ಇನ್ನು ಮುಂದೆ ಎಲ್ಲಾ ಮಕ್ಕಳಿಗೂ ಸರಕಾರಿ ಆಂಗ್ಲ ಮಾಧ್ಯಮದಲ್ಲೇ ಶಿಕ್ಷಣ!

ರಾಜ್ಯಾದ್ಯಂತ ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಪ್ರವೇಶ ಬಯಸಿ ಬರುವ ಎಲ್ಲಾ ಮಕ್ಕಳಿಗೂ ಪ್ರವೇಶ ಕಲ್ಪಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದ್ದು, ಈ ಬಾರಿ ದಾಖಲಾತಿ ಹೆಚ್ಚಾಗುವ ನಿರೀಕ್ಷೆಯಿದೆ.

ಇದರಿಂದಾಗಿ ತಮ್ಮ ಮಕ್ಕಳನ್ನು “ಇಂಗ್ಲಿಷ್ ಮಾಧ್ಯಮ’ದಲ್ಲಿ ಓದಿಸಬೇಕು ಎಂಬ ಕಾರಣಕ್ಕಾಗಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವ ಪೋಷಕರು ಇನ್ನು ಸರಕಾರಿ ಶಾಲೆಗಳಿಗೂ ಸೇರಿಸಬಹುದಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಂ. ಪ್ರಸನ್ನಕುಮಾರ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲಾಭಿವೃದ್ಧಿ ಮತ್ತು ನಿರ್ವಹಣ ಸಮಿತಿಯು (ಎಸ್‌ಡಿಎಂಸಿ) ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಹಾಗೂ ಜಿಲ್ಲಾ ಉಪ ನಿರ್ದೇಶಕ (ಡಿಡಿಪಿಐ)ರಿಗೆ ಮನವಿ ಸಲ್ಲಿಸಿದರೆ ಸರಕಾರ ಅನುಮತಿ ನೀಡಲಿದೆ. ಸಾಕಷ್ಟು ಶಾಲೆಗಳಿಂದ ಬೇಡಿಕೆ ಬರುತ್ತಿದೆ.ಮೂಲಸೌಕರ್ಯವಿದ್ದರೆ, ಅನುಮತಿ ನೀಡಲಾಗುತ್ತದೆ. ಅಗತ್ಯ ಶಿಕ್ಷಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ನಿರ್ಧರಿಸಲಾಗಿದೆ.

ಸರಕಾರವು 2019-20ನೇ ಸಾಲಿನಲ್ಲಿ 1,001 ಮತ್ತು 2020 21ರಲ್ಲಿ 1,400 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿತು. 276 ಕರ್ನಾಟಕ ಪಬ್ಲಿಕ್ ಶಾಲೆ, 444 ಉರ್ದು ಮಾಧ್ಯಮ ಸೇರಿ 2,401 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧಿಸಲಾಗುತ್ತಿದೆ. ಈ ಶಾಲೆಗಳಲ್ಲಿ ಪ್ರತಿ ತರಗತಿಗೆ 30 ಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಶಾಲೆಗಳಲ್ಲಿ ಕೊಠಡಿಗಳು ಲಭ್ಯವಿದ್ದಲ್ಲಿ ಪ್ರವೇಶ ನೀಡುವಂತೆ ಸರಕಾರ ತಿಳಿಸಿದೆ.

2021-22 ಮತ್ತು 2022-23ನೇ ಸಾಲಿನಲ್ಲಿ ಹೊಸ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿಲ್ಲ. ಆದರೆ, ಈಗಾಗಲೇ ಆರಂಭಿಸಿರುವ ಶಾಲೆಗಳಲ್ಲಿ ತರಗತಿಗಳನ್ನು ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ.

Leave A Reply

Your email address will not be published.