ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ | ಹೆಣ್ಣು ಎಂಬ ಕಾರಣಕ್ಕೆ ಅರ್ಜಿ ತಿರಸ್ಕಾರ| ಕಾನೂನಿನ ಮೂಲಕ ಹೋರಾಡಿ ಗೆದ್ದ ಧೀರ ಯುವತಿ!!!

ಈಗಿನ ಕಾಲದ ಹೆಣ್ಮಕ್ಕಳು ಯಾವುದರಲ್ಲೂ ಕಮ್ಮಿ ಇಲ್ಲ. ಗಂಡುಮಕ್ಕಳಿಗಿಂತ ನಾವೇನೂ ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮಾನವಾಗಿ ದುಡಿದು ಸೈ ಎನಿಸಿಕೊಂಡಿದ್ದಾರೆ. ಪುರುಷರಿಗೆಂದೇ ಮೀಸಲಾಗಿರುವ ವೃತ್ತಿಗಳಲ್ಲಿಯೂ ಈಗ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಈ ಮೂಲಕ ತಾವು ಯಾರಿಗೂ ಕಡಿಮೆ ಇಲ್ಲವೆಂಬುದನ್ನು ಸಾಧಿಸಿ ತೋರಿಸುತ್ತಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನ ತೆಲಂಗಾಣದ ಈ 21 ವರ್ಷದ ಯುವತಿ. ದೃಢ ನಿರ್ಧಾರ ಛಲದ ಮೂಲಕ ತನ್ನ ಸರಕಾರಿ ಕೆಲಸ ಗಿಟ್ಟಿಸಿಕೊಂಡ ಛಲಗಾತಿ ಯುವತಿ.

ತೆಲಂಗಾಣದ ಈ ಯುವತಿ ಯಶಸ್ವಿಯಾಗಿ ಲೈಟ್ ಕಂಬ ಹತ್ತುವ ಮೂಲಕ ಲೈನ್‌ಮ್ಯಾನ್ ಹುದ್ದೆಗೆ ಆಯ್ಕೆಯಾಗಿದ್ದಾಳೆ. ಈ ಮೂಲಕ ತಾನು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. ತೆಲಂಗಾಣದ ಪವರ್ ಕಾರ್ಪೊರೇಷನ್‌ನಲ್ಲಿ ಮೊದಲ ಬಾರಿಗೆ ಮಹಿಳಾ ಲೈನ್‌ಮ್ಯಾನ್ ಆಗಿ ಆಯ್ಕೆಯಾಗಿದ್ದಾಳೆ. ಅಂದಹಾಗೆ ಈ ಯುವತಿಯ ಹೆಸರು ಸಿರಿಶಾ. ಈಕೆ ಲೈಟ್ ಕಂಬವನ್ನು ಸರಸರನೇ ಏರುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಲೈಟ್ ಕಂಬಗಳನ್ನು ಹತ್ತುವುದು ಅಷ್ಟೊಂದು ಸರಳ ಕೆಲಸವಲ್ಲ. ಮಹಿಳೆಯರು ಈ ಕೆಲಸ ಮಾಡುವುದೇ ದೊಡ್ಡ ವಿಷಯ. ಸಿರಿಶಾ ಮೂಲತಃ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಗಣೇಶಪಲ್ಲಿ ಎಂಬಲ್ಲಿಯ ಯುವತಿ. ತೆಲಂಗಾಣದ ಪವರ್ ಡಿಸ್ಟ್ರಿಬ್ಯೂಷನ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಸಿರಿಶಾ ಜೂನಿಯರ್ ಲೈನ್‌ಮ್ಯಾನ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸ್ವತಃ ತೆಲಂಗಾಣ ಇಂಧನ ಸಚಿವ ಜಗದೀಶ್ ರೆಡ್ಡಿ ಅವರೇ ಸಿರಿಶಾಗೆ ನೇಮಕಾತಿ ಪತ್ರ ನೀಡಿದ್ದಾರೆ.

2019ರಲ್ಲಿ ಸಿರಿಶಾ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರಂತೆ. ಆದರೆ ಆ ಸಮಯದಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಮಹಿಳೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿತ್ತು. ನಂತರ ಸಿರಿಶಾ ತನ್ನ ಕುಟುಂಬದವರ ನೆರವಿನೊಂದಿಗೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಳು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ 23 ಡಿಸೆಂಬರ್ 2020ರಂದು ನೇಮಕಾತಿಗಾಗಿ 8 ಮೀಟರ್ ಲೈಟ್ ಕಂಬ ಹತ್ತುವ ಪರೀಕ್ಷೆ ಇತ್ತು. ಇದರಲ್ಲಿ ಸಿರಿಶಾ ಯಶಸ್ವಿಯಾಗಿದ್ದಾರೆ. ಸಿರಿಶಾರ ಈ ಸಾಹಸಗಾಥೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Leave A Reply

Your email address will not be published.