2 ವರ್ಷಗಳಿಂದ 22 ನಾಯಿಗಳು ಜತೆ ಸಂಸಾರ ಮಾಡಿದ ಬಾಲಕ|ಕೊನೆಗೆ ಆತ ನಾಯಿಗಳ ಥರಾನೇ ಮಾತಾಡುತ್ತಿದ್ದ

ಕಾಡುಪ್ರಾಣಿಗಳ ಜೊತೆ ಕಾಡಿನಲ್ಲೇ ಬೆಳೆದು, ಅವುಗಳಂತೆ ವರ್ತನೆ ಮಾಡುತ್ತಿದ್ದ ಮಕ್ಕಳ ಸಿನಿಮಾ ತುಂಬಾ ಬಂದಿದೆ. ಆದರೆ ಅದೆಲ್ಲಾ ಸಿನಿಮಾ. ನೀವು ಎಂದಾದರೂ ಯೋಚಿಸಿದ್ದೀರಾ ? ನಾಗರಿಕ ಸಮಾಜದಲ್ಲಿ ಯಾರಾದರೂ ಈ ರೀತಿಯ ವರ್ತನೆ ಮಾಡುತ್ತಾರೆಂದು, ಅಥವಾ ಅವರು ಪ್ರಾಣಿಗಳ ಜೊತೆ ಇದ್ದು ಪ್ರಾಣಿಗಳ ರೀತಿ ವರ್ತಿಸುವುದನ್ನು ಕಂಡಿದ್ದೀರಾ ? ಇಲ್ಲಿದೆ ಇಂಥದ್ದೇ ಒಂದು ಘಟನೆ. ಹಾಗೆನೇ ಆ ಬಾಲಕ ಈ ರೀತಿಯಾಗಲು ಆತನ ತಂದೆ ತಾಯಿಗಳೇ ಕಾರಣ ಎಂದು.

ಪುಣೆಯ ಕೊಂಡ್ವಾ ಪ್ರದೇಶದಲ್ಲಿ ಪುಟ್ಟ ಬಾಲಕನೊಬ್ಬನ ಸ್ಥಿತಿ ಹೀಗೆ ಆಗಿದೆ. ಯಾವುದೇ ಸಿನಿಮಾ ಕಥೆಗಿಂತ ಭಿನ್ನವಿಲ್ಲ. ಅಕ್ಕರೆಯಿಂದ ಸಾಕಬೇಕಿದ್ದ ಹೆತ್ತವರೇ ಈಗ ಈ ಬಾಲಕನ ವಿಲಕ್ಷಣ ದುಸ್ಥಿಗೆ ಕಾರಣರಾಗಿದ್ದಾರೆ.

ಹೌದು, ಕೊಂಡ್ವಾದ ಕೃಷ್ಣ ಕಟ್ಟಡದಲ್ಲಿ ಹೆತ್ತವರೇ, 22 ನಾಯಿಗಳ ಮಧ್ಯೆ 11 ವರ್ಷದ ಮಗುವನ್ನು 2 ವರ್ಷಗಳ ಕಾಲ ಬಂಧಿಯಾಗಿ ಇಟ್ಟಿದ್ದ ಘಟನೆ ನಡೆದಿದೆ. ಸ್ವಂತ ಮಗನ ಬಗ್ಗೆ ಕಾಳಜಿ ವಹಿಸದೆ, ಆತನನ್ನು ಹೊಲಸಿನ ನಡುವೆ ಮತ್ತು ನಾಯಿಗಳ ಮಧ್ಯೆ ಬಿಟ್ಟು ಬಿಡುವ ಅಪರಾಧವನ್ನು ಆತನ ಹೆತ್ತವರೇ ಮಾಡಿದ್ದಾರೆ ಎಂಬುವುದು ನಂಬಲು ಅಸಾಧ್ಯವಾದರೂ ಇದೊಂದು ಕಹಿ ಸತ್ಯ. ಅಲ್ಲಿನ ನಿವಾಸಿಯೊಬ್ಬರು ಆ ಹುಡುಗನ ಪರಿಸ್ಥಿತಿಯನ್ನು ಕಂಡು, ಸಾಮಾಜಿಕ ಕಾರ್ಯಕರ್ತರಿಗೆ ಮಾಹಿತಿ ನೀಡಿದ ಬಳಿಕ, ಅವರು ಪೊಲೀಸರನ್ನು ಸ್ಥಳಕ್ಕೆ ಕರೆಸಿದಾಗ ಈ ಕರಾಳ ಸತ್ಯ ಬಯಲಾಯಿತು.

ಆದರೆ ಆ ಹುಡುಗನನ್ನು ಅಲ್ಲಿಂದ ರಕ್ಷಿಸಿದಾಗ, ಆತನಿಗೆ ತಾನು ಯಾರೆಂಬುವುದು ಬಹುಪಾಲು ಮರೆತೇ ಹೋಗಿತ್ತು. ಒಂದು ಬೆಡ್‌ರೂಮ್‌ನ ಅಪಾಟ್‌ರ್ಮೆಂಟ್‌ನಲ್ಲಿ ವಾಸಿಸುತ್ತಿತ್ತು ಆ ಕುಟುಂಬ. ಹೆತ್ತವರು ಆತನಿಗೆ ನಾಯಿಗಳಿಗೆ ಕಚ್ಚಲು ಮತ್ತು ಅವುಗಳಂತೆ ವರ್ತಿಸಲು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.

ಇದನ್ನೆಲ್ಲಾ ಗಮನಿಸಿ, ಕೊನೆಗೂ ಎಚ್ಚೆತ್ತ ಅಲ್ಲಿನ ನಿವಾಸಿಯೊಬ್ಬರು, ಮಕ್ಕಳಿಗೆ ಸಂಬಂಧಿಸಿದ ಎನ್‌ಜಿಓ ಒಂದಕ್ಕೆ ಕರೆ ಮಾಡಿ, ಬಾಲಕನ ದುಸ್ಥಿತಿಯ ಬಗ್ಗೆ ತಿಳಿಸಿದ್ದರು. ಅದಕ್ಕೆ ಸ್ಪಂದಿಸಿದ ಅಲ್ಲಿನ ಕಾರ್ಯಕರ್ತರು, ಮೇ 4 ಕ್ಕೆ ಆಪಾಟ್‌ರ್ಮೆಂಟ್‌ಗೆ ಭೇಟಿ ನೀಡಿದ್ದು, ಆ ಹುಡುಗನ ವಾಸ ಸ್ಥಾನದಲ್ಲಿನ ಅಸ್ವಚ್ಛತೆಯನ್ನು ಕಂಡು ದಿಗಿಲುಗೊಂಡಿದ್ದರು.

ಸಾಮಾಜಿಕ ಕಾರ್ಯಕರ್ತರು, ಆ ಬಾಲಕನ ಹೆತ್ತವರಿಗೆ ಬುದ್ಧಿಮಾತು ಹೇಳಿದ್ದಾರೆ. ಆದರೆ ಮರುದಿನ ಮತ್ತೆ ಬಾಲಕನ ಸ್ಥಿತಿಯನ್ನು ಪರೀಕ್ಷಿಸಲು ಹೋದ ಅವರಿಗೆ ಶಾಕ್ ಕಾದಿತ್ತು. ಮತ್ತೆ ಆತನನ್ನು ಮನೆಗೆ ಹೊರಗಿನಿಂದ ಬೀಗ ಹಾಕಿ, ಆ ಬಾಲಕನನ್ನು ಮನೆಯೊಳಗೆ ಕೂಡಿ ಹಾಕಲಾಗಿತ್ತು. ಕಿಟಕಿಯಿಂದ ಒಳಗೆ ಇಣುಕಿ ನೋಡಿದಾಗ, ಆತ ನಾಯಿಗಳ ಜೊತೆ ಇದ್ದ.

ಈ ಕುರಿತು, ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆದರೆ ಆ ಮಗುವನ್ನು ರಕ್ಷಿಸುವುದು ಸುಲಭದ ಕೆಲಸವಾಗಿರಲಿಲ್ಲ. ಜೊತೆಗಿದ್ದ ನಾಯಿಗಳು, ಆಕ್ರಮಣ ಮಾಡುವ ಸಾಧ್ಯತೆ ಇತ್ತು. “ಮಗುವನ್ನು ರಕ್ಷಿಸಲು ಪೊಲೀಸರಿಗೆ ನಿಜಕ್ಕೂ ಕಷ್ಟವಾಗಿತ್ತು. ಎಲ್ಲಾ ನಾಯಿಗಳು ಬೀದಿ ನಾಯಿಗಳಾಗಿದ್ದವು ಮತ್ತು ಅವುಗಳಿಗೆ ಸ್ಟೆರಲೈಸ್ ಮಾಡಿರಲಿಲ್ಲ. ನಾಯಿಗಳನ್ನು ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿ ಇಡುವುದು ಕೂಡ ಪ್ರಾಣಿ ಹಿಂಸೆಗೆ ಸಮ” ಎಂದು ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಸರ್ದಾರ್ ಪಾಟೀಲ್ ಹೇಳಿದರು.

ಅಷ್ಟು ನಾಯಿಗಳೊಂದಿಗೆ ಇದ್ದೂ ಇದ್ದೂ 11 ವರ್ಷದ ಬಾಲಕನ ವರ್ತನೆ ಪ್ರಾಣಿಗಳ ರೀತಿಯಂತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆ ಹುಡುಗನನ್ನು ಮಕ್ಕಳ ಪಾಲನಾ ಗೃಹಕ್ಕೆ ಸೇರಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

Leave A Reply

Your email address will not be published.