ಕಾಡುಹಂದಿ ಬೇಟೆಗೆ ಅಳವಡಿಸಿದ್ದ ವಿದ್ಯುತ್ ತಂತಿಗೆ ಸಿಲುಕಿ ಇಬ್ಬರು ಪೊಲೀಸ್ ಪೇದೆಗಳು ದುರಂತ ಸಾವು!!

ಕಾಡು ಪ್ರಾಣಿ ಬೇಟೆ ಅಪರಾಧವಾಗಿದ್ದರೂ ಅಲ್ಲಲ್ಲಿ ಪ್ರಾಣಿಗಳ ಬೇಟೆಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ‌ಅಂತೆಯೇ ಇದೀಗ ಪ್ರಾಣಿಗೆ ಇಟ್ಟ ಉರುಳೊಂದು ಇಬ್ಬರ ಪ್ರಾಣ ಕಸಿದುಕೊಂಡಿದೆ. ಹೌದು. ಕಾಡು ಹಂದಿ ಹಿಡಿಯಲು ಅಳವಡಿಸಿದ್ದ ವಿದ್ಯುತ್ ತಂತಿಯ ಬಲೆಗೆ ಸಿಲುಕಿ ವಿದ್ಯುತ್ ಶಾಕ್‌ನಿಂದ ಪೊಲೀಸ್ ಪೇದೆಗಳಿಬ್ಬರು ಮೃತಪಟ್ಟಿರುವ ಘಟನೆ ಕೇರಳದ ಪಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಮೃತರನ್ನು ಅಶೋಕನ್ ಮತ್ತು ಮೋಹನ್ ದಾಸ್ ಎಂದು ಗುರುತಿಸಲಾಗಿದೆ.

ಮೃತರು ಮುತ್ತಿಕುಲಂಗರ ಕೆಎಪಿ-2 ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಕ್ರಮವಾಗಿ ವಿದ್ಯುತ್ ತಂತಿಯ ಬಲೆ ಅಳವಡಿಸಿ ಪೇದೆಗಳು ಸಾವಿಗೆ ಕಾರಣವಾದ ಆರೋಪದ ಮೇಲೆ ಮುತ್ತಿಕುಲಂಗರ ನಿವಾಸಿ ಸುರೇಶ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಕಾಡು ಹಂದಿ ಹಿಡಿದಿರುವ ಅನೇಕ ಪ್ರಕರಣಗಳನ್ನು ಈ ಹಿಂದೆಯೂ ಈತನ ವಿರುದ್ಧ ಅರಣ್ಯ ಇಲಾಖೆಯಲ್ಲಿ ದಾಖಲಾಗಿದೆ.

ಆರೋಪಿ ತಪ್ಪೊಪ್ಪಿಕೊಂಡಿದ್ದು, ತಾನು ಅವಳವಡಿಸಿದ್ದ ವಿದ್ಯುತ್ ತಂತಿಯ ಬಲೆಗೆ ಸಿಲುಕಿ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾರೆಂದು ಹೇಳಿದ್ದಾನೆ. ರಾತ್ರಿ 10ರ ಸುಮಾರಿಗೆ ತನ್ನ ಮನೆಯ ಕಾಪೌಂಡ್ ಗೋಡೆಯ ಹೊರಗೆ ಅಳವಡಿಸಿದ್ದ ವಿದ್ಯುತ್ ತಂತಿಯ ಬಲೆಯ ವಿದ್ಯುತ್ ಸಂಪರ್ಕವನ್ನು ಸ್ವಿಚ್ ಆನ್ ಮಾಡಿ ಮಲಗಿದ್ದ.

ಆರೋಪಿ ಸುರೇಶ್‌ಗೆ ಮಧ್ಯರಾತ್ರಿ ಎಚ್ಚರವಾದಾಗ ಪೊಲೀಸರಿಬ್ಬರು ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡುಬಂದಿದೆ. ಇಬ್ಬರು ಮೃತಪಟ್ಟಿರುವುದು ಗೊತ್ತಾದ ಕೂಡಲೇ ಎಳೆಯುವ ಗಾಡಿಯಲ್ಲಿ ಇಬ್ಬರ ಶವಗಳನ್ನು ಹಾಕಿಕೊಂಡು ಹೋಗಿ ಗದ್ದೆಗೆ ಎಸೆದು ಬಂದಿದ್ದ. ಗುರುವಾರ ಬೆಳಗ್ಗೆ 9 ಗಂಟೆಗೆ ಪೊಲೀಸ್ ಕ್ಯಾಂಪ್ ಹತ್ತಿರದ ಭತ್ತದ ಗದ್ದೆಯಲ್ಲಿ ಅಶೋಕನ್ ಮತ್ತು ಮೋಹನ್ ದಾಸ್ ಮೃತದೇಹ ಪತ್ತೆಯಾಗಿತ್ತು.

ಬುಧವಾರ ರಾತ್ರಿಯಿಂದಲೇ ಇಬ್ಬರು ನಾಪತ್ತೆಯಾಗಿದ್ದರು. ಹೆಚ್ಚಿನ ಭದ್ರತೆ ಇರುವ ಪೊಲೀಸ್ ಶಿಬಿರದಿಂದ ಅವರಿಬ್ಬರು ಹೇಗೆ ಹೊರಗೆ ಹೋದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಮೃತದೇಹಗಳು ಪರಸ್ಪರ ಸುಮಾರು 60 ಮೀಟರ್ ದೂರದಲ್ಲಿ ಬಿದ್ದಿದ್ದವು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸುರೇಶ್ ನ ಕೃತ್ಯ ಬಯಲಾಗಿದೆ.

ಯಾರಿಗೂ ವಿಚಾರ ಗೊತ್ತಾಗಬಾರದೆಂದು ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಆರೋಪಿ ಸುರೇಶ್ ಘಟನೆಯ ಬೆನ್ನಲ್ಲೇ ವಿದ್ಯುತ್ ತಂತಿಯ ಬಲೆಯನ್ನೂ ಕಿತ್ತೆಸೆದಿದ್ದ. ಆದರೆ, ಪೊಲೀಸ್ ತನಿಖೆಯಲ್ಲಿ ಸಿಕ್ಕಿಬಿದ್ದ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.