ಬ್ರಹ್ಮಾವರ:ಅರೆಕ್ಷಣದಲ್ಲಿ ಸುಟ್ಟುಹೋದ ಹಲವು ವರ್ಷಗಳ ಪ್ರೀತಿ!! | ಕಾರಿನಲ್ಲಿ ಜೋಡಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು

0 11

ಅವರಿಬ್ಬರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮುಂದೆ ಮದುವೆಯಾಗಿ ಖುಷಿಯಲ್ಲಿ ಜೀವನ ಸಾಗಿಸಬೇಕೆಂಬ ಕನಸನ್ನೂ ಹೊತ್ತಿದ್ದ ಆ ಜೋಡಿಯ ಕನಸು ಅಕ್ಷರಶಃ ಸುಟ್ಟು ಬೂದಿಯಾಗಿದೆ. ಮನೆಯವರ ವಿರೋಧದ ನಡುವೆಯೂ ಮದುವೆಯಾದ ನವ ಜೋಡಿಯು ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾದ ಕೂಡಲೇ ದಿಕ್ಕು ತೋಚದೆ ಆತ್ಮಹತ್ಯೆಯ ದಾರಿ ಹಿಡಿದಿದ್ದು, ಹಲವು ವರ್ಷಗಳ ಪ್ರೀತಿ ಅರೆಘಳಿಗೆಯಲ್ಲೇ ಸುಟ್ಟುಹೋಗಿದೆ.

ಹೌದು, ಮೇ 22 ರ ಮುಂಜಾನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸುಟ್ಟು ಕರಕಲಾದ ಕಾರೊಂದರಲ್ಲಿ ಜೋಡಿಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಯುವತಿ ಹಾಗೂ ಯುವಕನ ಗುರುತು ಪತ್ತೆಯಾಗಿದ್ದು, ಮನೆಯವರು ಕುಟುಂಬಿಕರು ಉಡುಪಿಗೆ ಆಗಮಿಸಿದ್ದರು.

ಮೃತರನ್ನು ಮೂಲತಃ ಬೆಂಗಳೂರಿನ ಹೆಬ್ಬಾಳದ ಯಶವಂತ್ ಹಾಗೂ ಜ್ಯೋತಿ ಎಂದು ಗುರುತಿಸಲಾಗಿದ್ದು, ಇಬ್ಬರೂ ಒಂದೇ ಪ್ರಾಯದವರಾಗಿದ್ದು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.ಇವರಿಬ್ಬರ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತವಾದ ಕೂಡಲೇ ಜೋಡಿಯು ಬೆಂಗಳೂರಿನಿಂದ ಮಂಗಳೂರಿನತ್ತ ಮುಖಮಾಡಿದೆ. ಹಾಗೇ ಬೈಕಿನಲ್ಲಿ ಮಂಗಳೂರಿಗೆ ಬಂದ ಜೋಡಿಯು, ಮದುವೆಯೂ ಆಗಿದ್ದು ನವ ದಂಪತಿಗಳಾಗಿ ಜಿಲ್ಲೆಯ ಎಲ್ಲೆಡೆ ಸುತ್ತಾಟ ನಡೆಸಿದ್ದರು.

ತಮ್ಮ ಮದುವೆಯ ಕೆಲ ತುಣುಕುಗಳನ್ನು ಮನೆಯವರಿಗೆ ಕಳುಹಿಸಿದಾಗ ಇಬ್ಬರ ಮನೆಯಲ್ಲೂ ತೀವ್ರ ವಿರೋಧ ವ್ಯಕ್ತವಾಗಿದ್ದು ಇದರಿಂದ ಮನನೊಂದ ಜೋಡಿಯು ಮಂಗಳೂರಿನಿಂದ ಬಾಡಿಗೆ ಕಾರು ಪಡೆದು ಉಡುಪಿಯತ್ತ ತೆರಳಿದ್ದು, ಅಲ್ಲಿನ ಪೆಟ್ರೋಲ್ ಪಂಪ್ ಒಂದರಲ್ಲಿ ಒಂದು ಬಾಟಲ್ ಪೆಟ್ರೊಲ್ ಖರೀದಿಸಿ ಬ್ರಹ್ಮಾವರದತ್ತ ತೆರಳಿದ್ದರು.

ಬಳಿಕ ಮನೆಯವರಿಗೆ ಮೊಬೈಲ್ ನಲ್ಲಿ ಸಂದೇಶ ಕಳುಹಿಸಿದ್ದು, ಒಬ್ಬರನ್ನೊಬ್ಬರು ಬಿಟ್ಟು ಬದುಕುವುದು ಸಾಧ್ಯವಿಲ್ಲ, ಎಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾತ್ರಿ ಸುಮಾರು ಎರಡು ಗಂಟೆಯ ವರೆಗೂ ಮನೆಯವರೊಂದಿಗೆ ಕ್ಷಮೆ ಕೇಳಿದ್ದ ಜೋಡಿಯು ಬಳಿಕ ಕೃತ್ಯ ಎಸಗಿದ್ದು,ಮುಂಜಾನೆ ವೇಳೆಗೆ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಅದೇನೇ ಇರಲಿ, ಪ್ರೀತಿಸಿದ್ದ ಜೋಡಿ ಮದುವೆಯಾಗಿ ಮನೆಯವರ ಒಪ್ಪಿಗೆ ಪಡೆಯಲು ಅದೆಷ್ಟು ಪ್ರಯತ್ನ ಪಟ್ಟರೂ ಕರಗದ ಹೆತ್ತವರ ಮನಸ್ಸು ಇಲ್ಲಿ ಇಬ್ಬರ ಸಾವಿಗೆ ಕಾರಣವಾಗಿದೆ.ಅತ್ತ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಅರೆಕ್ಷಣದಲ್ಲಿ ನಡೆದು ಹೋಗುವ ಸಣ್ಣ ತಪ್ಪುಗಳು, ಕೆಲವೊಂದು ದುಡುಕಿನ ನಿರ್ಧಾರಗಳು ಬದುಕನ್ನೇ ಮುಗಿಸುತ್ತದೆ ಎನ್ನುವುದಕ್ಕೆ ಈ ಘಟನೆಯೂ ಒಂದು ಸಾಕ್ಷಿಯಾಗುತ್ತದೆ. ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave A Reply