ಪ್ರಧಾನಮಂತ್ರಿ ಕುಸುಮ್ ಯೋಜನೆ ಹೆಸರಿನಲ್ಲಿ ಭಾರೀ ವಂಚನೆ !! | ಕೇಂದ್ರ ಸರ್ಕಾರರಿಂದ ರೈತರಿಗೆ ಅಲರ್ಟ್ ಜಾರಿ

ದೇಶದ ರೈತ ಸಮೂಹಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಪ್ರಧಾನ ಮಂತ್ರಿ ಕುಸುಮ್ ಯೋಜನೆಯು ಕೂಡ ರೈತರಿಗೆ ಪ್ರಯೋಜನ ನೀಡುವಂತಹ ಒಂದು ಯೋಜನೆಯಾಗಿದೆ. ಈ ಯೋಜನೆಯ ನೆರವಿನಿಂದ ಈಗಾಗಲೇ ರೈತರು ಅಪಾರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಡಿಯಲ್ಲಿ ಸೋಲಾರ್ ಪಂಪ್ ಸಬ್ಸಿಡಿಗಾಗಿ ರೈತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆದರೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಅನೇಕ ರೈತರು ವಂಚನೆಗೆ ಗುರಿಯಾಗುತ್ತಿದ್ದಾರೆ.

ಹೌದು. ಸೋಲಾರ್ ಪಂಪ್ ಗೆ ಸಬ್ಸಿಡಿ ಕೊಡಿಸುವುದಾಗಿ ಹೇಳಿ ರೈತರಿಂದ ವಂಚಕರು ಹಣವನ್ನು ಪಡೆಯುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಈ ಯೋಜನೆಗೆ ಸಂಬಂಧಿಸಿದ ಯಾವುದೇ ಕೆಲಸಗಳಿಗೆ ಹೊರಗಿನವರನ್ನು ಸಂಪರ್ಕಿಸದಂತೆ ಸರ್ಕಾರ ರೈತರಿಗೆ ಮನವಿ ಮಾಡಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸರಿಯಾದ ಮಾಹಿತಿ ಇಲ್ಲದ ರೈತರಿಗೆ ವಂಚಕರು ಸುಳ್ಳು ಹೇಳಿ ಅವರಿಂದ ಸಾಕಷ್ಟು ಹಣ ಲಪಟಾಯಿಸುತ್ತಿದ್ದಾರೆ.

ಈ ಕುರಿತು ಪಿಎಂ ಕುಸುಮ ಯೋಜನೆಯ ಅಧಿಕೃತ ವೆಬ್ ಸೈಟ್ ಮೇಲೆ ಸರ್ಕಾರ ಈ ಕುರಿತು ಎಚ್ಚರಿಕೆಯ ಸಂದೇಶವನ್ನು ಪ್ರಕಟಿಸಿದೆ. ಇನ್ನೊಂದೆಡೆ, ವಂಚನೆಯ ಪ್ರಕರಣಗಳ ಹಿನ್ನೆಲೆ ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದ ಪಿಐಬಿಯ ಪ್ಯಾಕ್ಟ್ ಚೆಕ್ ತಂಡ, ಪ್ರಧಾನ ಮಂತ್ರಿ ಕುಸುಮ ಯೋಜನೆಯ ಅಡಿ ನೀಡಲಾಗಿರುವ ಒಂದು ಅನುಮೋದನೆ ಪಾತ್ರದಲ್ಲಿ ಸೋಲಾರ್ ಪಂಪ್ ಸ್ಥಾಪಿಸಲು ರೂ.5600 ಕಾನೂನು ಶುಲ್ಕ ಮತ್ತು ರೂ. 5000 ಹೆಚ್ಚುವರಿ ನೊಂದಣಿ ಶುಲ್ಕವನ್ನು ಕೋರಲಾಗಿತ್ತು. ಇದೊಂದು ನಕಲಿ ಅನುಮೋದನೆ ಪತ್ರವಾಗಿದ್ದು, ಸರ್ಕಾರ ಇಂತಹ ಯಾವುದೇ ಅನುಮೋದನೆ ಪತ್ರ ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು.

ಪ್ರಧಾನ ಮಂತ್ರಿ ಕುಸುಮ್ ಯೋಜನೆಯಡಿಯಲ್ಲಿ, ಸೋಲಾರ್ ಪವರ್ ಪಂಪ್‌ಗಳನ್ನು ನೀಡುವ ಕುರಿತು ಅನೇಕ ನಕಲಿ ಸಂದೇಶಗಳನ್ನು ಸಹ ರವಾನಿಸಲಾಗುತ್ತಿದೆ. ಇಂತಹ ಆಕರ್ಷಕ ಕೊಡುಗೆಗಳ ಬಗ್ಗೆ ರೈತರು ಜಾಗರೂಕರಾಗಿರಬೇಕು ಎಂದು ಸರ್ಕಾರ ಹೇಳಿದೆ. ನಿಮ್ಮ ಸಣ್ಣ ಅಜಾಗರೂಕತೆ ನೀವು ಕಷ್ಟಪಟ್ಟು ಸಂಪಾದಿಸಿದ ಹಣ ವಂಚಕರ ಕೈಸೇರಬಹುದು ಎಂದು ಸರ್ಕಾರ ಎಚ್ಚರಿಸಿದೆ. ಸರಕಾರವೂ ಕೂಡ ತನ್ನ ಯೋಜನೆಗಳ ಬಗ್ಗೆ ಆಗಾಗ ಜನರನ್ನು ಎಚ್ಚರಿಸುತ್ತಲೇ ಇರುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.

ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಮತ್ತು ಉತ್ಥಾನ್ ಮಹಾಭಿಯಾನ್ ಹೆಸರಿನಲ್ಲಿ ಹಲವು ನಕಲಿ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಗಳ ಮೂಲಕ ಹಲವು ರೈತರು ವಂಚನೆಗೆ ಒಳಗಾಗುತ್ತಿರುವುದು ಸಚಿವಾಲಯದ ಗಮನಕ್ಕೆ ಬಂದಿದೆ. ಇದರಲ್ಲಿ ರೈತರಿಗೆ ನೋಂದಣಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಲು ತಿಳಿಸಲಾಗಿದೆ. ನಕಲಿ ವೆಬ್‌ಸೈಟ್‌ ಮೂಲಕ ಮೂಲ ವೆಬ್‌ಸೈಟ್‌ನಂತೆ ಡೊಮೈನ್ ಸೃಷ್ಟಿಸಿ ಅದರಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ ವಂಚಕರು ರೈತರನ್ನು ವಂಚಿಸುವ ಕೆಲಸ ಮಾಡುತ್ತಿರುವುದು ಮಾತ್ರ ಖೇದಕರ ಸಂಗತಿ.

Leave A Reply

Your email address will not be published.