೈಕಿ ಏಳು ಕತ್ತೆಗಳನ್ನು ಮರಿ ಉತ್ಪಾದನೆಗೆ ಬಳಸಿಕೊಂಡು ದಕ್ಷಿಣ ಕನ್ನಡ ಸೇರಿ ಕರಾವಳಿ ಭಾಗದ ರೈತರಿಗೆ ಕತ್ತೆ ಸಾಕಣೆಗೆ ಅವಕಾಶ ನೀಡಲಾಗುವುದು. ಸಾಮಾನ್ಯವಾಗಿ ಒಂದು ಕತ್ತೆ ದಿನಕ್ಕೆ ಅರ್ಧ ಲೀಟರ್ ಮಾತ್ರ ಹಾಲು ಕೊಡುತ್ತದೆ. ಡೈರಿಯಲ್ಲಿ ಪ್ರಾರಂಭದಲ್ಲಿ ನಾವು ಪ್ರತೀದಿನ 8 ರಿಂದ 10 ಲೀಟರ್‌ನಷ್ಟು ಹಾಲು ಉತ್ಪಾದಿಸಿ 100 ಮತ್ತು 200 ಮಿ.ಲೀ.ನ ಸಣ್ಣ ಬಾಟಲಿಗಳಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ.

ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿರುವ ರಾಮನಗರ ಜಿಲ್ಲೆಯ ಶ್ರೀನಿವಾಸ ಗೌಡ ಅವರು ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಕತ್ತೆ ಹಾಲಿನ ಡೇರಿ ಪ್ರಾರಂಭಿಸುವುದಕ್ಕೆ ತೀರ್ಮಾನಿಸಿದ್ದಾರೆ. ಪ್ರಸ್ತುತ ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಅಬಿಬೇಬಿ ಅವರು 3 ವರ್ಷಗಳ ಹಿಂದೆ ಕತ್ತೆ ಹಾಲಿನ ಉಪ ಉತ್ಪನ್ನಗಳ ಡೇರಿ ಪ್ರಾರಂಭಿಸಿ ಯಶಸ್ಸು ಸಾಧಿಸಿದ್ದಾರೆ.

ತಮಿಳುನಾಡಿನಲ್ಲಿಯೂ ಕೆಲವು ಕಡೆ ಕತ್ತೆ ಹಾಲನ್ನು ಸೌಂದರ್ಯ ವರ್ಧಕದಲ್ಲಿ ಬಳಸುವುದಕ್ಕೆ ಮಾರಾಟ ಮಾಡಲಾಗುತ್ತಿದೆ. ಹಲವು ಸಂಶೋಧನೆಗಳ ಪ್ರಕಾರ ಕತ್ತೆ ಹಾಲಿನಲ್ಲಿ ಕೊಬ್ಬಿನಾಂಶ ಕಡಿಮೆಯಿದ್ದು, ಪ್ರೊಟೀನ್ ಪ್ರಮಾಣ ಹೇರಳವಾಗಿದೆ. ಈ ವಿನೂತನ ಪ್ರಯತ್ನ ರೈತರಿಗೆ ಅನುಕೂಲವಾಗುವಂತೆ ಕತ್ತೆ ಹಾಲಿನ ಡೇರಿಯನ್ನು ಪ್ರೋತ್ಸಾಹಿಸುವುದಕ್ಕೆ ಸರಕಾರದ ಕಡೆಯಿಂದ ಎಲ್ಲ ರೀತಿಯ ಉತ್ತೇಜನ ನೀಡಲಾಗುವುದು

Leave A Reply

Your email address will not be published.