ಈತನ ಬಗ್ಗೆ ಓದಿದರೆ ಇನ್ನು ಆತ್ಮಹತ್ಯೆ ಮಾಡ್ಕೋಬೇಕು ಅಂತ ಯಾರಿಗೂ ಅನ್ನಿಸಲ್ಲ !! | ‘438 ಡೇಸ್ ‘ – ಆಹಾರ, ನೀರು ಕೂಡಾ ಇಲ್ಲದೆ ಅಗಾಧ ಪೆಸಿಫಿಕ್ ಸಾಗರದ ಮಧ್ಯೆ ಸಣ್ಣ ಬೋಟಿನಲ್ಲಿದ್ದು ಬದುಕಿ ಬಂದವನ ಕಥೆ !!

ಆತ್ಮಹತ್ಯೆಯ ಯೋಚನೆ ಬರೋ ಜನ ಇದನ್ನೊಮ್ಮೆ ಓದ್ಲೇ ಬೇಕು. ಸಮುದ್ರದಲ್ಲಿ ಆಹಾರ ನೀರು ಏನೂ ಇಲ್ಲದೆ ಏಕಾಂಗಿಯಾಗಿ ‘438 ಡೇಸ್ ‘ ಬದುಕಿ ಬಂದ ಸಾಲ್ವಡಾರ್ ಅಲ್ವಾರೆಂಗಾ ಇವತ್ತಿನ ನಮ್ಮ ಸ್ಫೂರ್ತಿ.

ನವೆಂಬರ್ 17, 2012 ರಂದು, ಸಾಲ್ವಡಾರ್ ಅಲ್ವಾರೆಂಗಾ ಮೀನು ಹಿಡಿಯಲು ಹೊರಟಿದ್ದ. ತನ್ನ ಎರಡು ದಿನಗಳ ಮೀನುಗಾರಿಕೆ ಪ್ರವಾಸಕ್ಕಾಗಿ ಮೆಕ್ಸಿಕೋದ ಕರಾವಳಿಯನ್ನು ಇನ್ನೇನು ತೊರೆಯುವ ವೇಳೆ, ಆತನ ಇಂದಿನ ಸಹವರ್ತಿ ಕೈ ಕೊಟ್ಟಿದ್ದ. ಮೀನಿಗೆ ಬಳಿ ಹರವಿ, ಮೀನು ಹಿಡಿಯಲು ಕನಿಷ್ಠ ಪಕ್ಷ ಇಬ್ಬರಾದರೂ ಬೇಕು. ಅದಕ್ಕಾಗಿ ಇನ್ನೋರ್ವ 23 ವರ್ಷದ ಹುಡುಗನನ್ನು ಸೇರಿಸಿಕೊಂಡು ಸಮುದ್ರಕ್ಕೆ ಇಳಿಯುತ್ತಾರನೆ. ಅಂದು ಸಮುದ್ರ ಪ್ರಕ್ಷುಬ್ಧವಾಗಿತ್ತು. ಏರಿಳಿತ ಸಮುದ್ರದಲ್ಲಿ ಉಂಟಾಗೋದು ಸಾಮಾನ್ಯ. ಓರ್ವ ಪಳಗಿದ ಮಧ್ಯವಯಸ್ಕ ಮೀನುಗಾರನಾಗಿ ಇಂತಹದನ್ನು ಆತ ಹಲವು ಬಾರಿ ಅನುಭವಿಸಿದ್ದ. ಅದರಿಂದಾಗಿ ವಿಚಲಿತನಾಗದ ಸಾಲ್ವಡಾರ್ ತನ್ನ ಪುಟ್ಟ 12 ಅಡಿಯ ದೋಣಿಯನ್ನು ಸಮುದ್ರಕ್ಕೆ ನೂಕಿ ಬಿಟ್ಟು ಅದರೊಳಗೆ ಏರಿಕೊಳ್ಳುತ್ತಾನೆ.

ಅದು ಆಳ ಸಮುದ್ರದ ಮೀನುಗಾರಿಕೆಗೆ ಹೋರಟ ದೋಣಿ. ಅವತ್ತು ಹಾಗೆ ಆ ಮೋಟಾರ್ ದೋಣಿಯಲ್ಲಿ ಸಮುದ್ರದ ಒಳಕ್ಕೆ ಸುಮಾರು 50 ಕಿಲೋಮೀಟರುಗಳ ದೂರ ಹೋಗುವಷ್ಟರಲ್ಲಿ ಒಂದು ಕೆಟ್ಟ ಚಂಡಮಾರುತವು ಸಮುದ್ರವನ್ನು ಅಪ್ಪಳಿಸುತ್ತದೆ. ಆ ಚಂಡಮಾರುತದ ಹೊಡೆತಕ್ಕೆ ದೋಣಿ ಅಲ್ಲೋಲ ಕಲ್ಲೋಲ ಆಗುತ್ತದೆ. ದೋಣಿಯ ಎಂಜಿನ್ ಆಗ ನಿಶ್ಚಲವಾಗಿ ಬಿಡುತ್ತದೆ. ಮೋಟಾರ್ ಇಲ್ಲದ ದೋಣಿ ಚಂಡಮಾರುತದ ವೇಗಕ್ಕೆ ದಿಕ್ಕಾ ಪಾಲಾಗಿ ಚದುರಿ ಹೋಗುತ್ತದೆ. ಮತ್ತಷ್ಟು ಸಮುದ್ರದ ಒಳಕ್ಕೆಳೆದೊಯ್ಯುತ್ತದೆ. ಮುಂದೆ ತೇಲುವ ದೋಣಿಯಲ್ಲಿ ಕೂತು ನೋಡಿದರೆ ಕಾಣುವುದು ಅಗಾಧವಾಗಿ ಕಣ್ಣು ಹಾಯಿಸಿದಷ್ಟು ವಿಸ್ತರಿಸಿಕೊಂಡು ಅಲೆಯೆಬ್ಬಿಸುವ ನೀರು ಮತ್ತು ನೆತ್ತಿಯ ಮೇಲೆ ಆಕಾಶ ಮಾತ್ರ !

ಹಾಗೆ ಬರೊಬ್ಬರಿ 438 ದಿನಗಳು ಸಮುದ್ರದಲ್ಲಿ ಕಳೆದಿದ್ದಾನೆ ಸಾಲ್ವಡಾರ್. ಆತನ ಜೊತೆಗೆ ಇದ್ದ ಸಹವರ್ತಿ ನಾಲ್ಕು ತಿಂಗಳುಗಳ ಕಾಲ ಜೊತೆಗಿದ್ದು, ಕೊನೆಗೆ ಡಿಪ್ರೆಶನ್ ನಲ್ಲಿ ಆಹಾರ ಸೇವಿಸಲು ನಿರಾಕರಿಸಿ ಸತ್ತು ಹೋಗುತ್ತಾನೆ. ಮಾತನಾಡಲು ಅಂತ ಆತ ಒಬ್ಬನಾದರೂ ಇದ್ದ , ಈಗ ಅದೂ ಇಲ್ಲದೆ ಸಾಲ್ವಡಾರ್ ನಿಜಕ್ಕೂ ಭೀತನಾಗುತ್ತಾನೆ. ಆತನಿಗೆ ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅಂದುಕೊಳ್ಳುತ್ತಾನೆ. ಆದರೆ ಆತನಿಗೆ ಸಾಯಲು ಮನಸ್ಸಾಗುವುದಿಲ್ಲ.

ಹೀಗೆ ಲೆಕ್ಕ ಮರೆತುಹೋಗುವಂತೆ ಅದೆಷ್ಟೋ ದಿನಗಳ ನಂತರ ತೀರಕ್ಕೆ ಬಂದಾಗ ಕ್ಯಾಲೆಂಡರ್ ಸೂಚಿಸಿದ್ದು ಜನವರಿ 29, 2014ರ ತಾರಿಖನ್ನು. ಹಾಗೆ ಆತ ತಾನು ಹೊರಟಲ್ಲಿಂದ 9,000 ಮೈಲುಗಳಷ್ಟು ದೂರದಲ್ಲಿರುವ ಮಾರ್ಷಲ್ ದ್ವೀಪಗಳಿಗೆ ಆಗಮಿಸಿದ್ದ. ಈ ದೂರವು ನ್ಯೂಯಾರ್ಕ್ನಿಂದ ರಷ್ಯಾದ ಮಾಸ್ಕೋ ರೌಂಡ್ ಟ್ರಿಪ್ ಗೆ ಸಮಾನವಾಗಿದೆ ! ಆತನ ಸಮೇತ ಆ ದೋಣಿಯನ್ನು ತೀರದತ್ತ ದೂಡಲು ಸಮುದ್ರ ಬರೋಬ್ಬರಿ, 14 ತಿಂಗಳು, ಅಂದರೆ 438 ದಿನಗಳನ್ನು ತೆಗೆದುಕೊಂಡಿತ್ತು.

ಹದಿನಾಲ್ಕು ತಿಂಗಳುಗಳ ಕಾಲ, ಅಲ್ವಾರೆಂಗಾ ನಿರಂತರ ಶಾರ್ಕ್ ದಾಳಿಯಿಂದ ಬದುಕುಳಿದ. ಆ ಸಮಯದಲ್ಲಿ ಆತ ಬರಿ ಕೈಯಿಂದ ಮೀನು ಹಿಡಿಯಲು ಕಲಿತನು. ಸಮುದ್ರದಲ್ಲಿ ತೇಲುತ್ತಾ ಕಂಡುಬರುವ ಒಂದು ಜೊತೆ ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಂದ ಮೀನಿನ ಬಲೆ ನಿರ್ಮಿಸಿದ. ತನ್ನ ದೋಣಿಯಲ್ಲಿದ್ದ, ವರ್ಕ್ ಆಗದೆ ಕೂತಿರುವ ಔಟ್‌ಬೋರ್ಡ್ ಮೋಟರ್ ಅನ್ನು ಬೇರ್ಪಡಿಸಿ, ಅವರು ಬೃಹತ್ ಫಿಶ್‌ಹೂಕ್ ಅನ್ನು ರೂಪಿಸಿದ. ಮೀನಿನ ಬೆನ್ನೆಲುಬನ್ನು ಸೂಜಿಯಂತೆ ಬಳಸಿ, ಅವನು ತನ್ನ ಹರಿದ ಬಟ್ಟೆಗಳನ್ನು ಒಟ್ಟಿಗೆ ಹೊಲಿಯುತ್ತಾನೆ.

ಅವನಿಗೆ ಅನೇಕ ಸಂದರ್ಭಗಳಲ್ಲಿ ಆತ್ಮಹತ್ಯೆಯ ಯೋಚನೆ ಬಂದಿತ್ತು. ರಕ್ಕಸರ ಹಾಗೆ ಮಸೆಯುವ ಶಾರ್ಕ್‌ಗಳ ಪ್ಯಾಕ್‌ಗೆ ತನ್ನನ್ನು ಅರ್ಪಿಸಿಕೊಳ್ಳುವುದು ಸೇರಿದಂತೆ. ಆದರೆ ಪ್ರತಿಬಾರಿ ಕೂಡಾ, ಈ ಅಲ್ವಾರೆಂಗಾ ಸಾವಿಗೆ ಪರ್ಯಾಯವನ್ನು ಆವಿಷ್ಕರಿಸಲು ಎಂದಿಗೂ ವಿಫಲವಾಗಲಿಲ್ಲ. ಆತ ಬದುಕುಳಿಯುವ ವಿಧಾನವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡ. ಸಾಯಲು ಎಷ್ಟು ವಿಧವೊ, ಬದುಕಲು ಲಕ್ಷಾಂತರ ದಾರಿಗಳು. ಹಾಗೆಂದು ತನಗೆ ತಾನೇ ಅಂದುಕೊಳ್ಳಲು ಪ್ರಾರಂಭಿಸಿದ ಈ ಸಾಲ್ವಡಾರ್. ಕೊನೆಗೂ ಒಂದು ದಿನ, ಆ ಪೆಸಿಫಿಕ್ ಮಹಾಸಾಗರವು ಅವನನ್ನು 9000 ಕಿಲೋ ಮೀಟರ್ ಗಳ ದೂರದಲ್ಲಿ ” ಹೋಗು, ನೀನು ಸಾಯಲು ಲಾಯಕ್ಕಿಲ್ಲ ” ಎಂದು ಒಗೆದು ಹೋಯಿತು. ಅಲ್ಲಿನ ಪಾಮ್-ಹೊದಿಕೆಯ ದ್ವೀಪದಲ್ಲಿ ಆತನನ್ನು ಎಸೆಯುವ ಸಮಯದವರೆಗೆ ಆತ ತನ್ನ ದೇಹ ಮತ್ತು ಮನಸ್ಸನ್ನು ಹಾಗೆಯೇ ಬದುಕುವ ವಿಶ್ವಾಸ ಇಟ್ಟುಕೊಂಡು ಇರಿಸಿಕೊಂಡು ಜೀವಿಸಿದ. ಹಾಗೆ ದ್ವೀಪಕ್ಕೆ ಬಂದು ತಲುಪಿದ ನಂತರ ಅಲ್ಲಿನ ಸ್ಥಳೀಯ ದಂಪತಿಗಳು ಆತನನ್ನು ರಕ್ಷಿಸಿದರು.

ಅಲ್ವರೆಂಗಾ ಅವರೊಂದಿಗೆ ಹತ್ತಾರು ಗಂಟೆಗಳ ಸಂದರ್ಶನಗಳು ಮತ್ತು ಅವರ ಸಹೋದ್ಯೋಗಿಗಳು, ಹುಡುಕಾಟ ಮತ್ತು ರಕ್ಷಣಾ ಅಧಿಕಾರಿಗಳು, ಅವರ ಜೀವವನ್ನು ಉಳಿಸಿದ ವೈದ್ಯಕೀಯ ತಂಡ ಮತ್ತು ಅವರನ್ನು ಆರೋಗ್ಯಕ್ಕೆ ಮರಳಿಸಿದ ದೂರದ ದ್ವೀಪವಾಸಿಗಳ ಸಂದರ್ಶನಗಳ ಆಧಾರದ ಮೇಲೆ, ಆ 438 ದಿನಗಳು ಸಮುದ್ರದಲ್ಲಿ ಬದುಕಿದ್ದೇ ಒಂದು ಪವಾಡ ಎಂದು ಪರಿಗಣಿತವಾಗಿದೆ. ನಿಜವಾ ಸುಳ್ಳಾ ಎಂದು ಭ್ರಮೆ ಹುಟ್ಟಿಸುವ ಕಾಲ್ಪನಿಕ ಲೈಫ್ ಆಫ್ ಪೈ ಯ ನಿಜವಾದ ಆವೃತ್ತಿ. 

438 ದಿನಗಳು ಸಮುದ್ರದಲ್ಲಿ ಕಳೆದುಹೋದ ಹದಿನಾಲ್ಕು ತಿಂಗಳು ಬದುಕಲು ಒಬ್ಬ ಮನುಷ್ಯನಿಗೆ ಅಗತ್ಯವಾದ ಸ್ಥಿತಿಸ್ಥಾಪಕತ್ವ, ಇಚ್ಛೆ, ಜಾಣ್ಮೆ ಮತ್ತು ನಿರ್ಣಯದ ಅಧ್ಯಯನ ಯೋಗ್ಯ ವಿಷಯ. ಇದರಿಂದ ನಾವೇನು ಕಲಿಯುತ್ತೇವೆ ಎನ್ನುವುದೇ ಇವತ್ತಿನ ಈ ಲೇಖನದ ಉದ್ದೇಶ.

“ನಾನು ಆ 438 ದಿನಗಳಲ್ಲಿ ತುಂಬಾ ಕಷ್ಟದ ದಿನ ಅನುಭವಿಸಿದೆ. ಬಹುಶಃ ಇದನ್ನು ಓದಿದರೆ, ನಾನು ಅದನ್ನು ಮಾಡಲು ಸಾಧ್ಯವಾದರೆ ಅವರು ಅದನ್ನು ಉಳಿದ ಜನರೂ ಕೂಡಾ ಮಾಡಬಹುದು. ಅನೇಕ ಜನರು ತಮ್ಮ ತಲೆಯಲ್ಲಿ ಏನಾಗುತ್ತದೆ ಎಂಬ ಕಾರಣದಿಂದ, ಅಂದರೆ ಭಾವನಾತ್ಮಕ ಕಾರಣಗಳಿಗಾಗಿ ಬಳಲುತ್ತಿದ್ದಾರೆ; ನಾನು ದೈಹಿಕವಾಗಿ ಹಿಂಸೆಗೆ ಒಳಗಾಗಿದ್ದೇನೆ. ನನಗೆ ಊಟವಿಲ್ಲ, ನೀರಿಲ್ಲ, ತಲೆಗೆ ಸೂರಿಲ್ಲ. ಮಾತನಾಡಲು, ಕಷ್ಟ ಹೇಳಿಕೊಳ್ಳಲು ಜನವಿಲ್ಲ. ಒಂದು ಬಾರಿ ನೆಟ್ಟಗೆ ನಿಂತುಕೊಳ್ಳಲು ಒಂದು ತುಂಡು ಭೂಮಿಯು ನನಗೆ 438 ದಿನಗಳಲ್ಲಿ ಸಿಕ್ಕಿಲ್ಲ. ಆದರೂ ನಾನು ಬದುಕಲೇಬೇಕೆಂಬ ಅದಮ್ಯ ಉತ್ಸಾಹದಿಂದ ಬದುಕಿದೆ. ನಾನು ಅದನ್ನು ಮಾಡಲು ಸಾಧ್ಯವಾದರೆ ನೀವು ಮಾಡಬಹುದು, ಒಬ್ಬ ಖಿನ್ನತೆಗೆ ಒಳಗಾದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿದರೆ ಈ ಪುಸ್ತಕವು ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾನೆ ಸಮುದ್ರ ಸಾಹಸಿ.

“ಬಲಶಾಲಿಯಾಗಿರಿ. ಧನಾತ್ಮಕವಾಗಿ ಯೋಚಿಸಿ. ನೀವು ಇದಕ್ಕೆ ವಿರುದ್ಧವಾಗಿ ಯೋಚಿಸಲು ಪ್ರಾರಂಭಿಸಿದರೆ, ನೀವು ವೈಫಲ್ಯದ ಕಡೆಗೆ ಹೋಗುತ್ತೀರಿ. ಬದುಕುಳಿಯುವ ಬಗ್ಗೆ ಯೋಚಿಸುವಾಗ ನಿಮ್ಮ ಮನಸ್ಸು ನಿರಾಳವಾಗಿರಬೇಕು. ಸಾವಿನ ಬಗ್ಗೆ ಯೋಚಿಸಬೇಡಿ. ನೀವು ಸಾಯುವಿರಿ ಎಂದು ನೀವು ಭಾವಿಸಿದರೆ, ನೀವು ಸಾಯುತ್ತೀರಿ. ನೀವು ಬದುಕಬೇಕು ಮತ್ತು ನಿಮ್ಮ ಜೀವನದ ಭವಿಷ್ಯದ ಬಗ್ಗೆ ಯೋಚಿಸಬೇಕು, ಜೀವನವು ಸುಂದರವಾಗಿರುತ್ತದೆ! ಜೀವನದಲ್ಲಿ ಸವಾಲುಗಳು ಮತ್ತು ಶಿಕ್ಷೆಗಳಿವೆ ಆದರೆ ನೀವು ಹೋರಾಡಬೇಕು! ”. ಗೆಳೆಯರೇ ಈ ಸಾಹಸಿಯ ಬದುಕು ನಮಗೆ ಸ್ಫೂರ್ತಿ ನೀಡಿ ಇನ್ನಷ್ಟು ನಮ್ಮನ್ನು ಜೀವನ್ಮುಖಿ ಯಾಗಿ ಚಿಂತಿಸುವಂತೆ ಮಾಡಿಕೊಳ್ಳೋಣ. ಅದೇ ಇವತ್ತಿನ ಬೆಳಗಿನ ಹಾರೈಕೆ.

Leave A Reply

Your email address will not be published.