ಇನ್ನು ಮುಂದೆ ಅಂಚೆ ಇಲಾಖೆಯ ಉಳಿತಾಯ ಖಾತೆದಾರರಿಗೆ ಆನ್‌ಲೈನ್ ವಹಿವಾಟು ಸೌಲಭ್ಯ !! | ಇಂಡಿಯಾ ಪೋಸ್ಟ್ ಮೊಬೈಲ್ ಬ್ಯಾಂಕಿಂಗ್ ಆಪ್ ಬಿಡುಗಡೆ

ಅಂಚೆ ಇಲಾಖೆಯ ಉಳಿತಾಯ ಖಾತೆದಾರರಿಗೆ ಗುಡ್ ನ್ಯೂಸ್ ಒಂದಿದೆ. ಗ್ರಾಹಕರ ಬಹುಕಾಲದ ಬೇಡಿಕೆಯಾದ ಆನ್‌ಲೈನ್ ವಹಿವಾಟು ಸೌಲಭ್ಯ ಕೊನೆಗೂ ಆರಂಭಗೊಂಡಿದೆ.

ದೇಶದ ಯಾವುದೇ ಅಂಚೆ ಖಾತೆಗೆ ಹಣವನ್ನು ವರ್ಗಾಯಿಸಲು ಕೇವಲ ಒಂದೇ ಐಎಫ್‌ಎಸ್‌ಸಿ ಕೋಡ್‌ನ ಅವಶ್ಯಕತೆಯಾಗಿರುವುದು ನಿಯಮಿತ ಆನ್‌ಲೈನ್ ಬ್ಯಾಂಕಿಂಗ್‌ಗಿಂತ ಇದರ ವಿಶಿಷ್ಟತೆಯಾಗಿದೆ. ಭಾರತೀಯ ಅಂಚೆ ಇಲಾಖೆ ದೇಶದಲ್ಲಿ 8.17 ಕೋಟಿ ಉಳಿತಾಯ ಖಾತೆದಾರರನ್ನು ಹೊಂದಿದ್ದು, ಕರ್ನಾಟಕ 75,82,498 ಖಾತೆಗಳನ್ನು ಹೊಂದಿದೆ.

ಅಂಚೆ ಇಲಾಖೆ ಖಾತೆದಾರರು ಸ್ಮಾರ್ಟ್ ಫೋನ್‌ನಲ್ಲಿ ಇಂಡಿಯಾ ಪೋಸ್ಟ್ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಪಾಸ್‌ಬುಕ್‌ನಲ್ಲಿ ಲಭ್ಯವಿರುವ ಗ್ರಾಹಕ ಮಾಹಿತಿ ಫೈಲ್ (ಸಿಐಎಫ್) ಐಡಿ ಮತ್ತು ಇಂಟರ್‌ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಪಿನ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳಬೇಕು. ಇದನ್ನು ಡೆಸ್ಕ್‌ಟಾಪ್ ಕಂಪ್ಯೂಟರ್‌ನಿಂದಲೂ ನಿರ್ವಹಿಸಬಹುದು.

2017 ರಲ್ಲಿ ಪ್ರಾರಂಭಿಸಲಾದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾತೆಯು ಒಬ್ಬರ ಉಳಿತಾಯ ಖಾತೆಯೊಂದಿಗೆ ಲಿಂಕ್ ಆಗಿದೆ. ಪ್ರಸ್ತುತ ಡಿಜಿಟಲ್ ವಹಿವಾಟುಗಳನ್ನು ಇದರ ಮೂಲಕ ಮಾಡಲು ಸಾಧ್ಯವಾಗುತ್ತದೆ. ಬಿಲ್ ಪಾವತಿ, ಟಿಕೆಟ್ ಬುಕಿಂಗ್, ತೆರಿಗೆ ಪಾವತಿ ಮುಂತಾದ ಆಯ್ಕೆಗಳನ್ನು ನೀಡುತ್ತದೆ. ಖಾತೆಗೆ ಗರಿಷ್ಠ 2 ಲಕ್ಷ ರೂಪಾಯಿ ಮಿತಿಯನ್ನು ಹೊಂದಿದ್ದರೂ, ಉಳಿತಾಯ ಬ್ಯಾಂಕ್ ಯಾವುದೇ ಮಿತಿಯನ್ನು ಹೊಂದಿಲ್ಲ.

ಈ ಸೌಲಭ್ಯ ಹಲವರಿಗೆ ಖುಷಿ ತಂದಿದೆ. ಅಂಚೆ ಇಲಾಖೆಯ ಎಟಿಎಂ ಮೂಲಕ ನಾನು ಪಿಂಚಣಿ ಹಣವನ್ನು ತೆಗೆಯುತ್ತಿದ್ದರೂ ಕೂಡ ಪ್ರತಿ ತಿಂಗಳು ವೈಯಕ್ತಿಕವಾಗಿ ಅಂಚೆ ಇಲಾಖೆಗೆ ಹೋಗಿ ಹಣ ಪಡೆಯುವುದು ಕಷ್ಟವಾಗುತ್ತದೆ ಎನ್ನುತ್ತಾರೆ ಕೆಲವು ಪಿಂಚಣಿದಾರರು. ಈಗ, ಅವರು ಆನ್‌ಲೈನ್‌ ಮೂಲಕ ಠೇವಣಿಗಳಿಗೆ ಹಣವನ್ನು ವರ್ಗಾಯಿಸಬಹುದು. ಅಂಚೆ ಮತ್ತು ಬ್ಯಾಂಕ್ ಖಾತೆಯ ನಡುವೆ ಹಣವನ್ನು ವಿನಿಮಯ ಮಾಡಿಕೊಳ್ಳಬಹುದು ಎಂಬುದೊಂದು ಸಮಾಧಾನವಾಗಿದೆ ಎನ್ನುತ್ತಾರೆ.

ಆಪ್ ಬಳಸುವ ಬಗ್ಗೆ ಗೊತ್ತಿಲ್ಲದವರು ಅಂಚೆ ಕಚೇರಿಗಳಿಗೆ ಭೇಟಿ ನೀಡಿ ವಿವರ ಪಡೆಯಬಹುದು. ಆನ್‌ಲೈನ್ ವಹಿವಾಟು ನಡೆಸಲು ಕೌಂಟರ್‌ನಲ್ಲಿರುವ ಸಿಬ್ಬಂದಿಯ ಸಹಾಯವನ್ನು ತೆಗೆದುಕೊಳ್ಳಬಹುದು. ಔಪಚಾರಿಕವಾಗಿ ಆಪ್ ಕಾರ್ಯಾಚರಣೆಗೆ ಬಂದಿದ್ದರೂ ಸಹ ಇನ್ನೂ ಅಧಿಕೃತವಾಗಿ ಆರಂಭಗೊಂಡಿಲ್ಲ.

Leave A Reply

Your email address will not be published.