ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಬಡ್ಡಿ ರಹಿತ ಸಾಲ ನೀಡುತ್ತಿದೆಯೇ ಕೇಂದ್ರ ಸರ್ಕಾರ !?? | ನಿಜಾಂಶ ಇಲ್ಲಿದೆ ನೋಡಿ

ಸರ್ಕಾರದ ವತಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮೂಲಕ ರೈತರಿಗೆ ಬಡ್ಡಿಯಿಲ್ಲದೆ ಸಾಲ ನೀಡಲಾಗುತ್ತಿದೆ ಎಂಬ ಸಂದೇಶವು ನಿಮಗೂ ಬಂದಿದ್ದರೆ, ನಿಜಾಂಶದ ಕುರಿತು ತಿಳಿದುಕೊಳ್ಳಿ. ಈ ವಿಷಯದಲ್ಲಿ ನೀವು ಜಾಗರೂಕರಾಗಿರುವುದು ತುಂಬಾ ಮುಖ್ಯ. ಈ ಬಗ್ಗೆ ಸಾಮಾನ್ಯ ಜನರಿಗೆ ಪಿಐಬಿಯಿಂದ ಸರಿಯಾದ ಮಾಹಿತಿಯನ್ನು ನೀಡಿದೆ.

ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಆಗಿರುವ ಪಿಐಬಿ ಫ್ಯಾಕ್ಟ್ ಮೂಲಕ ಸರ್ಕಾರ ಈ ಸಂದೇಶದ ಹಿಂದಿನ ಸತ್ಯಾಸತ್ಯತೆ ಕುರಿತು ಮಾಹಿತಿ ನೀಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಕುರಿತಂತೆ ಇಂತಹ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಸರ್ಕಾರ ಹೇಳಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ನೀಡಲಾಗುವ 3 ಲಕ್ಷ ರೂ. ಗಳವರೆಗಿನ ಸಾಲಕ್ಕೆ ಶೇ.7ರ ಲೆಕ್ಕಾಚಾರದಲ್ಲಿ ಬಡ್ಡಿ ವಿಧಿಸಲಾಗುತ್ತದೆ. ಇದರಲ್ಲಿ ರೈತರು ಸರಿಯಾದ ಸಮಯಕ್ಕೆ ಸಾಲ ಮರುಪಾವಟಿಸಿ ಶೇ.3 ರಷ್ಟು ರಿಯಾಯ್ತಿ ಕೂಡ ಪಡೆಯಬಹುದು.

ಏಪ್ರಿಲ್ 1 ರಿಂದ ಕೆಸಿಸಿ ಮೇಲಿನ ಬಡ್ಡಿದರ ಶೂನ್ಯ ಮಾಡಲಾಗುತ್ತಿದೆ ಎಂದು ಹರಿದಾಡುತ್ತಿರುವ ಸಂದೇಶದ ಸ್ಕ್ರೀನ್ ಶಾಟ್ ಪಿಐಬಿ ಫ್ಯಾಕ್ಟ್ ಚೆಕ್ ತಂಡ ಹಂಚಿಕೊಂಡಿದ್ದು, ಈ ಸಂದೇಶ ಕಳೆದ ಕೆಲ ದಿನಗಳಲ್ಲಿ ಭಾರಿ ವೈರಲ್ ಆಗಿತ್ತು. ಇದರಲ್ಲಿ ವೃತ್ತಪತ್ರಿಕೆಯ ಕಟಿಂಗ್ ವೊಂದನ್ನು ಬಳಸಲಾಗಿದ್ದು, ಅದರಲ್ಲಿ ಏಪ್ರಿಲ್ 1, 2022 ರಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ಮೂರು ಲಕ್ಷ ರೂ.ಗಳವರೆಗಿನ ಮೊತ್ತಕ್ಕೆ ಯಾವುದೇ ರೀತಿಯ ಬಡ್ಡಿ ಅನ್ವಯಿಸುವುದಿಲ್ಲ ಎನ್ನಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಪಿಐಬಿ ಫ್ಯಾಕ್ಟ್ ಚೆಕ್ಕಿಂಗ್ ತಂಡ ಈ ಸಂದೇಶ ಸಂಪೂರ್ಣ ನಕಲಿಯಾಗಿದೆ ಹಾಗೂ ಸುಳ್ಳು ಸುದ್ದಿ ಪಸರಿಸುವ ಉದ್ದೇಶ ಹೊಂದಿದೆ ಎಂದು ಹೇಳಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ರೈತರು ಶೇ.7 ರಷ್ಟು ಬಡ್ಡಿಯನ್ನು ಪಾವತಿಸಬೇಕು ಎಂದು ಟ್ವೀಟ್ ನಲ್ಲಿ ಸ್ಪಷ್ಟಪಡಿಸಲಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಡಿಜಿಟೈಜೇಶನ್ ಜೊತೆಗೆ ಸೈಬರ್ ಕ್ರೈಂ ಪ್ರಕರಣಗಳು ಕೂಡ ಹೆಚ್ಚಾಗತೊಡಗಿವೆ. ಹೀಗಾಗಿ ಜನರನ್ನು ವಂಚನೆಯಿಂದ ರಕ್ಷಿಸಲು ಪಿಐಬಿ ಫ್ಯಾಕ್ಟ್ ಚೆಕ್ ತಂಡ ವೈರಲ್ ಸಂದೇಶಗಳ ಸತ್ಯಾಸತ್ಯತೆಯನ್ನು ಜನರ ಮುಂದಿಟ್ಟಿದೆ. ಜನರು ನಕಲಿ ಸುದ್ದಿಗಳಿಗೆ ಕಲೆ ಕೊಡಬಾರದು ಹಾಗೂ ಈ ವಿಷಯಗಳಲ್ಲಿ ಮುಂದುವರೆಯಬಾರದು ಎಂದು ಎಚ್ಚರಿಕೆ ನೀಡಿದೆ.

Leave A Reply

Your email address will not be published.