ಬೆಂಗಳೂರು ಏರ್​​ಪೋರ್ಟ್ ಫ್ಲೈಓವರ್ ನಲ್ಲಿ ಮತ್ತೊಮ್ಮೆ ಭೀಕರ ಅಪಘಾತ | ನಿಂತಿದ್ದ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು – ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು: ನಗರದ ಏರ್ ರ್ಪೋರ್ಟ್ ಫ್ಲೈಓವರ್ ನಲ್ಲಿ ಅಪಘಾತಗಳು ಸಂಭವಿಸುತ್ತಲೇ ಇದ್ದು, ಅನೇಕರು ಸಾವನ್ನಪ್ಪಿದ್ದಾರೆ. ಇದೀಗ ಮತ್ತೊಂದು ದುರ್ಘಟನೆ ನಡೆದಿದ್ದು, ನಿಂತಿದ್ದ ಬೈಕ್ ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಕ್ಕೂರು ಏರೋಡ್ರಮ್ ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ಜಕ್ಕೂರು ಲೇಔಟ್ ನಿವಾಸಿ 44 ವರ್ಷದ ಗೋವಿಂದಪ್ಪ ಎಂದು ಗುರುತಿಸಲಾಗಿದೆ. ಜೊತೆಯಲ್ಲಿ ಬೈಕ್ ನಲ್ಲಿದ್ದ 14 ವರ್ಷದ ಬಾಲಕ ಸಂಜಯ್ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತ ಗೋವಿಂದಪ್ಪ ಸಂಬಂಧಿಕರ ಮಗನಿಗೆ ಜಕ್ಕೂರು ಏರೋಡ್ರಮ್ ತೋರಿಸಲು ಬಂದಿದ್ದ ಎನ್ನಲಾಗಿದ್ದು, ಏರ್​​ಪೋರ್ಟ್ ಫ್ಲೈಓವರ್ ಮೇಲೆ ಬೈಕ್ ನಿಲ್ಲಿಸಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಪಘಾತ ನಡೆದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಬೈಕ್​​ ಹಾರಿ ಬಿದ್ದಿದ್ದು, ಕ್ಷಣಾರ್ಧದಲ್ಲಿ ಗೋವಿಂದಪ್ಪ ಸಾವನ್ನಪ್ಪಿದ್ದಾರೆ.

ಇನ್ನು ಘಟನೆಯಲ್ಲಿ 14 ವರ್ಷದ ಬಾಲಕ ಸಂಜಯ್ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದು, ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಬೈಕ್ ಗೆ ಗುದ್ದಿರುವ ಕಾರಿನ ಚಾಲಕ ವರುಣ್ ನನ್ನು ಪೊಲೀಸರು ಕೆ.ಆರ್.ಪುರಂ ಬಳಿ ಬಂಧಿಸಿದ್ದಾರೆ. ಈತ ಜೆಸಿ ನಗರದ ಮೆಡಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಪಘಾತ ಸಂದರ್ಭದಲ್ಲಿ ಕಾರಿನಲ್ಲಿ ಐವರು ಸ್ನೇಹಿತರೊಂದಿಗೆ ವರುಣ್ ಪ್ರಯಾಣಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

Leave A Reply

Your email address will not be published.