ಪುತ್ತೂರು : ಗಾಂಜಾ ಸಾಗಾಟ ಆರೋಪಿಯ ಬಂಧನ |5.86 ಲಕ್ಷ ಮೌಲ್ಯ ಗಾಂಜಾ ವಶಕ್ಕೆ

ಪುತ್ತೂರು: ಗಾಂಜಾ ಸರಬರಾಜುದಾರ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಕೆದಿಲ ಗ್ರಾಮದ ಪೇರಮೊಗ್ರು ಎಂಬಲ್ಲಿ ರವಿವಾರ ಸಂಜೆ ನಡೆದಿದೆ.

ವಿಟ್ಲ ಕುಂಡಡ್ಕ ನಿವಾಸಿ ಮಹಮ್ಮದ್ ಮುವಾಝ್(30) ಬಂಧಿತ ಆರೋಪಿ. ಈತನಿಂದ ಪಿಸ್ತೂಲ್, ಸಜೀವ ಗುಂಡು, ಕಾರು, ಗಾಂಜಾ ಸೇರಿದಂತೆ ಸುಮಾರು ರೂ. 5.86 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಘಟನೆ ಹಿನ್ನೆಲೆ: ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರು ಶಾಂತಿಗೋಡು ಗ್ರಾಮದ ವೀರಮಂಗಲದಲ್ಲಿ ರೈಲ್ವೇ ಹಳಿಯ ಸಮೀಪ ಗಾಂಜಾವನ್ನು ಹಿಡಿದುಕೊಂಡಿದ್ದ ಶಫೀಕ್ ಕೆ.ವಿ (24) , ರಾಝೀಕ್ (28 ) ರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆರೋಪಿಗಳು ತಮಗೆ ಗಾಂಜಾ ಸರಬರಾಜು ಮಾಡಿದವನ ಹೆಸರನ್ನು ಹೇಳಿದ್ದಾರೆ. ಅದರಂತೆ ರವಿವಾರ ಸಂಜೆ ಮಹಮ್ಮದ್ ಮುವಾಝ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಮುವಾಝ್ ಮಂಗಳೂರಿನಿಂದ ಗಾಂಜಾ ಮಾರಾಟ ಮಾಡಿಕೊಂಡು ಕಾರಿನಲ್ಲಿ ಬರುತ್ತಿದ್ದಂತೆ ಅವರನ್ನು ಬಂಧಿತ ಆರೋಪಿಗಳ ಮೂಲಕ ಕೆದಿಲ ಗ್ರಾಮದ ಪೇರಮೊಗ್ರು ಸಮೀಪ ಬರುವಂತೆ ಮಾಡಿ ಅಲ್ಲಿ ಕಾರನ್ನು ನಿಲ್ಲಿಸಿ ಆರೋಪಿ ಪರಾರಿಯಾಗುತ್ತಿದ್ದಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮತ್ತು ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರ ನಿರ್ದೇಶನದಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಅವರ ಮಾರ್ಗದರ್ಶನದಂತೆ ಎಸ್.ಐ ನಸ್ರೀನ್ ತಾಜ್ ಚಟ್ಟರಕಿ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.