ಧರ್ಮಸ್ಥಳದ ಎಲ್ಲಾ ಲಾಡ್ಜ್ ಸೇರಿದಂತೆ 15 ಸಾವಿರ ಲಾಡ್ಜ್ ಜಾಲಾಡಿದರೂ ಬಿಲದೊಳಗೆ ಅಡಗಿ ಕುಳಿತ ಆಸಿಡ್ ನಾಗ !! | ಕೈಯಲ್ಲಿದ್ದ 1 ಲಕ್ಷ ಹಣ ಖರ್ಚಾಗುವವರೆಗೂ ಕಾಯುತ್ತಿದ್ದಾರಾ ಪೊಲೀಸರು !!?

ಈತ ಸದ್ಯಕ್ಕೆ ಇಡೀ ರಾಜ್ಯದ ಪೊಲೀಸರಿಗೆ ಒಂದು ಸಣ್ಣ  ಚಳ್ಳೆಹಣ್ಣು ಚೂರೂ ಸಿಗದಂತೆ ನಿಗೂಢವಾಗಿ ಅಡಗಿಕೊಂಡಿರುವ ಕಿಲಾಡಿ ಕ್ರಿಮಿನಲ್. ಮೊನ್ನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಒನ್ ವೇ ಲವ್ ನ ಪ್ರೇಯಸಿ ಯುವತಿಯ ಮೇಲೆ ಆಸಿಡ್ ಚಿಮ್ಮಿಸಿ ಪೈಶಾಚಿಕ ಕೃತ್ಯ ಮೆರೆದಿದ್ದ ನಾಗೇಶ ಪೊಲೀಸರಿಗೆ ಇನ್ನೂ ಸಿಗದೆ ತಲೆಮರೆಸಿಕೊಂಡಿದ್ದಾನೆ. ರಾಜ್ಯದ ಮೂಲೆ ಮೂಲೆ ಹುಡುಕಿದರೂ ಈತನ ಪತ್ತೆಯಿಲ್ಲ. ಪುಣ್ಯ ಕ್ಷೇತ್ರ ಧರ್ಮಸ್ಥಳದ ಎಲ್ಲಾ ಲಾಡ್ಜ್ ನಿಂದ ಹಿಡಿದು ರಾಜ್ಯದ ಬರೋಬ್ಬರಿ 15 ಸಾವಿರ ಲಾಡ್ಜ್ ಗಳನ್ನು ತಡಕಾಡಿದರೂ ಯಾರ ಕಣ್ಣಿಗೂ ಈ ಆಸಾಮಿ ಬಿದ್ದಿಲ್ಲ. ಅಷ್ಟೇ ಅಲ್ಲ, ಕಿಂಚಿತ್ ಡೌಟ್ ಅನ್ನು ಕೂಡಾ ಬಿಟ್ಟು ಕೊಡದೆ ಮಾಯಾವಿಯ ಥರ ಅದೆಲ್ಲಿಗೋ ಹೊರಟು ಹೋಗಿದ್ದಾನೆ ಆತ.

ಹೌದು. ಆಸಿಡ್ ನಾಗನ ಪತ್ತೆಗೆ ಪೊಲೀಸರು ಏನೇನೆಲ್ಲಾ ಜಾಲ ಬೀಸಿ, ಹರಸಾಹಸ ಪಡುತ್ತಿದ್ದು, ರಾಜ್ಯ ಹೊರ ರಾಜ್ಯಗಳಲ್ಲೂ ತೀವ್ರ ಹುಡುಕಾಟ ನಡೆಸ್ತಿದ್ದಾರೆ. ಅತೀವ ದೈವ ಭಕ್ತನಾಗಿದ್ದ ಪರಮ ಪಾಪಿ ನಾಗೇಶ, ಧರ್ಮಸ್ಥಳ ಮತ್ತು ತಿರುಪತಿಗೆ ನಿರಂತರವಾಗಿ ಹೋಗಿ ಬರ್ತಿದ್ದ. ಅಲ್ಲೇ ಅಡಗಿ ಕುಳಿತಿರಬಹುದು ಎಂದು ಶಂಕಿಸಿದ್ದ ಪೊಲೀಸರು, ತಿರುಪತಿ ಸುತ್ತಮುತ್ತಲಿದ್ದ 4 ಸಾವಿರ ಲಾಡ್ಜ್ ಗಳ ಮೆಟ್ಟಲು ಹತ್ತಿ ಇಳಿದಿದ್ದೆ ಬಂತು. ಧರ್ಮಸ್ಥಳದ ಅಷ್ಟೂ ಲಾಡ್ಜ್ ಕೂಡ ಬಿಡದೆ ಜಾಲಾಟ ನಡೆಸಿದ್ದಾರೆ. ಕೊಯಮುತ್ತೂರಿನ ಕಡೆಗೂ ಪೋಲೀಸರು ಹೋಗಿ ಖಾಲಿ ಕೈಯಲ್ಲಿ ಬಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆತನ ಒಂದೇ ಒಂದು ಸುಳಿವು ಕೂಡ ಸಿಗ್ತಾ ಇಲ್ಲ. ಉತ್ತರ ಭಾರತದ ಪವಿತ್ರ ಕ್ಷೇತ್ರಗಳತ್ತ ಕೂಡಾ ಪೋಲೀಸರು ಕಣ್ಣು ಹಾಯಿಸಿರುವ ಖಾಕಿ ಅಲ್ಲಿಗೂ ತಂಡ ಕಳುಹಿಸಿ ಹುಡುಕಾಟ ನಡೆಸ್ತಿದ್ದಾರೆ. ಆದರೆ ಈ ಆಸಾಮಿ ತನ್ನ ಗುಪ್ತ ನಡೆ ಬಿಟ್ಟು ಕೊಟ್ಟಿಲ್ಲ.

ಅದು ಏಪ್ರಿಲ್ 28 ರ ಬೆಳಗ್ಗೆ 8.30 ರ ಸಮಯ. ಬೆಂಗಳೂರಿನ ಸುಂಕದಕಟ್ಟೆಯ ಮುತ್ತೂಟ್ ಮಿನಿ ಫೈನಾನ್ಸ್ ಕಚೇರಿ ಎದುರು ಹೀನಾತಿ ಹೀನ ಕೃತ್ಯವೊಂದು ಅಂದು ನಡೆದುಹೋಗಿತ್ತು. ಆತನ ಕೈಯಿಂದ ಬಿರಡೆ ಬಿಚ್ಚಿಕೊಂಡ ಆಸಿಡ್ ಬಾಟಲಿಯಿಂದ ಯುವತಿಯೊಬ್ಬಳ ಮೇಲೆ ಆಸಿಡ್ ಎರಚಲಾಗಿತ್ತು. ಈ ಕೃತ್ಯ ಎಸಗಿದ ಪಾಪಿ ನಾಗೇಶ ಪರಾರಿಯಾಗಿದ್ದು, ಪೊಲೀಸರು ಇನ್ನಿಲ್ಲದಂತೆ ಆತನ ಹುಡುಕಾಟ ನಡೆಸ್ತಿದ್ದಾರೆ. ಮತ್ತೊಂದು ಕಡೆ ಅದೇ ಆಸಿಡ್ ನಾಗೇಶ ಈ ಹಿಂದೆ ಕೂಡ ಮತ್ತೊಂದು ಯುವತಿಗೆ ಕಾಟ ಕೊಟ್ಟಿದ್ದ ಅನ್ನೋ ಸಂಗತಿ ತನಿಖೆಯಲ್ಲಿ ಬಹಿರಂಗಗೊಂಡಿದೆ ಎನ್ನಲಾಗಿದೆ.

ಆಸಿಡ್ ಎರಚಿದ್ದ ನಾಗನದ್ದು ನಿಜವಾದ ಲವ್ ಅಂತೂ ಅಲ್ಲ. ಕಾರಣ ಚಂದದ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಹಿಂದೆ ಬೀಳುತ್ತಿದ್ದ. ಹುಟ್ಟೂರು ಕೊಡಿಯಾಲಂನಲ್ಲಿ ಎರಡು ವರ್ಷದ ಹಿಂದೆ ಯುವತಿಯೋರ್ವಳಿಗೆ ತನ್ನನ್ನು ಪ್ರೀತಿಸುವಂತೆ ಕಾಟ ಕೊಟ್ಟಿದ್ದ. ಆತನ ಕಾಟ ತಾಳಲಾರದೇ ಯುವತಿ ಪೋಷಕರಿಗೆ ವಿಚಾರ ತಿಳಿಸಿದ್ದಳು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದಂತೆ ಬೆಂಗಳೂರಿಗೆ ಬಂದುಬಿಟ್ಟಿದ್ದ.

ಆತ ಎಷ್ಟರ ಮಟ್ಟಿಗೆ ಕಿಲಾಡಿ ಎಂದರೆ ಅವನು ಯಾವುದೇ ಗ್ಯಾಜೆಟ್ ಕೂಡಾ ಬಳಸ್ತಿಲ್ಲ. ಮೊಬೈಲ್ ಬಿಡಿ ಎಟಿಎಂ ಕೂಡಾ ಮುಟ್ಟುತ್ತಿಲ್ಲ. ಸ್ನೇಹಿತರು, ಕುಟುಂಬಸ್ಥರು ಯಾರ ಸಂಪರ್ಕ ಕೂಡ ಇಲ್ಲದೆ ಬದುಕುತ್ತಿರುವ ಆತನನ್ನು ಸದ್ಯಕ್ಕೆ ಹಿಡಿಯಲಾಗದೆ ಕೈ ಚೆಲ್ಲಿದಂತೆ ಕೂತಿದ್ದಾರೆ ಪೋಲೀಸರು. ಯಾರಾದರು ಒಬ್ಬರ ಸಂಪರ್ಕಕ್ಕೆ ಬರುವರೆಗೂ ಆತನ ಪತ್ತೆ ಕಷ್ಟವಾಗಿದೆ.

ಇನ್ನು ಈ ಕೇಸ್ ಸಂಬಂಧ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಆರೋಪಿ ಪತ್ತೆಗೆ ಬಹಳ ಪ್ರಯತ್ನ ನಡೀತಿದೆ. ಆರೋಪಿ ಪ್ಲಾನ್ ಮಾಡಿಕೊಂಡು ಕೃತ್ಯ ಎಸಗಿದ್ದರಿಂದ ಪತ್ತೆ ಮಾಡೋದು ಕಷ್ಟವಾಗಿದೆ. ಆದರೆ ಆತ ಬಹಳ ಸಮಯ ತಪ್ಪಿಸಿಕೊಳ್ಳಲು ಆಗಲ್ಲ, ಸಿಕ್ಕೇ ಸಿಗುತ್ತಾನೆ ಎಂದಿದ್ದಾರೆ. ತಾನು ಆಸಿಡ್ ಚೆಲ್ಲಿ ಎಸ್ಕೇಪ್ ಆಗುವಾಗ ತನ್ನೊಂದಿಗೆ ಒಯ್ದ 1 ಲಕ್ಷ ರೂಪಾಯಿಗಳಿಂದಲೆ ಆತ ಈಗ ಬದುಕುತ್ತಿರಬೇಕು. ಅದು ಪೂರ್ತಿ ಕರಗಲು ಹೆಚ್ಚೆಂದರೆ 3 ತಿಂಗಳು. ದುಡ್ಡು ಖಾಲಿ ಆಗುತ್ತಿದ್ದಂತೆ ಮತ್ತೆ ನಾಗ ಬಿಲ ಬಿಟ್ಟು ಹೊರಬರುತ್ತದೆ. ಬಲೆ ಹರವಿ ಪೊಲೀಸರು ಕಾಯುತ್ತಿದ್ದಾರೆ. ಅತ್ತ ಯುವತಿ ಕೋರಮಂಗಲದ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡು ಕೊಂಚ ಚೇತರಿಸಿಕೊಳ್ಳುತ್ತಿದ್ದಾಳೆ. ಮತ್ತೊಂದೆಡೆ ನಾಗನ ಹುಡುಕಾಟವನ್ನು ಕೂಡ ಪೊಲೀಸರು ಹೆಚ್ಚಿಸಿದ್ದಾರೆ. ಆದರೂ ಕೃತ್ಯ ನಡೆದು 15 ದಿನ ಕಳೆದರೂ ಆತ ಪೊಲೀಸರ ಬಲೆಗೆ ಸಿಗದಿರುವುದು ರಾಜ್ಯ ಪೊಲೀಸ್ ಇಲಾಖೆಗೆ ಬಹಳ ಮುಜುಗರವನ್ನುಂಟು ಮಾಡಿದೆ ಎಂದೇ ಹೇಳಬೇಕು.

Leave A Reply

Your email address will not be published.