ಹೊರಗುತ್ತಿಗೆ ನೇಮಕಾತಿ : ಇನ್ಮುಂದೆ ಮಹಿಳಾ ಅಭ್ಯರ್ಥಿಗಳಿಗೆ 33% ಮೀಸಲು- ರಾಜ್ಯ ಸರಕಾರದ ಮಹತ್ವದ ಆದೇಶ

ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ನೇಮಕಾತಿಯಲ್ಲಿ ಶೇ.33ರಷ್ಟು ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಂದ ಮೀಸಲಿಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೌದು, ಶೇ.33 ರಷ್ಟು ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಆದೇಶ ಪತ್ರದಲ್ಲಿ ರಾಜ್ಯ ಸರ್ಕಾರದ ಕಚೇರಿಗಳಲ್ಲಿನ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾ ಸಿಬ್ಬಂದಿ, ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಿಕೊಳ್ಳುವುದು ಸರ್ಕಾರದ ಇತ್ತೀಚಿನ ಅಂಗೀಕೃತ ಕಾರ್ಯನೀತಿಯಾಗಿರುತ್ತದೆ. ಮಹಿಳೆಯರ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯ ಮತ್ತು ಸಮಾನ ಉದ್ಯೋಗಾವಕಾಶಗಳನ್ನು ಒದಗಿಸುವ ದೃಷ್ಠಿಯಿಂದ ರಾಜ್ಯ ಸರ್ಕಾರವು 1996ರಲ್ಲಿಯೇ ರಾಜ್ಯ ಸಿವಿಲ್ ಸೇವೆಗಳಲ್ಲಿ ಶೇ.30ರಷ್ಟು ನೇರ ನೇಮಕಾತಿ ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿರಿಸಿದೆ ಎಂದು ತಿಳಿಸಲಾಗಿದೆ.

ಹೊರಗುತ್ತಿಗೆ ಮುಖಾಂತರ ಪಡೆಯಲಾಗುವ ಸೇವೆಗಳನ್ನು ಮಹಿಳೆಯರು ಕೂಡ ಸಮರ್ಥರಾಗಿ ನಿರ್ವಹಿಸಬಲ್ಲವರಾಗಿರುತ್ತಾರೆ. ಆದ ಕಾರಣ, ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಹೊರಗುತ್ತಿಗೆ ಮುಖಾಂತರ ಪಡೆಯಲಾಗುವ ಸೇವೆಗಳಲ್ಲಿ ಹಾಗೂ ಹುದ್ದೆಗಳಲ್ಲಿ ಶೇ.33ರಷ್ಟು ಹುದ್ದೆಗಳನ್ನು ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡಿಕೊಳ್ಳುವಂತೆ ಸರ್ಕಾರದ ಎಲ್ಲಾ ಇಲಾಖೆಗಳಿಗೆ ಸೂಚಿಸಿದ್ದಾರೆ.

ಈ ಮೇಲಿನ ಸೂಚನೆಗಳನ್ನು ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರೆ ಸರ್ಕಾರಿ ವಲಯದ ಅಂಗ ಸಂಸ್ಥೆಗಳು ಕೂಡ ಪಾಲಿಸತಕ್ಕದ್ದು, ಈ ಸಂಬಂಧ ಸರ್ಕಾರದ ಎಲ್ಲಾ ಆಡಳಿತ ಇಲಾಖೆಗಳ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಕ್ಷೇತ್ರ ಇಲಾಖೆಗಳು, ಸರ್ಕಾರದ ಅಂಗಸಂಸ್ಥೆಗಳಿಗೆ ಅಗತ್ಯಸೂಚನೆಗಳನ್ನು ನೀಡುವಂತೆ ಸೂಚಿಸಿದ್ದಾರೆ. ಈ ಸೂಚನೆಗಳನ್ನು ಕಾರ್ಯಗತಗೊಳಿಸುವಲ್ಲಿ ಯಾವುದೇ ತೊಂದರೆಗಳು ಉದ್ಭವಿಸಿದರೆ ಸಂಬಂಧಪಟ್ಟ ಇಲಾಖೆ ಕಾರ್ಯದರ್ಶಿಗಳು ಅವುಗಳನ್ನು ಪರಿಹರಿಸತಕ್ಕದ್ದು ಎಂದು ಸೂಚಿಸಿದೆ.

Leave A Reply

Your email address will not be published.