ಕೂದಲು ಕತ್ತರಿಸಿ, ಲುಂಗಿ ಧರಿಸಿ ಕಳೆದ 30 ವರ್ಷಗಳಿಂದ ‘ಅನ್ನಾಚಿ’ ಯಾಗಿ ಯಾರಿಗೂ ಅನುಮಾನ ಬಾರದಂತೆ ಬದುಕಿದ ಮಹಿಳೆ | ಗಂಡಸಿನಂತೆ ಮಾರುವೇಷ ಹೋಗಲು ಒಂದು ಕಾರಣ ಇತ್ತು !!!

ತಾಯಿಯಾದವಳು ತನ್ನ ಮಗುವಿನ ಭವಿಷ್ಯ ಚೆನ್ನಾಗಿರಲು ತುಂಬಾನೇ ಕಷ್ಟ ಪಡುತ್ತಾಳೆ. ಅದರಲ್ಲೂ ಏಕಾಂಗಿ ಪೋಷಕಿಯಾಗಿ ಮಕ್ಕಳನ್ನು ಬೆಳೆಸುವುದೆಂದರೆ ಸುಲಭದ ಮಾತಲ್ಲ. ಅಂತೆಯೇ ಇಲ್ಲಿ ಮಹಿಳೆಯೊಬ್ಬರು ತನ್ನ ಮಗಳನ್ನು ಏಕಾಂಗಿಯಾಗಿ ಬೆಳೆಸಲು 30 ವರ್ಷಗಳ ಕಾಲ ಪುರುಷನ ವೇಷ ಧರಿಸಿ ಜೀವನ ನಡೆಸಿರುವ ಘಟನೆ ನಡೆದಿದೆ.

30 ವರ್ಷದ ಹಿಂದೆ ಪೆಚಿಯಮ್ಮಾಳ್ ಎಂಬವರು ಮದುವೆಯಾಗಿ ಸ್ವಲ್ಪ ದಿನದಲ್ಲೇ ಹೃದಯಾಘಾತದಿಂದ ತನ್ನ ಪತಿಯನ್ನು ಕಳೆದುಕೊಂಡಿದ್ದಾರೆ. ಆದರೆ ಅದಾಗಲೇ ಆಕೆ ತುಂಬು ಗರ್ಭಿಣಿಯಾಗಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ ಪೆಚಿಯಮ್ಮಾಳ್ ಮಗುವನ್ನು ಸಾಕಲು ಕೈಗೆ ಸಿಕ್ಕ ಎಲ್ಲಾ ಕೆಲಸ ಮಾಡಲು ಪ್ರಾರಂಭಿಸಿದ್ದರು. ಆದರೆ ಈ ವೇಳೆಯಲ್ಲಿ ಆಕೆ ಬಹಳಷ್ಟು ಕಿರುಕುಳವನ್ನು ಅನುಭವಿಸಿದ್ದಾರೆ. ಕಿರುಕುಳದಿಂದ ಬೇಸತ್ತು ಗಂಡಿನಂತೆ ಬದುಕಬೇಕೆಂದು ಆಕೆ ನಿರ್ಧರಿಸಿದ್ದಾರೆ. ಅಂತೆಯೇ ತನ್ನ ಮಗಳನ್ನು ಚೆನ್ನಾಗಿ ಸಾಕಲು ನಿರ್ಧಾರ ಮಾಡಿದ ಆಕೆ ಪುರುಷನಂತೆ ವೇಷ ಧರಿಸಲು ನಿರ್ಧರಿಸಿ ‘ಮುತ್ತು’ ಆಗಿ ಪರವರ್ತನೆ ಆಗಿದ್ದಾಳೆ.

ಇನ್ನು ಪೆಚಿಯಮ್ಮಾಳ್ ಪುರುಷನಂತೆ ಕಾಣಲು ತನ್ನ ಉದ್ದನೆಯ ಕೂದಲನ್ನು ಕತ್ತರಿಸಿ, ಶರ್ಟ್ ಧರಿಸಲು ಶುರು ಮಾಡಿದ್ದಾಳೆ. ಅಲ್ಲದೇ, ಲುಂಗಿ ಸುತ್ತಲೂ ಪ್ರಾರಂಭಿಸಿದ್ದಾಳೆ. ಹಾಗೆ ಕಳೆದ ಮೂರು ದಶಕಗಳಿಂದ ಆಕೆ ಚೆನ್ನೈನ ಹೋಟೆಲ್ ಗಳು, ಚಹಾ ಅಂಗಡಿಗಳು ಮುಂತಾದ ಅನೇಕ ಸ್ಥಳಗಳಲ್ಲಿ ಕೆಲಸ ಮಾಡಿದ್ದು, ಅವಳನ್ನು ‘ಅನ್ನಾಚಿ’ (ಪುರುಷನ ಸಾಂಪ್ರದಾಯಿಕ ಹೆಸರು) ಎಂದು ಕರೆಯಲಾಗುತ್ತಿತ್ತು. ಅಷ್ಟರ ಮಟ್ಟಿಗೆ ಆಕೆ ಡ್ರೆಸ್ನಲ್ಲಿ, ಮಾತಿನಲ್ಲಿ ಮತ್ತು ಆಕ್ಷನ್ ನಲ್ಲಿ ಥೇಟು ಗಂಡಾಗಿ ನಟಿಸಿದ್ದಳು !

ಆಕೆ ಪೇಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಆಗಿ ಕೆಲಸ ಮಾಡುವುದರಿಂದ ಹಿಡಿದು ಎಲ್ಲಾ ರೀತಿಯ ಕೆಲಸಗಳನ್ನು ಕೂಡಾ ಗಂಡು ಮಕ್ಕಳು ಮಾಡುವ ತೀವ್ರತೆಯಲ್ಲಿ ಮಾಡುತ್ತಿದ್ದಳು. ಗಂಡಿನ ಸಮಕ್ಕೆ ಮರವೇರುತ್ತಿದ್ದಳು. ಎಂತಹ ದೊಡ್ಡ ಕಟ್ಟಡ ಆಗಿದ್ದರೂ ಸಹ ಮಂಗನ ಖಚಿತತೆಯಲ್ಲಿ ಮರ ಏರುತ್ತಿದ್ದಳು. ತನ್ನ ಮಗಳಿಗೆ ಸುರಕ್ಷಿತ ಜೀವನವನ್ನು ಕೊಡುವ ಒಂದೇ ಉದ್ದೇಶದಿಂದ ಆಕೆ ಪ್ರತಿ ಪೈಸೆಯನ್ನು ಉಳಿಸಿದ್ದಳು. ಆಕೆ, ಸಾರಿ ಆತ ಉಳಿಸಿದ್ದ !!!.

ನಾನು ಪುರುಷನಂತೆ ವೇಷ ಧರಿಸಿದ ಕೆಲವು ದಿನಗಳ ನಂತರ ನನ್ನ ಹೆಸರು ಮುತ್ತು ಎಂದಾಯಿತು. ನಂತರ ಆಧಾರ್, ವೋಟರ್ ಐಡಿ ಮತ್ತು ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ ಅದನ್ನು ನಮೂದಿಸಲಾಯಿತು ಎಂದು ಪೆಚಿಯಮ್ಮಾಳ್ ಹೇಳಿದ್ದಾರೆ. ಅದರಲ್ಲೇ ಅರ್ಥ ಮಾಡಿಕೊಳ್ಳಿ : ಆಕೆ ಅದೆಷ್ಟು ಆತನಲ್ಲಿ ಪರಕಾಯ ಪ್ರವೇಶ ಮಾಡಿರಬೇಕು ಎಂದು. ಇದೆಲ್ಲ ನಡೆದದ್ದು ಮೋಸಕ್ಕಾಗಿ ಅಲ್ಲ, ಶೋಕಿಗಾಗಿ ಅಲ್ಲ, ಬದಲಿಗೆ ಕೇವಲ ಮಗಳಿಗಾಗಿ !!

Leave A Reply

Your email address will not be published.