ಧರ್ಮದ ಅಮಲು ಹತ್ತದ ಯಕ್ಷಗಾನಕ್ಕೆ ಧರ್ಮ ಸಂಘರ್ಷದ ಹೊಡೆತ |ಧ್ವನಿವರ್ಧಕ ಬಳಕೆಗೆ ಅವಕಾಶ ಕೊಡಬೇಕೆಂದು ಮನವಿ!!!

ಮಂಗಳೂರು : ರಾಜ್ಯದಲ್ಲಿ ಲೌಡ್ ಸ್ಪೀಕರ್ ಗಲಾಟೆ ಒಂದು ಹಂತ ತಲುಪಿದೆ. ಇತ್ತೀಚೆಗಷ್ಟೇ ಮುಸ್ಲಿಂ ಮುಖಂಡರು ಬೆಳಗ್ಗೆ ಆರು ಗಂಟೆಯವರೆಗಿನ ಆಝಾನ್ ನ್ನು ಮೈಕ್ ಇಲ್ಲದೇ ಮಾಡಲು ಒಪ್ಪಿದ್ದಾರೆ. ಆದರೆ ಕರಾವಳಿಯಲ್ಲಿ ಯಕ್ಷಗಾನ ಕಲಾವಿದರಿಗೆ ಮಾತ್ರ ಸರ್ಕಾರದ ಆದೇಶ ಕುತ್ತು ತಂದಿದೆ.

ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ ರಾತ್ರಿ ಇಡೀ ನಡೆಯುತ್ತದೆ. ಇಲ್ಲೂ ಕೂಡಾ ಮೈಕ್ ಬಳಕೆ ತಡೆಯುವ ಆತಂಕ ಯಕ್ಷಗಾನ ಕಲಾವಿದರಲ್ಲಿದೆ. ಈ ಬಗ್ಗೆ ಸರ್ಕಾರಕ್ಕೆ ಯಕ್ಷಗಾನ ಕಲಾವಿದರು, ಲೌಡ್ ಸ್ಪೀಕರ್ ಬಳಕೆ ವಿಚಾರದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ರಿಯಾಯಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಯಕ್ಷಗಾನ ಮೇಳದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ, ಕರಾವಳಿ ಕರ್ನಾಟಕದಲ್ಲಿ ಸರ್ಕಾರ ತನ್ನ ಆದೇಶದ ಬಗ್ಗೆ ಗಮನಹರಿಸಬೇಕು. ಕರಾವಳಿ ಕರ್ನಾಟಕದಲ್ಲಿ ಸಾಕಷ್ಟು ಯಕ್ಷಗಾನ,ನಾಟಕ ತಂಡಗಳಿವೆ. ಆರೇಳು ಜಿಲ್ಲೆಗಳಲ್ಲಿ ರಾತ್ರಿ ಇಡೀ ಕಾರ್ಯಕ್ರಮಗಳು ನಡೆಯುತ್ತದೆ. ಯಕ್ಷಗಾನಕ್ಕೆ ಯಾವುದೇ ಧರ್ಮದ ಬಂಧನ ಇಲ್ಲ. ಎಲ್ಲಾ ಧರ್ಮದವರು ಯಕ್ಷಗಾನವನ್ನು ಆಡಿಸುತ್ತಾರೆ. ಯಕ್ಷಗಾನವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಮಾಡುತ್ತಾರೆ. ಇದಕ್ಕೆ ಧರ್ಮದ ತಡೆ ಇಲ್ಲ. ಸರ್ಕಾರ ಇದನ್ನು ಗಮನಿಸಬೇಕು. ಕೊರೊನಾ ಸಂದರ್ಭದಲ್ಲಿ ಕಲಾವಿದರು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದರು. ಇದನ್ನೇ ನಂಬಿ ನಾಟಕ ಯಕ್ಷಗಾನ ಈ ಬಗ್ಗೆ ಗಮನ ಹರಿಸಬೇಕು. ಯಕ್ಷಗಾನಕ್ಕೆ ವಿಶೇಷ ಅವಕಾಶ ನೀಡಬೇಕು.

ಮೈಕ್ ಡೆಸಿಬಲ್‌ನಿಂದ ಯಕ್ಷಗಾನ ಮಾಡಲು ಸಾಧ್ಯವಿಲ್ಲ. ಕರಾವಳಿ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು. ಕಟೀಲು ಮಂದಾರ್ತಿ ಸೇರಿದಂತೆ ಹಲವು ಮೇಳಗಳು ರಾತ್ರಿ ಇಡೀ ಕಾರ್ಯಕ್ರಮ ನೀಡುತ್ತದೆ. ಕೆಲವು ಕಾಲಮಿತಿಯ ತಂಡಗಳೂ ಇದೆ. ಯಾವುದಕ್ಕೂ ಇಂತಹ ನಿಯಮ ತಡೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು. ಈ ಬಗ್ಗೆ ಸರ್ಕಾರ ಪ್ರತ್ಯೇಕ ನಿಯಮ ತರಬೇಕು ಅಂತಾ ಮನವಿ ಮಾಡಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಭಾರೀ ತೊಂದರೆಗೀಡಾದ ಕಲಾವಿದರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಧರ್ಮ ಸಂಘರ್ಷವನ್ನು ಮುಂದಿಟ್ಟು ಕಲಾವಿದರಿಗೆ ತೊಂದರೆ ನೀಡುವುದು ಸರಿಯಲ್ಲ. ಕಲಾವಿದರ ಬದುಕು ಸುಸ್ಥಿತಿಗೆ ಬರುವ ಸಂಧರ್ಭದಲ್ಲಿ ಇಂತಹ ನಿಯಮಗಳು ಜಾರಿಯಾದರೆ ಕಲಾವಿದರ ಜೊತೆಗೆ ಕಲೆಯೂ ಅಳಿಸಿ ಹೋಗುತ್ತದೆ ಎಂಬ ಆತಂಕ ಕಲಾವಿರದ್ದಾಗಿದೆ.

ಒಟ್ಟಿನಲ್ಲಿ ಧ್ವನಿ ವರ್ಧಕದ ಬಳಕೆಯ ಕುರಿತು ಸರ್ಕಾರದ ಸುತ್ತೋಲೆ ಕಲಾವಿದರನ್ನು ಕಂಗೆಡಿಸಿದೆ. ಧರ್ಮದ ಅಮಲು ಹತ್ತದ ಕಲಾರಂಗಕ್ಕೆ ಧರ್ಮ ಸಂಘರ್ಷ ಹೊಡೆತ ನೀಡದಿರಲಿ ಅನ್ನೋದು ಕಲಾ ಪ್ರೇಕ್ಷಕರ ಅಭಿಪ್ರಾಯವಾಗಿದೆ.

Leave A Reply

Your email address will not be published.