ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ ಪ್ರಕರಣ ಬೇಧಿಸಿದ ಪೊಲೀಸರು : ಈ ಕೃತ್ಯದ ಮಾಸ್ಟರ್ ಮೈಂಡ್ ಓರ್ವ ಅಪ್ರಾಪ್ತ ಬಾಲಕ| ಈತನ ಬಗ್ಗೆ ತಿಳಿದರೆ ಶಾಕ್ ಆಗುವುದು ಖಂಡಿತ

ಕಳೆದ ಏಪ್ರಿಲ್‌ನಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಲವು ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಹಾಕಲಾಗಿದೆ ಎಂದು ಬೆದರಿಕೆ ಇ-ಮೇಲ್ ಬಂದಿದ್ದವು. ಈ ಬಗ್ಗೆ ವರದಿ ಕೂಡಾ ಮಾಡಲಾಗಿತ್ತು. ಪೊಲೀಸರ ತನಿಖೆ ಈ ‌ನಿಟ್ಟಿನಲ್ಲಿ ತೀವ್ರವಾಗಿತ್ತು. ಇದೀಗ ಈ ಇ-ಮೇಲ್ ಬೆನ್ನತ್ತಿರುವ ಪೋಲೀಸರಿಗೆ ಮಹತ್ವದ ಮಾಹಿತಿಯೊಂದು ದೊರಕಿದೆ.

ಪೊಲೀಸರಿಗೆ ಇದೀಗ ಇದರ ಹಿಂದಿರುವ ಮಾಸ್ಟರ್‌ಮೈಂಡ್ ಯಾರು ಎಂಬ ಸುಳಿವು ಸಿಕ್ಕಿದೆ. ಅಚ್ಚರಿಯ ವಿಷಯ ಎಂದರೆ ಈತ ಓರ್ವ ಬಾಲಕ, 17 ವರ್ಷದ ಬಾಲಕನೇ ಇಂಥದ್ದೊಂದು ಇ-ಮೇಲ್ ಕಳುಹಿಸಿದ್ದಾನೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.

ತಮಿಳುನಾಡು ಮೂಲದ ಸಲೀಂ ಎಂಬ 17ರ ಬಾಲಕ ಇದರ ಹಿಂದೆ ಇದ್ದಾನೆ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಈತ ಮಾಡಿರುವ ಕಾರ್ಯಗಳನ್ನು ಕೇಳಿದರೆ ಎಂಥವರೂ ನಿಬ್ಬೆರಗು ಮಾಡುವುದು ಗ್ಯಾರೆಂಟಿ. ಏಕೆಂದರೆ, ಸಲೀಂ ಸಾಫ್ಟ್‌ವೇರ್ ಕಂಪನಿ ಮಾಡುವ ಕನಸು ಹೊಂದಿದ್ದ ಎನ್ನಲಾಗಿದೆ. ಒಂದೇ ಸಲಕ್ಕೆ ಬಹಳಷ್ಟು ಮೇಲ್‌ಗಳನ್ನು ಕಳುಹಿಸುವ ಬೋಟ್ ಸಾಫ್ಟ್‌ವೇರ್ ಪ್ರೋಗ್ರಾಮ್ ನ್ನು ಈತ ಡೆವೆಲಪ್ ಮಾಡಿದ್ದ. ಇದನ್ನು ಟೆಲಿಗ್ರಾಂ ಆ್ಯಪ್ ಮೂಲಕ ವಿದೇಶಿಯರಿಗೆ ಕಳುಹಿಸಿರುವುದು ತಿಳಿದುಬಂದಿದೆ. ತಾನು ಸಿದ್ಧಪಡಿಸಿದ್ದ ಕಂಪ್ಯೂಟರ್ ಪ್ರೋಗ್ರಾಂನ್ನು ವಿದೇಶಿಯರಿಗೆ ಮಾರಾಟ ಮಾಡಿದ್ದ. ಇದನ್ನು ಬಳಸಿ ದುಷ್ಕರ್ಮಿಗಳು ಬೆಂಗಳೂರು ಮತ್ತು ಭೋಪಾಲ್ ಶಾಲೆಗಳಿಗೆ ಬೆದರಿಕೆಯ ಮೇಲ್ ಕಳುಹಿಸಿದ್ದರು ಎನ್ನಲಾಗುತ್ತಿದೆ.

ಇ-ಮೇಲ್ ಐಪಿ ವಿಳಾಸದ ಮೂಲಕ ಪೊಲೀಸರು ಈತನನ್ನು ಪತ್ತೆ ಹಚ್ಚಿದ್ದು, ತನಿಖೆ ಮುಂದುವರೆದಿದೆ. ಯಾಕೆ ಹೀಗೆ ಮೇಲ್ ಕಳುಹಿಸಿದ್ದ ಎಂಬ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮಾಡುತ್ತಿದ್ದಾರೆ.

ಘಟನೆ ಹಿನ್ನೆಲೆ : ಬೆಂಗಳೂರಿನ ಕೆಲವೊಂದು ಶಾಲೆಗಳಿಗೆ ಬಾಂಬ್ ಹಾಕಿರುವ ಘಟನೆಯೊಂದು ಭಾರೀ ಸಂಚಲನ ಮೂಡಿಸಿತ್ತು. ಇದು ಶಾಲೆಗಳ ಆಡಳಿತ ಮಂಡಳಿ ಮಾತ್ರವಲ್ಲದೇ ಪಾಲಕರು, ಶಿಕ್ಷಕರನ್ನು ಅಕ್ಷರಶಃ ಬೆದರುವಂತೆ ಮಾಡಿತ್ತು ಈ ಇ-ಮೇಲ್.

“ನಿಮ್ಮ ಶಾಲೆಯಲ್ಲಿ ಅತ್ಯಂತ ಶಕ್ತಿಶಾಲಿಯುತ ಬಾಂಬ್ ಅಳವಡಿಸಲಾಗಿದೆ. ಇದು ಜೋಕ್ ಅಲ್ಲ. ಈ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿ, ನೂರಾರು ಜೀವಗಳನ್ನು ಉಳಿಸಿ. ದಯವಿಟ್ಟು ತಡ ಮಾಡಬೇಡಿ. ಸದ್ಯ ಎಲ್ಲರ ಜೀವ ನಿಮ್ಮ ಕೈಯಲ್ಲಿದೆ “ಎಂದು ಮೇಲ್ ನಲ್ಲಿ ಬರೆಯಲಾಗಿತ್ತು‌

Leave A Reply

Your email address will not be published.