ವೈದ್ಯರ ಎಡವಟ್ಟು : ಸಿಜೇರಿಯನ್ ಆದ ಬಾಣಂತಿಯರಿಗೆ ಹೊಲಿಗೆ ಹಾಕಿ ಡಿಸ್ಚಾರ್ಜ್ ಮಾಡಿದ ಎರಡನೇ ದಿನಕ್ಕೆ ಮತ್ತೆ ನರಳುತ್ತಾ ವಾಪಾಸು ಬಂದ ಅಮ್ಮಂದಿರು| ಕಾರಣವೇನು ಗೊತ್ತೇ ?

ಮಗು ಹೆತ್ತ ಅಮ್ಮಂದಿರು ಮನೆಯಲ್ಲಿ ಬಾಣಂತನ ಮಾಡ್ಕೊಂಡು ಇರಬೇಕಿತ್ತು. ಆದರೆ ಇಲ್ಲೊಂದು ಆಸ್ಪತ್ರೆಯಲ್ಲಿ ಬಾಣಂತಿಯರು ಸೊಂಟದ ಮೇಲೆ‌ ಕೈ ಹಿಡಿದುಕೊಂಡು ಆಸ್ಪತ್ರೆಯ ಬಾಗಿಲಲ್ಲಿ ನರಳಾಡುತ್ತಿರುವ ಅವಸ್ಥೆ ಕಂಡು ಬಂದಿದೆ. ಇದೆಲ್ಲಾ ಆಗಿರುವುದು ವೈದ್ಯರ ಎಡವಟ್ಟಿನಿಂದಾಗಿ. ಹೌದು ಈ ಪ್ರಮಾದ ನಡೆದಿರುವುದು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ.

ಸಿಜೇರಿಯನ್ ಹೆರಿಗೆಯಾದ ಬಾಣಂತಿಯರು ನರಳಾಡುತ್ತಿರುವ ಪರಿಸ್ಥಿತಿ ಎದುರಾಗಿದ್ದು, ಅಪರೇಷನ್
ಸ್ಟಿಚ್ ಬಿಚ್ಚಿದ ಪರಿಣಾಮ 15ಕ್ಕೂ ಹೆಚ್ಚು ಮಹಿಳೆಯರು ರಕ್ತಸ್ರಾವದಿಂದ ಬಳಲುತ್ತಿದ್ದಾರೆ.

ಸಿಜೇರಿಯನ್ ಹೆರಿಗೆಯಾದ ಬಾಣಂತಿಯರ ಹೊಲಿಗೆ ಹಾಕಿ ಡಿಸ್ಟಾರ್ಜ್ ಮಾಡಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿತ್ತು. ಮನೆಗೆ ಹೋದ ಬಳಿಕ ಬಾಣಂತಿಯರಿಗೆ ರಕ್ತಸ್ರಾವ ಆರಂಭವಾಗಿದ್ದು, ಸಿಜೇರಿಯನ್ ಹೊಲಿಗೆ ಕಿತ್ತುಬಂದು, ಕೀವು ತುಂಬಿದೆ. ಹಾಗಾಗಿ ಎಲ್ಲರೂ ನರಳುತ್ತಾ ವಾಪಸ್ ಆಸ್ಪತ್ರೆಗೆ ಧಾವಿಸಿದ್ದಾರೆ. ತರಬೇತಿಗೆ ಬಂದ ವೈದ್ಯರಿಂದ ಸ್ಟಿಚ್ ಹಾಕಿಸಿದರ ಪರಿಣಾಮ ಬಾಣಂತಿಯರು ಈ ಸಮಸ್ಯೆ ಅನುಭವಿಸುವಂತಾಗಿದೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷವೇ ಕಾರಣ ಎಂದು ಬಾಣಂತಿಯರು ಆರೋಪಿಸಿದ್ದಾರೆ.

ಈ ಬಗ್ಗೆ ಸಮರ್ಥಿಸಿಕೊಂಡಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಎಲ್. ಲಕ್ಕಣ್ಣವರ್, ಆಸ್ಪತ್ರೆಯಲ್ಲಿ ಒಂದೇ ಆಪರೇಷನ್ ಥಿಯೇಟರ್ ಇದೆ. ದಿನಕ್ಕೆ ಸರಾಸರಿ 40ಕ್ಕೂ ಹೆಚ್ಚು ಹೆರಿಗೆ ಕೇಸ್ ಗಳು ಬರುತ್ತಿವೆ. ಈ ಪೈಕಿ 15 ಮಹಿಳೆಯರಿಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಒಂದೇ ಶಸ್ತ್ರಚಿಕಿತ್ಸಾ ಘಟಕ ಇರುವುದರಿಂದ ಸಮಸ್ಯೆಯಾಗಿದೆ. ಪುನಃ ಆಸ್ಪತ್ರೆಗೆ ದಾಖಲಾಗಿರುವ ಬಾಣಂತಿಯರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.