ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ ಎಂದ ವೈದ್ಯರು | ಇನ್ನೇನು ಅಂತ್ಯಕ್ರಿಯೆ ಮಾಡಬೇಕೆನ್ನುವಾಗ ಸ್ಮಶಾನದಲ್ಲಿ ಮಗು ಜೀವಂತ

ರಾಯಚೂರು: ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯದಿಂದ ಅದೆಷ್ಟೋ ಪುಟ್ಟ ಕಂದಮ್ಮಗಳ ಪ್ರಾಣವೇ ಹೋಗಿದೆ. ಇಂತಹ ಘಟನೆಗೆ ಕೊನೆಯೇ ಇಲ್ಲ ಎಂಬಂತಾಗಿದ್ದು, ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಹೌದು. ವೈದ್ಯರು ಮಾಡಿದ ಎಡವಟ್ಟಿನಿಂದ ಪೋಷಕರು ಕಂಗಲಾಗುವಂತೆ ಆಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಆ ಮಗು ಸ್ಮಶಾನದಲ್ಲಿ ಮತ್ತೆ ಜೀವಂತವಾದ ಆಘಾತಕಾರಿ ಘಟನೆ ವರದಿಯಾಗಿದೆ.

ನವಜಾತ ಹೆಣ್ಣು ಶಿಶು ಸಾವನ್ನಪ್ಪಿದೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ ನಂತರ, ಕುಟುಂಬದ ಸದಸ್ಯರು ಅಂತ್ಯಕ್ರಿಯೆಗೆ ಮುಂದಾಗಿದ್ದಾರೆ. ಆದರೆ ಈ ವೇಳೆಗಾಗಲೇ ಮಗು ಉಸಿರಾಡುತ್ತಿರುವುದನ್ನು ಸಂಬಂಧಿಕರು ಗಮನಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುವ ಘಟನೆ ರಾಯಚೂರು ಜಿಲ್ಲೆಯ ತುರುವಿಹಾಳ ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ :
ಮೇ 10 ರಂದು ತುರುವಿಹಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಈರಪ್ಪ ಮತ್ತು ಅಮರಮ್ಮ ದಂಪತಿಗೆ ಹೆಣ್ಣು ಮಗುವಾಗಿತ್ತು. ಆದರೆ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇತ್ತು. ಹೀಗಾಗಿ ಮಗುವನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಪೋಷಕರಿಗೆ ಸೂಚಿಸಿದ್ದಾರೆ. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ ಎಂದು ಪೋಷಕರು ಅದೇ ದಿನ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು.

ಖಾಸಗಿ ಆಸ್ಪತ್ರೆಯ ವೈದ್ಯರು ಮಗುವನ್ನು ದಾಖಲಿಸಿಕೊಂಡು ಮೂರ್ನಾಲ್ಕು ದಿನ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಗಾಗಿ ದಿನಕ್ಕೆ 10,000 ದಿಂದ 12,000 ರೂ. ಹಣ ತೆಗೆದುಕೊಂಡಿದ್ದಾರೆ. ಆದರೇ, ಆಸ್ಪತ್ರೆಯ ವೈದ್ಯರು ಕೊನೆಗೆ ಹೇಳಿದ್ದು ಮಾತ್ರ ಮಗು ಮೃತಪಟ್ಟಿದೆ ಎಂದು.ಬಳಿಕ ಮಗು ಮೃತಪಟ್ಟಿರುವ ವಿಷಯ ತಿಳಿದ ಪೋಷಕರು ತುರುವಿಹಾಳ ಗ್ರಾಮಕ್ಕೆ ಮೇ 14ರಂದು ಕರೆದೊಯ್ದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದರು, ಇದೇ ವೇಳೆ ಸ್ಮಶಾನದಲ್ಲಿ ಮಗು ಉಸಿರಾಡುತ್ತಿರುವುದನ್ನು ಗಮನಿಸಿದ ಸಂಬಂಧಿಕರೊಬ್ಬರು ಕೂಡಲೇ ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅದೃಷ್ಟವಶಾತ್ ಇದೀಗ ಮಗು ಚಿಕಿತ್ಸೆ ಪಡೆಯುತ್ತಿದೆ. ಇದೀಗ ಪೋಷಕರು ನವಜಾತ ಶಿಶು ಸಾವನ್ನಪ್ಪಿದೆ ಎಂದು ಘೋಷಿಸಿದ ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.