ಕರಾವಳಿಯಲ್ಲಿ ಬೆಳ್ಳಿ ರಾಶಿಯಂತೆ ಬಂದು ಬಿದ್ದ ಬೂತಾಯಿ ಮೀನು | 30 ಲಕ್ಷ ಮೌಲ್ಯದ 30 ಟನ್ ಮೀನು ಬೋಟಿನಿಂದ ಮೊಗೆದು- ಮೊಗೆದು ಸುಸ್ತಾದ ಮೀನುಗಾರರು !!

ಉಡುಪಿ : ಮೀನೆಂದರೆ ಕರಾವಳಿ ತೀರ ಪ್ರದೇಶದವರಿಗೆ ಬಲು ಇಷ್ಟ. ದಿನಾ ಊಟಕ್ಕೆ ಅವರ ಮೆನುವಿನಲ್ಲಿ ಮೀನು ಇಲ್ಲದಿದ್ದರೆ ಊಟ ಸೇರಲ್ಲ. ಈಗಂತೂ ಮಳೆಗಾಲ ಬಂತು ಕೇಳೋದೇ ಬೇಡ. ಕಾರ-ಕಾರ ಬೂತಾಯಿ ಸಾಂಬಾರು ಮಾಡಿದ್ರೆ ಒಳ್ಳೆದಿತ್ತು ಅನ್ನೋರೆ ಜಾಸ್ತಿ. ಕೊನೆಯ ಪಕ್ಷ ಒಂದು ತುಂಡು ಒಣ ನಂಗ್ ಮೀನ್ ತುಂಡಿನ ಬಾಲವನ್ನಾದ್ರೂ ಊಟದ ಜತೆ ಕಚ್ಚದೆ ಹೋದರೆ, ನಾಲಗೆ ಊಟ ಮಾಡಲು ಮುನಿಯುತ್ತದೆ.

ಈಗೀಗ ಮೀನು ಸಿಗುವುದೇ ಕಮ್ಮಿ. ಇಂತಹ ಮೀನಿನ ಬರ ತೀರಿಸಲೆಂದೋ ಏನೋ ಎಂಬಂತೆ ಮೀನಿನ ರಾಶಿಯೇ ಈಗ ಕಾಪು ಸಮುದ್ರದಲ್ಲಿ ಶುಕ್ರವಾರ ದೊರಕಿದೆ. ಅದು ಕೂಡಾ ಅಗ್ಗವೆಂದು ಮತ್ತು ಅತ್ಯಂತ ಆರೋಗ್ಯದಾಯಕ ಮೀನು ಎಂದು ಪರಿಗಣಿತವಾಗಿರುವ ಬೂತಾಯಿ ಮೀನು ! ಹೌದು. ಮೀನುಗಾರರ ಬಲೆಗೆ ರಾಶಿ ರಾಶಿ ಬೂತಾಯಿ ಮೀನುಗಳು ಬಿದ್ದಿವೆ. ಒಟ್ಟಾರೆ ಕಾಪುವಿನ ಜನತೆಗೆ ಮೀನಿನ ಸುಗ್ಗಿಯೇ ಸುಗ್ಗಿ!

ಕೈಪುಂಜಾಲನ ಓಂ ಸಾಗರ್ ಜೋಡು ದೋಣಿಯ ಮೀನುಗಾರರು ಹಾಕಿದ ಬಲೆಗೆ, ಟನ್ ಗಟ್ಟಲೆ ಮೀನುಗಳು ಸಿಕ್ಕಿ ಬಿದ್ದಿವೆ. ಅಲ್ಲಿ ಸಿಕ್ಕ ಮೀನುಗಳ ಸಂಖ್ಯೆ ಎಸ್ತಿತ್ತೆಂದರೆ, ಬೋಟಿನಿಂದ ಮೊಗೆದಷ್ಟೂ ಮೀನುಗಳು ಖಾಲಿ ಆಗಿತ್ತರಲಿಲ್ಲ. ಸಣ್ಣ ಬೆಳ್ಳಿಯ ತುಂಡುಗಳ ಥರದ ಮೀನ ರಾಶಿಯನ್ನು ಅನ್ ಲೋಡ್ ಮಾಡುವಲ್ಲಿ ಮೀನುಗಾರ ಹುಡುಗರ ಬಲಿಷ್ಠ ತೋಳುಗಳು ಕೂಡಾ ಬಿದ್ದು ಹೋಗಿದ್ದವು. ಅಲ್ಲಿ
30 ಟನ್‌ಗೂ ಅಧಿಕ ಮೌಲ್ಯದ ಬೂತಾಯಿ ಮೀನು ಸಿಕ್ಕಿದೆ. ಒಟ್ಟು 30 ಲಕ್ಷ ಹೆಚ್ಚಿನ ರೂಪಾಯಿಗೆ ಮೀನು ಮಾರಾಟವಾಗಿದೆ. ಒಟ್ಟಾರೆ ಬಾಯಿ ಚಪ್ಪರಿಸಿಕೊಂಡು ಖಡಕ್ ಸಾಂಬಾರ್ ಸವಿಯೋ ಜನರಿಗೂ, ಮೀನು ದೊರಕಿದ ಮೀನುಗಾರರಿಗೂ ಹಬ್ಬವೇ ಹಬ್ಬ.

ಮೊನ್ನೆ ಅಸಾನಿ ಚಂಡ ಮಾರುತದಿಂದ ಕಡಲು ಪ್ರಕ್ಷ್ಯುಬ್ದಗೊಂಡಿರುವ ಕಾರಣದಿಂದಲೇ ಗಂಗೊಳ್ಳಿಯಿಂದ ಮಂಗಳೂರಿನ ಕರಾವಳಿಯವರೆಗೆ ಮೀನುಗಳು ಜಾಗ ಬದಲಿಸಿದ್ದು, ಅದರಿಂದಲೇ ಹೇರಳವಾಗಿ ಈ ಬೂತಾಯಿ ಮೀನು ಕಾಣಿಸಿಕೊಳ್ಳುತ್ತಿವೆ ಎಂದು ಮೀನುಗಾರರು ತಿಳಿಸಿದ್ದಾರೆ.

Leave A Reply

Your email address will not be published.