ಮತ್ತೊಮ್ಮೆ ಜೀವ ಭಯದ ಕರಿನೆರಳಿನಲ್ಲಿ ಕಾಶ್ಮೀರಿ ಪಂಡಿತರು !! | ಕಾಶ್ಮೀರದಲ್ಲಿ ನಾವು ಸುರಕ್ಷಿತವಾಗಿಲ್ಲ ಎಂದು 350 ಸರ್ಕಾರಿ ನೌಕರರಿಂದ ಸಾಮೂಹಿಕ ರಾಜೀನಾಮೆ

ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯದ ಕಥೆ ತೆರೆಗೆ ಬಂದ ಬಳಿಕ ಆ ಸಮುದಾಯದ ಜನರ ಮೇಲೆ ಇಡೀ ದೇಶದ ಅನುಕಂಪವೇ ಪ್ರಾಪ್ತವಾಗಿತ್ತು. ಆದರೆ ಇತ್ತೀಚೆಗೆ ನಡೆದ ಬೆಳವಣಿಗೆಯಿಂದ ಮತ್ತೆ ಕಾಶ್ಮೀರಿ ಪಂಡಿತರು ಜೀವ ಭಯದಿಂದ ಬದುಕುವಂತಾಗಿದೆ. ಇದರ ಮುಂದುವರಿದ ಭಾಗವೆಂಬಂತೆ ಪ್ರಧಾನ ಮಂತ್ರಿಗಳ ಉದ್ಯೋಗ ಪ್ಯಾಕೇಜ್ ಅಡಿಯಲ್ಲಿ ಕಾಶ್ಮೀರದ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 350 ಕಾಶ್ಮೀರಿ ಪಂಡಿತರ ವರ್ಗ ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ (ಎಲ್‌ಜೆ) ಮನೋಜ್ ಸಿನ್ಹಾ ಅವರಿಗೆ ರಾಜೀನಾಮೆ ಪತ್ರ ರವಾನಿಸಲಾಗಿದೆ. ‘ಪ್ರಧಾನ ಮಂತ್ರಿ ಉದ್ಯೋಗ ಪ್ಯಾಕೇಜ್’ ಅಡಿ ಕಳೆದ 12 ವರ್ಷಗಳಿಂದ ಕಣಿವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಕಾಶ್ಮೀರಿ ಪಂಡಿತ ಅಲ್ಪಸಂಖ್ಯಾತರಿಗೆ ಭದ್ರತಾ ಭಾವ ಒದಗಿಸುವಲ್ಲಿ ಆಡಳಿತ ವಿಫಲವಾಗಿದೆ. ‘ಕಾಶ್ಮೀರದಲ್ಲಿ ನಾವು ಸುರಕ್ಷಿತವಾಗಿಲ್ಲ’ ಎಂದು ನೌಕರ ವರ್ಗ ಪತ್ರದಲ್ಲಿ ಉಲ್ಲೇಖಿಸಿದೆ.

ನೌಕರೆಲ್ಲರೂ ಸಾಮೂಹಿಕ ರಾಜೀನಾಮೆ ನೀಡುವುದನ್ನು ಹೊರತುಪಡಿಸಿ, ನಮಗೆ ಯಾವುದೇ ಆಯ್ಕೆಯಿಲ್ಲ. ಇದು ನಮ್ಮ ಜೀವಗಳನ್ನು ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗೋಪಾಯ ಎಂದು ಪತ್ರದಲ್ಲಿ ಹೇಳಲಾಗಿದೆ.

ಕಾಶ್ಮೀರಿ ಪಂಡಿತರಾದ ಸರ್ಕಾರಿ ನೌಕರ ರಾಹುಲ್ ಭಟ್ ಅವರನ್ನು ಬುದ್ಧಾವ್‌ನ ತಹಸೀಲ್ ಕಚೇರಿಯಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಕೊಂದ ಘಟನೆಗೆ ಪ್ರತಿಭಟನಾರ್ಥವಾಗಿ ಈ ಬೆಳವಣಿಗೆ ನಡೆದಿದೆ. ಕಾಶ್ಮೀರ ಪಂಡಿತನ ಹತ್ಯೆ ಖಂಡಿಸಿ ಹಲವು ಕಡೆ ಪ್ರತಿಭಟನೆ ನಡೆದ ಬಳಿಕ ಇದೀಗ ಸರ್ಕಾರಿ ನೌಕರರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.

Leave A Reply

Your email address will not be published.