ಬಸ್ ನಿಂದ ಇಳಿಯಲು ತಡ ಮಾಡಿದ್ದಕ್ಕೆ ಮಹಿಳೆಗೆ ಕಪಾಳಮೋಕ್ಷ ಮಾಡಿದ ಬಸ್ ಕಂಡಕ್ಟರ್ !!

ಬಸ್ ನಿಲ್ದಾಣದ ಬಳಿ ಬೆಳ್ಳಂಬೆಳಗ್ಗೆ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದೆ.

39 ವರ್ಷದ ಮಹಿಳೆ ತಮ್ಮ ಇಬ್ಬರು ಮಕ್ಕಳೊಂದಿಗೆ ಕೊಪ್ಪದಿಂದ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಬಸ್ ನಿಂದ ಇಳಿಯಲು ಮಹಿಳೆ ತಡ ಮಾಡಿದ್ದು, ಈ ವೇಳೆ ಕಂಡಕ್ಟರ್ ರವಿಕುಮಾರ್ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದಲ್ಲಿ ಕಂಡಕ್ಟರ್ ರವಿಕುಮಾರ್ ಮಹಿಳೆಯ ಕೆನ್ನೆಗೆ ಹೊಡೆದಿದ್ದಾನೆ.

ಇದರಿಂದ ಆಕ್ರೋಶಗೊಂಡ ಮಹಿಳೆ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಗಸ್ತು ಪೊಲೀಸರು ಕಂಡಕ್ಟರ್‌ಗೆ ಭದ್ರತೆ ಒದಗಿಸಿ ಬಾಗಲಗುಂಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಕಂಡಕ್ಟರ್‌ನನ್ನು ಐಪಿಸಿಯ ಸೆಕ್ಷನ್ 354 ರ ಅಡಿಯಲ್ಲಿ ಬಂಧಿಸಲಾಗಿದೆ. ಅಲ್ಲದೆ, ಕರ್ತವ್ಯದಿಂದಲೂ ಅಮಾನತು ಮಾಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಬಂಧಿತ ರವಿಕುಮಾರ್ ಕೆಎಸ್‌ಆರ್‌ಟಿಸಿಯ ಬೆಂಗಳೂರು ಕೇಂದ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಶೃಂಗೇರಿಯಿಂದ ಬೆಂಗಳೂರು ನಡುವೆ ಕಾರ್ಯಾಚರಣೆ ಮಾಡುತ್ತಿದ್ದ ಬಸ್’ನ ನಿರ್ವಾಹಕರಾಗಿದ್ದರು.

ಮಹಿಳೆ ಹಾಗೂ ನಿರ್ವಾಹಕನ ನಡುವೆ ಅನಾವಶ್ಯಕವಾಗಿ ಮಾತಿನ ಚಕಮಕಿ ನಡೆದಿದ್ದು, ಇದರಿಂದ ಮಹಿಳೆ ಮೇಲೆ ನಿರ್ವಾಹಕ ಹಲ್ಲೆ ನಡೆಸಿದ್ದಾನೆ. ದೂರಿನ ಆಧಾರದ ಮೇಲೆ ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆ ಕೆಎಸ್‌ಆರ್‌ಟಿಸಿಯ ಪ್ರಮುಖ ಆದ್ಯತೆಯಾಗಿದೆ. ಘಟನೆಗೆ ಕೆಎಸ್‌ಆರ್‌ಟಿಸಿ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಗಳು ಸಂತ್ರಸ್ತ ಮಹಿಳೆಯನ್ನು ಖುದ್ದು ಭೇಟಿಯಾಗಿ ಮಾತುಕತೆ ನಡೆಸಿ ಕ್ಷಮೆಯಾಚಿಸಿದ್ದಾರೆಂದು ಕೆಎಸ್‌ಆರ್‌ಟಿಸಿ ಹೇಳಿಕೆಯಲ್ಲಿ ತಿಳಿಸಿದೆ.

Leave A Reply

Your email address will not be published.